ಬೆಂಗಳೂರು, ಅಕ್ಟೋಬರ್ 23: ಪಾರ್ಕ್ ಮಾಡಿದ್ದ ಬಿಎಂಡಬ್ಲ್ಯು ಕಾರಿನಿಂದ (BMW Car) ಕಿಟಕಿಯ ಗಾಜು ಒಡೆದು 14 ಲಕ್ಷ ರೂಪಾಯಿ ನಗದು ದೋಚಿಕೊಂಡು ಇಬ್ಬರು ವ್ಯಕ್ತಿಗಳು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ (Bangalore) ನಡೆದಿದೆ. ಕಾರಿನಿಂದ ನಗದು ಕದ್ದು ಕಳ್ಳರು ಪರಾರಿಯಾಗುತ್ತಿರುವ ದೃಶ್ಯ ಕಾರು ನಿಲ್ಲಿಸಿದ್ದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ (CCTV Camera) ಸೆರೆಯಾಗಿದೆ. ಕಳವು ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸೋಂಪುರದ ಸಬ್ ರಿಜಿಸ್ಟರ್ ಕಚೇರಿ ಮುಂಭಾಗ ಕಾರು ನಿಲ್ಲಿಸಲಾಗಿತ್ತು. ವಣಕನಹಳ್ಳಿಯ ಬಾಬು ಎಂಬುವವರಿಗೆ ಸೇರಿದ ಕಾರು ಇದೆಂಬುದು ತಿಳಿದುಬಂದಿದೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿರುವ ಪ್ರಕಾರ, ಒಂದು ಕೋಟಿ ರೂಪಾಯಿಗೂ ಹೆಚ್ಚು ಬೆಲೆಯ ಬಿಎಂಡಬ್ಲ್ಯು ಎಕ್ಸ್5 ಸೆಡಾನ್ ಕಾರಿನ ಬಳಿ ಇಬ್ಬರು ಮುಸುಕುಧಾರಿಗಳು ಕಾಣಿಸಿದ್ದಾರೆ. ಗುರುತು ಸಿಗದಂತೆ ಮಾಡಲು ಇಬ್ಬರೂ ಮುಖವಾಡಗಳನ್ನು ಧರಿಸಿದ್ದರು. ಒಬ್ಬ ವ್ಯಕ್ತಿ ಬೈಕಿನಲ್ಲಿದ್ದರೆ, ಮತ್ತೊಬ್ಬರು ಸುತ್ತಲೂ ನೋಡುತ್ತಿದ್ದ. ನಂತರ ಕಾರಿನ ಚಾಲಕನ ಬದಿಯ ಗಾಜನ್ನು ಒಡೆದು ಹಾಕಿದ್ದಾನೆ. ಬಳಿಕ ಕಿಟಕಿಯ ಮೂಲಕ ಕಾರಿನ ಒಳಕ್ಕೆ ತೂರಿದ್ದಾನೆ. ಆತನ ಸಹಚರ ಬೈಕ್ ಸ್ಟಾರ್ಟ್ ಮಾಡಿ ಪರಾರಿಯಾಗಲು ಸನ್ನದ್ಧನಾಗಿದ್ದ.
ಕಾರಿನ ಗಾಜು ಒಡೆದು ಒಳನುಗ್ಗಿದ ವ್ಯಕ್ತಿ ತುಸು ಹೊತ್ತಿನಲ್ಲಿ ಚೀಲವೊಂದನ್ನು ಕೈಯಲ್ಲಿ ಹಿಡಿದುಕೊಂಡು ಹೊರಬರುತ್ತಾನೆ. ತಕ್ಷಣವೇ ಬೈಕ್ ಹತ್ತಿ ಸಹಚರನೊಂದಿಗೆ ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಕಳ್ಳತನ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳರ ಹಾವಳಿ, ದಿನಕ್ಕೆ 10 ಮೊಬೈಲ್ ಕಳ್ಳತನ
ಮನೆ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ಸೋಮವಾರ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಬೈಕ್ಗಳು ಧಗಧಗನೆ ಹೊತ್ತಿ ಉರಿದಿವೆ. ಹಳೆ ವೈಷಮ್ಯಕ್ಕೆ ಸ್ಕೂಟಿ ಹಾಗೂ ಬೈಕ್ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಕೊತ್ತನೂರು ನಿವಾಸಿ ಪುಷ್ಪಾ ಎಂಬುವವರಿಗೆ ಸೇರಿದ ಸ್ಕೂಟಿ ಹಾಗೂ ಬೈಕ್, ನಸುಕಿನ ಜಾವ 3 ಗಂಟೆಗೆ ಬೆಂಕಿಗೆ ಹೊತ್ತಿ ಉರಿದಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Mon, 23 October 23