ಬೆಂಗಳೂರು ವೈದ್ಯರ ಮತ್ತೊಂದು ಸಾಧನೆ; 18 ವರ್ಷದ ಹಿಂದೆ ಯೆಮನ್ ಯುವಕನ ಕಿವಿಯಲ್ಲಿ ಹೋಗಿದ್ದ ಗುಂಡು ಹೊರ ತೆಗೆದ ಡಾಕ್ಟರ್ಸ್
ರಾಜಧಾನಿ ಬೆಂಗಳೂರು ಹೆಲ್ತ್ ಡೆಸ್ಟಿನೇಷನ್ ಆಗಿದೆ. ವಿದೇಶಿಗರು ಬೆಂಗಳೂರಿಗೆ ಬಂದು ಸರ್ಜರಿ ಮಾಡಿಸಿಕೊಳ್ತಿದ್ದಾರೆ. ತಮ್ಮ ದೇಶದಲ್ಲಾಗದ ಚಿಕಿತ್ಸೆ ಹುಡುಕಿ ಬೆಂಗಳೂರಿಗೆ ಬರುತ್ತಿರುವ ವಿದೇಶಿಗರ ಮಧ್ಯೆ ಮತ್ತೊಮ್ಮೆ ಸಿಟಿ ವೈದ್ಯರು ವೈದ್ಯಕೀಯ ಸಾಧನಗೈದು ಮಿಂಚಿದ್ದಾರೆ. ಕಿವಿಯೊಳಗೆ ನುಸುಳಿದ್ದ ಬುಲೆಟ್ ಹೊರ ತೆಗೆದು ಜೀವ ಉಳಿಸಿದ್ದಾರೆ.
ಬೆಂಗಳೂರು, ಡಿ.13: ಐಟಿ ಸಿಟಿ ಬೆಂಗಳೂರು ಹೆಲ್ತ್ ಹಬ್ ಆಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ನಮ್ಮ ರಾಜಧಾನಿ ವೈದ್ಯರು (Bengaluru Doctors) ಹೆಸರು ಮಾಡಿದ್ದಾರೆ. ಅದೆಷ್ಟೊ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಸೈ ಎನ್ನಿಸಿಕೊಂಡಿದ್ದಾರೆ. ಈ ಸಾಲಿಗೆ ಮತ್ತೊಂದು ವಿಶಿಷ್ಟ ಸರ್ಜರಿಯೊಂದು ಸೇರ್ಪಡೆಯಾಗಿದೆ. ಯೆಮೆನ್ ನಲ್ಲಿ (Yemen) ಯುದ್ಧವೊಂದರಲ್ಲಿ 28 ವಯಸ್ಸಿನ ಯುವಕನ ಕಿವಿಗೆ ಹೊಕ್ಕಿದ್ದ ಬುಲೆಟ್ (Bullet) ತೆಗೆದು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಹೊರ ತೆಗೆದ ಬುಲೆಟ್ 3 ಸೆಂಟಿ ಮೀಟರ್ ಉದ್ದ ಇತ್ತು.
ಯೆಮೆನ್ ನಲ್ಲಿ ಆಗಾಗ್ಗೆ ಯುದ್ಧ ನಡೆಯುತ್ತಿರುತ್ತೆ. ಯುದ್ಧ, ಘರ್ಷಣೆ ಮಾಮೂಲಿ ಎಂಬಂತಿರುವ ಈ ಜಾಗದಲ್ಲಿ ವಾಸವಿದ್ದ ಯುವಕನೊಬ್ಬನ ಕಿವಿಯಲ್ಲಿ ಬುಲೆಟ್ ಹೊಕ್ಕಿದೆ. ಸುಮಾರು 18 ವರ್ಷಗಳ ಕಾಲ ಬುಲೆಟ್ ನಿಂದ ಸಾಕಷ್ಟು ಯಾತನೆ ಅನುಭವಿಸಿದ್ದ ಈ ವಿದೇಶಿ ಯುವಕ ನಮ್ಮ ಬೆಂಗಳೂರು ವೈದ್ಯರ ಮೇಲೆ ವಿಶ್ವಾಸವಿಟ್ಟು ಬದುಕಿನಲ್ಲಿ ಗೆದ್ದಿದ್ದಾನೆ. ಸ್ಕಲ್ ಬೋನ್ ಮೂಲಕ ಕಿವಿ ಹೊಕ್ಕಿದ್ದ 18 ವರ್ಷಗಳ ಹಿಂದಿನ ಬುಲೆಟ್ ಅನ್ನು ಸಿಟಿ ವೈದ್ಯರ ತಂಡ ತೆಗೆದು ಸಾಧನೆಗೈದಿದೆ.
