Namma Yatri: ಬೆಂಗಳೂರು ಆಟೋ ಚಾಲಕರಿಂದ ರಾಜ್ಯೋತ್ಸವದ ಗಿಫ್ಟ್​: ಇಂದಿನಿಂದ ‘ನಮ್ಮ ಯಾತ್ರಿ’ ಆ್ಯಪ್ ಆರಂಭ

Kannada Rajyotsava: ಬೆಂಗಳೂರು ಆಟೋ ಚಾಲಕರಿಂದ ಈ ಹೊಸ ಪ್ರಯತ್ನ ಶುರುವಾಗಿದೆ. ‘ನಮ್ಮ ಯಾತ್ರಿ’ ಆ್ಯಪ್ ಮೂಲಕ ಆಟೋ ಸೇವೆ ಇನ್ಮುಂದೆ ಲಭ್ಯ. ಸರ್ಕಾರ ನಿಗದಿ ಮಾಡಿರುವ ದರದಲ್ಲಿ ಆಟೋ ಯೂನಿಯನ್​ನಿಂದ ‘ನಮ್ಮ ಯಾತ್ರಿ’ ಆ್ಯಪ್ ಸೇವೆ ಪ್ರಯಾಣಿಕರಿಗೆ ಸಿಗಲಿದೆ.

Namma Yatri: ಬೆಂಗಳೂರು ಆಟೋ ಚಾಲಕರಿಂದ ರಾಜ್ಯೋತ್ಸವದ ಗಿಫ್ಟ್​: ಇಂದಿನಿಂದ ‘ನಮ್ಮ ಯಾತ್ರಿ’ ಆ್ಯಪ್ ಆರಂಭ
ರಾಜ್ಯೋತ್ಸವಕ್ಕೆ ಆಟೋ ಚಾಲಕರಿಂದ ಗಿಫ್ಟ್​: ನಮ್ಮ ಯಾತ್ರಿ ಆ್ಯಪ್ ಆರಂಭ
Updated By: ಸಾಧು ಶ್ರೀನಾಥ್​

Updated on: Nov 01, 2022 | 11:43 AM

ಬೆಂಗಳೂರು: ಸಿಲಿಕಾನ್ ಸಿಟಿ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಹೆಸರಿಗೆ, ಅವಶ್ಯಕತೆಗೆ ತಕ್ಕಂತೆ ಆ್ಯಪ್ (App) ಗಳದ್ದೇ ಕಾರುಬಾರು. ಚಿಕ್ಕದಾಗಿ ಕೊತ್ತುಂಬರಿ ಖರೀದಿಸುವುದರಿಂದ ಹಿಡಿದು ಓಡಾಟಕ್ಕೆ ಅಂತಾ ಟ್ಯಾಕ್ಸಿ ವಾಹನಗಳವರೆಗೂ ಈ ಆ್ಯಪ್ ಗಳು ತನ್ನ ಅಸ್ತಿತ್ವನ್ನು ಸಾಬೀತುಗೊಳಿಸುತ್ತಿವೆ. ಹಾಗೆಯೇ ಈ ಆ್ಯಪ್ ಒಂದಕ್ಕೊಂದು ಪರಸ್ಪರ ಪೈಪೋಟಿಗೂ ಬಿದ್ದು, ಜನತೆಗೆ ಒಳ್ಳೆಯ ಸೇವೆಯನ್ನೂ ನೀಡತೊಡಗಿದೆ. ಈ ಮಧ್ಯೆ ಒಂದುಕಡೆಯಿಂದ ಗ್ರಾಹಕರನ್ನು ಸುಲಿಗೆ ಮಾಡುವುದು, ಮತ್ತೊಂದು ಕಡೆ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುವುದನ್ನು ಹಗಲು ದರೋಡೆಯಾಗಿ ಮಾಡಿಕೊಂಡು ಬಂದಿದ್ದ ಓಲಾ, ಉಬರ್ ಮತ್ತಿತರ ಟ್ಯಾಕ್ಸಿ​ ಕಂಪನಿಗಳಿಗೆ ಸರ್ಕಾರ ಇತ್ತೀಚೆಗೆ ಬಿಸಿಮುಟ್ಟಿಸಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಮಾಮೂಲಿ ಆಟೋ ಚಾಲಕರು ಓಲಾ, ಉಬರ್​ ಕಂಪನಿಗಳಿಗೆ ಪ್ರತಿಸ್ಪರ್ಧೆ ನೀಡಲು ಮುಂದಾಗಿದ್ದಾರೆ. ಕೆಲವು ಆಟೋ ಚಾಲಕರು ಇದೀಗ ‘ನಮ್ಮ ಯಾತ್ರಿ’ ಎಂಬ ಆ್ಯಪ್ ಆಧಾರಿತ ಆಟೋ ಸೇವೆಯನ್ನು ರಾಜ್ಯೋತ್ಸವದ ದಿನವಾದ ಇಂದಿನಿಂದ ಆರಂಭಿಸಿಕೊಂಡು ಬಂದಿದ್ದಾರೆ. ಇದು ಕನ್ನಡ ರಾಜ್ಯೋತ್ಸವದ (Kannada Rajyotsava) ದಿನ ಚಾಲನೆ ಪಡೆದಿರುವುದು ವಿಶೇಷವಾಗಿದೆ.

