ಬೆಂಗಳೂರು, ಆಗಸ್ಟ್ 15: ಬೆಂಗಳೂರಿನಲ್ಲಿ ಮಿಸ್ಡ್ ಕಾಲ್ ಕೊಟ್ಟು ಯುವಕರನ್ನು ಬಲೆಗೆ ಬೀಳಿಸಿ ಹನಿಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಸಂಪಿಗೆಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮದುವೆಯಾಗಿ ಮಕ್ಕಳಿದ್ದರೂ ಐಷಾರಾಮಿ ಜೀವನಕ್ಕಾಗಿ ಹನಿಟ್ರ್ಯಾಪ್ ಮಾಡುತ್ತಿದ್ದ ಮಹಿಳೆ ಸೇರಿದಂತೆ ಮೂವರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನಜ್ಮಾ ಕೌಸರ್, ಮಹಮ್ಮದ್ ಆಶೀಕ್, ಖಲೀಲ್ ಬಂಧಿತ ಆರೋಪಿಗಳಾಗಿದ್ದಾರೆ.
ನಜ್ಮಾ ಕೌಸರ್ ಯುವಕರನ್ನು ಗುರಿಯಾಗಿಸಿ ಮಿಸ್ಡ್ ಕಾಲ್ ಕೊಡುತ್ತಿದ್ದಳು. ಬೆಂಗಳೂರಿನ ಯುವಕರನ್ನೇ ಗುರಿಯಾಗಿಸುತ್ತಿದ್ದಳು. ನಂತರ ಅವರು ಕರೆ ಮಾಡಿದಾಗ ಪರಿಚಯ ಮಾಡಿಕೊಂಡು ಹನಿ ಟ್ರ್ಯಾಪ್ ಮಾಡುತ್ತಿದ್ದಳು. ಇವಳ ಕೃತ್ಯದಲ್ಲಿ ಮಹಮ್ಮದ್ ಆಶೀಕ್, ಖಲೀಲ್ ಕೂಡ ಶಾಮೀಲಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಚಯವಾದ ಯುವಕರು ಬೆಂಗಳೂರಿನವರು ಎಂದು ಗೊತ್ತಾಗುತ್ತಿದ್ದಂತೆ ಬಹಳ ಸಲಗೆಯಿಂದ ಮಾತನಾಡುತ್ತಿದ್ದ ನಜ್ಮಾ, ಮೊದಮೊದಲಿಗೆ ಕಷ್ಟ ಸುಖ ಮಾತನಾಡಿಕೊಂಡು ಸಣ್ಣ ಮೊತ್ತದ ಹಣ ಪಡೆಯುತ್ತಿದ್ದಳು. ನಂತರ ಅದನ್ನು ಹಿಂತಿರುಗಿಸುತ್ತಿದ್ದಳು. ಒಂದು ಬಾರಿ ಯುವಕರ ವಿಶ್ವಾಸ ಗಳಿಸಿದ ನಂತರ ಅವರನ್ನು ಖೆಡ್ಡಾಕ್ಕೆ ಕೆಡವಲು ಪ್ಲಾನ್ ಸಿದ್ಧವಾಗುತ್ತಿತ್ತು.
ಪರಿಚಯವಾದ ಯುವಕರನ್ನು ಲೈಂಗಿಕವಾಗಿ ಪ್ರಚೋದನೆಯಾಗುವಂತೆ ಮಾತನಾಡಿ ಬಲೆಗೆ ಬೀಳಿಸುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲ ಬಾ, ಮನೆಯಲ್ಲೇ ಏಕಾಂತದಲ್ಲಿ ಕಾಲ ಕಳೆಯೋಣ ಎಂದು ಬಲೆ ಬೀಸುತ್ತಿದ್ದಳು. ನಂಬಿ ಬಂದ ಯುವಕರನ್ನು ಸೀದಾ ಮನೆಯ ಬೆಡ್ ರೂಂಗೆ ಕರೆದೊಯ್ಯುತ್ತಿದ್ದಳು.
ನಜ್ಮಾ ಕೋರಿಕೆಯಂತೆ ಬೆಡ್ ರೂಂಗೆ ಯುವಕರು ತೆರಳುತ್ತಿದ್ದಂತೆಯೇ ಆಕೆಯ ಗ್ಯಾಂಗ್ ಎಂಟ್ರಿಯಾಗುತ್ತಿತ್ತು. ‘ಯಾರೋ ನೀನು? ಏಕೆ ಬಂದಿದ್ದೀಯಾ? ರೇಪ್ ಮಾಡಲು ಬಂದಿದ್ದಿಯಾ?’ ಎಂದು ಅವಾಜ್ ಹಾಕ್ತಿದ್ದ ಗ್ಯಾಂಗ್ ಹಣ ಕೊಡುವಂತೆ ಪೀಡಿಸುತ್ತು. ಹಣ ಕೊಡದಿದ್ದರೆ ರೇಪ್ ಕೇಸ್ ಹಾಕಿಸುತ್ತೇವೆಂದು ಧಮ್ಕಿ ಹಾಕಿ ವಸೂಲಿ ಮಾಡುತ್ತಿದ್ದರು.
ಕಳೆದ ವಾರ ಕೊರಿಯರ್ ಬಾಯ್ ಯುವಕನೊಬ್ಬನಿಗೆ ಗ್ಯಾಂಗ್ ಹನಿಟ್ರ್ಯಾಪ್ ಮಾಡಿತ್ತು. ಸಂತ್ರಸ್ತ ಯುವಕ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ಕೊಟ್ಟಿದ್ದ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರತಿ ದಿನ ರಸ್ತೆಗಿಳಿಯುತ್ತಿವೆ 2000 ಹೊಸ ವಾಹನ! ವಾಯು ಮಾಲಿನ್ಯದಲ್ಲಿ ದೆಹಲಿಯನ್ನೂ ಮೀರಿಸುವ ಆತಂಕ
ಆತ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ನಜ್ಮಾ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಬಲೆಗೆ ಬೀಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