ಯುವಕನ ಕಿವಿಯಲ್ಲಿ ಬುಲೆಟ್ ಹೋಗಿದ್ದು ಹೇಗೆ?
ಈಗ 28 ವರ್ಷದವನಾಗಿರುವ ಸಲೇಹ್ ಎಂಬ ಯುವಕ 10 ವರ್ಷದ ಬಾಲಕನಾಗಿದ್ದಾಗ ಮನೆ ಸಮೀಪದ ಅಂಗಡಿಗೆ ಹೋಗಿ ಹಿಂದಿರುಗುವಾಗ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಿತ್ತು. ಆಗ ಅವರು ಹಾರಿಸಿದ ಗುಂಡು ಸಲೇಹ್ ಕಿವಿಯೊಳಗೆ ಹೋಗಿತ್ತು. ಕಿವಿಯಿಂದ ರಕ್ತ ಸುರಿಯಿತ್ತಿದ್ದ ಸಲೇಹ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು. ಆಗ ಅಲ್ಲಿ ವೈದ್ಯರು ಕಿವಿ ಕ್ಲೀನ್ ಮಾಡಿ ಔಷಧಕೊಟ್ಟು ಕಳುಹಿಸಿದ್ದರು. ಕಿವಿಯೊಳಗೆ ಹೋದ ಗುಂಡನ್ನು ಗುರುತಿಸಿರಲಿಲ್ಲ. ಇದಾದ ಬಳಿಕ ಸುಮಾರು 18 ವರ್ಷಗಳ ಕಾಲ ಬಾಲಕ ನರಕಯಾತನೆ ಅನುಭವಿಸಿದ್ದಾನೆ.
ಎಡಕಿವಿಯ ಒಳಗೆ 3 ಸೆಂಟಿ ಮೀಟರ್ ಉದ್ದದ ಗುಂಡು ಹೋಗಿದ್ದು ಕಿವಿ ತಮಟೆ ಹಾನಿಯಾಗಿ ಎಲುಬಿಗೆ ಕಚ್ಚಿಕೊಂಡಿತ್ತು.ಇದರ ಪರಿಣಾಮ ಕಿವಿ ಸೋಂಕು ಉಂಟಾಗಿ ಪದೇಪದೆ ಕಿವಿ ಸೋರುವಿಕೆ ಕಾರಣವಾಗಿತ್ತು. ಗುಂಡು ತಲೆಯಲ್ಲಿದ್ದ ಕಾರಣ ಸಲೇಹ್‌ಗೆ ಕಿವಿ ಕೇಳ್ತಾ ಇರಲಿಲ್ಲ. ಪದೇಪದೆ ತಲೆನೋವು ಕಾಡುತ್ತಿತ್ತು. ಕೊನೆಗೆ ಸಲೇಹ್ ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ದಾಖಲಾಗಿ ತನ್ನ 18 ವರ್ಷಗಳ ಹಿಂದಿ ಬುಲೆಟ್ ಅನ್ನು ತೆಗೆಸಿಕೊಂಡಿದ್ದಾನೆ.
ಸದ್ಯ ಹೊಸ ಜೀವ ಪಡೆದ ವಿದೇಶಿ ಯುವಕ ತನ್ನ ದೇಶಕ್ಕೆ ಮರಳಿದ್ದಾನೆ. ವೈದ್ಯರ ಈ ಸಾಧನೆಗೆ ಈಗ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:07 am, Wed, 13 December 23