ವಾಸ್ತವವಾಗಿ ಓಲಾ, ಉಬರ್ ಟ್ಯಾಕ್ಸಿ ಸಂಸ್ಥೆಗಳು ಆಟೋ ಚಾಲಕರು ಮತ್ತು ಪ್ರಯಾಣಿಕರಿಗೂ ವಂಚಿಸುತ್ತಿದ್ದರು. ಇದರಿಂದ ರೋಸಿ ಹೋಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಌಪ್ ಗಳಿಗೆ ಕೊರತೆಯೇನೂ ಇಲ್ಲ. ಜನರೂ ಅದಕ್ಕೆ ಒಗ್ಗಿಕೊಂಡಿದ್ದಾರೆ ಎಂದು ಪರಿಗಣಿಸಿ ಆಟೋ ಚಾಲಕರಿಂದ ಈ ಹೊಸ ಪ್ರಯತ್ನ ಶುರುವಾಗಿದೆ. ‘ನಮ್ಮ ಯಾತ್ರಿ’ ಆ್ಯಪ್ ಮೂಲಕ ಆಟೋ ಯೂನಿಯನ್​ನಿಂದ  (Autorickshaw Drivers’ Union ARDU)  ಸೇವೆ ಇನ್ಮುಂದೆ ಲಭ್ಯವಾಗಲಿದೆ. ಸರ್ಕಾರ ನಿಗದಿ ಮಾಡಿರುವ ದರದಲ್ಲಿ ಆಟೋ ಯೂನಿಯನ್​ನಿಂದ ‘ನಮ್ಮ ಯಾತ್ರಿ’ ಆ್ಯಪ್ ಸೇವೆ ಪ್ರಯಾಣಿಕರಿಗೆ ಸಿಗಲಿದೆ.

ಆಟೋ ಪ್ರಯಾಣ ದರ ಹೀಗಿದೆ:

2 ಕಿ.ಮೀ. ಗೆ 30 ರೂ, ಬುಕಿಂಗ್​ ಚಾರ್ಜ್ 10 ರೂ. ಸೇರಿದಂತೆ 40 ರೂಪಾಯಿಯಷ್ಟಿದೆ. ಅಲ್ಲಿಂದ ಮುಂದಕ್ಕೆ, 2 ಕಿ.ಮೀ. ಗಿಂತ ಹೆಚ್ಚು ಚಲಿಸಿದರೆ ಪ್ರತಿ ಕಿ.ಮೀ. 15 ರೂಪಾಯಿ ನಿಗದಿ ಪಡಿಸಲಾಗಿದೆ. ಸುಮಾರು 16 ಸಾವಿರ ಆಟೋ ಚಾಲಕರು ಈ ‘ನಮ್ಮ ಯಾತ್ರಿ’ ಆ್ಯಪ್ ಗೆ ಅಂಕಿತರಾಗಿದ್ದಾರೆ. ಈಗಾಗಲೇ 10,000ಕ್ಕೂ ಹೆಚ್ಚು ಜನ ಆ್ಯಪ್ ಡೌನ್​ಲೋಡ್​​ ​ಮಾಡಿಕೊಂಡಿದ್ದಾರೆ.