Bengaluru: ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿದ್ದ ಬಂದ್ ವಾಪಸ್, ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಆ.10ರ ಗಡುವು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿದ ಜುಲೈ 27 ರಂದು ಖಾಸಗಿ ಸಾರಿಗೆ ಒಕ್ಕೂಟವು ಬಂದ್ಗೆ ಕರೆ ನೀಡಿತ್ತು. ಇದೀಗ ಸಾರಿಗೆ ಸಚಿವ ಸಭೆ ನಂತರ ಬಂದ್ ಅನ್ನು ವಾಪಸ್ ಪಡೆಯಲಾಗಿದೆ.
ಬೆಂಗಳೂರು, ಜುಲೈ 24: ಬೇಡಿಕೆ ಈಡೇರಿಕೆಯ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ಭರವಸೆ ನೀಡಿದ ಹಿನ್ನೆಲೆ ಜುಲೈ 27 ರಂದು ಕರೆ ನೀಡಿದ್ದ ಬೆಂಗಳೂರು ಬಂದ್ (Bengaluru Bandh) ಅನ್ನು ಖಾಸಗಿ ಸಾರಿಗೆ ಒಕ್ಕೂಟ ವಾಪಸ್ ಪಡೆದಿದೆ. ಈ ಬಗ್ಗೆ ಮಾಹಿತಿ ನೀಡಿದ ಒಕ್ಕೂಟದ ಮುಖಂಡ ನಟರಾಜ ಶರ್ಮಾ, ನಮ್ಮ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಆಗಸ್ಟ್ 10ರ ವರೆಗೆ ಕಾಲಾವಕಾಶ ನೀಡಲಾಗಿದೆ. ಬೇಡಿಕೆ ಈಡೇರಿಸಿದ್ದರೆ ಮುಂದಿನ ನಡೆ ನಿರ್ಧರಿಸುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿ ನಂತರ ಖಾಸಗಿ ಬಸ್, ಆಟೋ ಟ್ಯಾಕ್ಸಿ ಮಾಲೀಕರಿಗೆ ಭಾರೀ ಹೊಡೆತ ನೀಡಿದೆ. ಹೀಗಾಗಿ ಯೋಜನೆ ಸ್ಥಗಿತಕ್ಕೆ ಖಾಸಗಿ ಸಾರಿಗೆ ಒಕ್ಕೂಟ ಆಗ್ರಹಿಸುತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆಟೋ ಚಾಲಕರ ಸಮಸ್ಯೆ ಬೇರೆ ಇದೆ, ಟ್ಯಾಕ್ಸಿ ಸಮಸ್ಯೆಯೂ ಇದೆ. ಶಕ್ತಿಯೋಜನೆ ಕುರಿತು ನಾನೊಬ್ಬನೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಬೇಕು ಎಂದರು.
ಬಂದ್ಗೆ ಕರೆ ನೀಡಿದ ಹಿನ್ನೆಲೆ ಇಂದು ಬೆಂಗಳೂರಿನ ಶಾಂತಿನಗರದ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ಖಾಸಗಿ ಸಾರಿಗೆ ಒಕ್ಕೂಟದ ಜೊತೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಭೆ ನಡೆಸಿದರು. ಬೆಳಗ್ಗೆ ನಡೆದಿದ್ದ ಸಭೆಯಲ್ಲಿ ಒಮ್ಮತ ಮೂಡಿ ಬಾರದ ಹಿನ್ನೆಲೆ ಸಭೆ ವಿಫಲಗೊಂಡಿತ್ತು. ಹೀಗಾಗಿ ಮಧ್ಯಾಹ್ನದ ನಂತರ ಮತ್ತೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಒಕ್ಕೂಟಕ್ಕೆ ಬೇಡಿಕೆ ಈಡೇರಿಸುವ ಬಗ್ಗೆ ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ. ಹೀಗಾಗಿ ಸಂಧಾನ ಸಭೆ ಯಶಸ್ವಿಯಾಗಿದ್ದು, ಬಂದ್ ವಾಪಸ್ ಪಡೆಯಲಾಗಿದೆ.
ಇದನ್ನೂ ಓದಿ: Bengaluru Bandh: ಸಚಿವ ರಾಮಲಿಂಗಾರೆಡ್ಡಿ ಕರೆದ ಸಭೆ ಕಾದಾಟದಲ್ಲಿ ಪರ್ಯಾವಸನಗೊಂಡಿತು!
ರ್ಯಾಪಿಡೋ ಬೈಕ್ ಟ್ಯಾಕ್ಸಿಗೆ ನಿರ್ಬಂಧ
ಸಭೆಯಲ್ಲಿ ರ್ಯಾಪಿಡೋ ಸೇವೆ ಸ್ಥಗಿತಕ್ಕೆ ಒಕ್ಕೂಟವು ಮನವಿ ಮಾಡಿತ್ತು. ಈ ಬಗ್ಗೆ ಭರವಸೆ ನೀಡಿದ ರಾಮಲಿಂಗಾರೆಡ್ಡಿ, ರ್ಯಾಪಿಡೋ ಬೈಕ್ ಟ್ಯಾಕ್ಸಿಗೆ ನಿರ್ಬಂಧ ಹೇರುವುದು ನನ್ನ ಜವಾಬ್ದಾರಿ. ರ್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ಖಂಡಿತಾ ನಿಷೇಧ ಮಾಡುತ್ತೇವೆ ಎಂದರು.
50000 ಓಲಾ, ಉಬರ್ ಕ್ಯಾಬ್ಗಳ ಪೈಕಿ 25,000 ಕ್ಯಾಬ್ ಕಪ್ಪು ಪಟ್ಟಿಗೆ ಸೇರಿಸಿಲಾಗಿದ್ದು, ಈ ಪಟ್ಟಿಯನ್ನು ಕೈಬಿಡುವಂತೆ ಚಾಲಕರ ಒಕ್ಕೂಟದ ಸದಸ್ಯ ನಾರಾಯಣಸ್ವಾಮಿ ಅವರು ಸಭೆಯಲ್ಲಿ ಮನವಿ ಮಾಡಿದರು. ವೈಟ್ಬೋರ್ಡ್ ಕ್ಯಾಬ್ಗಳು ಅನಧಿಕೃತ ಎಂದು ಗೊತ್ತಿದ್ದರೂ ಏರ್ಪೋರ್ಟ್ನಲ್ಲಿ ಹಳದಿ ಬೋರ್ಡ್ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಲಾಗುತ್ತಿದೆ. ಇದನ್ನು ರದ್ದುಗೊಳಿಸಬೇಕು. ಮಾತ್ರವಲ್ಲದೆ, ಏರ್ಪೋರ್ಟ್ನಲ್ಲಿ ವೈಟ್ಬೋರ್ಡ್ ಟ್ಯಾಕ್ಸಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒಕ್ಕೂಟವು ಮನವಿ ಮಾಡಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:33 pm, Mon, 24 July 23