ಕ್ರಮ ಜರುಗಿಸಿದ್ದ ಪೊಲೀಸರ ಮೇಲೆಯೇ ಕಣ್ಣಿಟ್ಟ PFI, ಎಚ್ಚರಿಕೆಯಿಂದ ಇರುವಂತೆ ರಾಜ್ಯ ಪೊಲೀಸರಿಗೆ ಐಬಿ ಸೂಚನೆ
NIA: ಎನ್ಐಎ ತನಿಖೆ ವೇಳೆ ಸಿಕ್ಕ ಮಾಹಿತಿಯ ಅನ್ವಯ ಐಬಿ ಇಲಾಖೆಯಿಂದ ಈ ಸೂಚನೆ ಬಂದಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಪೊಲೀಸರಿಗೆ ಕೇಂದ್ರ ಗುಪ್ತಚರ ಇಲಾಖೆ ಈ ಸೂಚನೆ ರವಾನಿಸಿದೆ.
ಬೆಂಗಳೂರು: ದೇಶಾದ್ಯಂತ ಪಿಎಫ್ಐ ಕಾರ್ಯಕರ್ತರ ಬಂಧನ ಪ್ರಕರಣ ದೊಡ್ಡ ಮಟ್ಟದ ಸಂಚಲನವನ್ನೇ ಉಂಟುಮಾಡಿದೆ. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ PFI ಕಾರ್ಯಕರ್ತರಿಗೆ ಸರ್ಕಾರ ಅದರಲ್ಲೂ ಪೊಲೀಸರು ಬಿಸಿಮುಟ್ಟಿಸಿದ್ದರು. ಆದರೆ ಇದೀಗ PFI ಮೇಲೆ ಕ್ರಮಕೈಗೊಂಡಿದ್ದ ಪೊಲೀಸ್ ಅಧಿಕಾರಿಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಪೊಲೀಸರನ್ನೇ ಟಾರ್ಗೆಟ್ ಮಾಡಿದ್ದ ಪಿಎಫ್ಐ ಸಂಘಟನೆ ಇದೀಗ ರಾಜ್ಯದಲ್ಲೂ ಪೊಲೀಸ್ ಅಧಿಕಾರಿಗಳ ಮೇಲೆ (Karnataka police) ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ, ಎಚ್ಚರಿಕೆಯಿಂದ ಇರುವಂತೆ ರಾಜ್ಯ ಪೊಲೀಸರಿಗೆ ಕೇಂದ್ರ ಗುಪ್ತಚರ ಇಲಾಖೆಯಿಂದ (Intelligence Bureau -ಐಬಿ) ಸೂಚನೆ ಬಂದಿದೆ.
ಎನ್ಐಎ (NIA) ತನಿಖೆ ವೇಳೆ ಸಿಕ್ಕ ಮಾಹಿತಿಯ ಅನ್ವಯ ಐಬಿ ಇಲಾಖೆಯಿಂದ ಈ ಸೂಚನೆ ಬಂದಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಪೊಲೀಸರಿಗೆ ಕೇಂದ್ರ ಗುಪ್ತಚರ ಇಲಾಖೆ ಈ ಸೂಚನೆ ರವಾನಿಸಿದೆ. PFI ನಿಷೇಧದ ಬಳಿಕವೂ ತನಿಖೆ ನಡೆಸಿರುವ ರಾಜ್ಯ ಪೊಲೀಸರು ಕೆ.ಜಿ. ಹಳ್ಳಿ ಪ್ರಕರಣದಲ್ಲಿ PFI ಸದಸ್ಯರನ್ನು ಬಂಧಿಸಿದ್ದರು.
ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರು ತನಿಖೆಯಲ್ಲಿ ಪಾಲ್ಗೊಂಡ ಅಧಿಕಾರಿಗಳ ಮೇಲೆ ಪಿಎಫ್ಐ ಕಣ್ಣಿಟ್ಟಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳ ಚಲನವಲನಗಳ ಮೇಲೆ ಪಿಎಫ್ಐ ಕಣ್ಣಿಟ್ಟು ವಾಚ್ ಮಾಡ್ತಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮ ವಹಿಸುವಂತೆ ಐಬಿಯಿಂದ ಸಂದೇಶ ಬಂದಿದೆ ಎಂದು ಟಿವಿ 9 ಗೆ ರಾಜ್ಯ ಗೃಹ ಇಲಾಖೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.