IISc Open Day: ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ ಸಂಶೋಧನೆ ಚಟುವಟಿಕೆ
Indian Institute of Science-Bangalore: ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯು ತನ್ನ ಸಂಶೋಧನೆ ಚಟುವಟಿಕೆಗಾಗಿ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ್ದು, ಓಪನ್ ಡೇಗೆ ಪ್ರವೇಶ ಉಚಿತವಾಗಿದೆ. ಸಂಸ್ಥೆಗಳು ಮತ್ತು ವ್ಯಕ್ತಿಗಳು ಈವೆಂಟ್‌ಗಾಗಿ ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬಹುದು.
ಪ್ರತಿ ವರ್ಷದಂತೆ ಬೆಂಗಳೂರಿನಲ್ಲಿರುವ (Bangalore) ಭಾರತೀಯ ವಿಜ್ಞಾನ ಸಂಸ್ಥೆ (IISc) ತನ್ನ ಸಂಶೋಧನಾ ಚಟುವಟಿಕೆಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲು ಈ ವರ್ಷವೂ ಶನಿವಾರ ಮುಕ್ತ ದಿನವನ್ನು (Free Entry) ಆಯೋಜಿಸುತ್ತಿದೆ. ವಾರ್ಷಿಕ ಈವೆಂಟ್ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳು, ವಿಜ್ಞಾನ ಮತ್ತು ತಂತ್ರಜ್ಞಾನ ತಜ್ಞರು ಮತ್ತು ಸಾರ್ವಜನಿಕರು IISc ಗೆ ಭೇಟಿ ನೀಡಬಹುದಾಗಿದೆ. ಸಂಸ್ಥೆಯು ಕೈಗೊಂಡ ವಿವಿಧ ಸಂಶೋಧನಾ ಚಟುವಟಿಕೆಗಳನ್ನು ಹತ್ತಿರದಿಂದ ನೋಡಲು ಕ್ಯಾಂಪಸ್ ಅನ್ನು ಅನ್ವೇಷಿಸಲು ವೇದಿಕೆಯಾಗಿಸಿದೆ. IISc ಸಂಸ್ಥೆಯು ಸಾರ್ವಜನಿಕರಿಗೆ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ (IISc Open Day).
ಓಪನ್ ಡೇ ಜನಪ್ರಿಯ ಉಪನ್ಯಾಸಗಳು, ಪ್ರಾಯೋಗಿಕ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ. ಪೋಸ್ಟರ್ ಪ್ರಸ್ತುತಿಗಳು, ರಸಪ್ರಶ್ನೆ ಸ್ಪರ್ಧೆಗಳು, ವೈಜ್ಞಾನಿಕ ಸ್ಪರ್ಧೆಗಳು ಮತ್ತು ಪ್ರದರ್ಶನಗಳನ್ನು ವಿವಿಧ ವಿಭಾಗಗಳು ಮತ್ತು ಕೇಂದ್ರಗಳಲ್ಲಿ ಆಯೋಜಿಸಲಾಗಿದೆ. ಕಿರಿಯ ವಿದ್ಯಾರ್ಥಿಗಳಿಗಾಗಿ ಹಲವಾರು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಾತ್ಯಕ್ಷಿಕೆಗಳೊಂದಿಗೆ ‘ಕಿಡ್ಸ್-ಝೋನ್’ ಅನ್ನು (Kids-Zone) ಸ್ಥಾಪಿಸಲಾಗಿದೆ. ಚಟುವಟಿಕೆಗಳನ್ನು IISc ಸಂಸ್ಥೆಯ ನಾನಾ ವಿಭಾಗಗಳಿಂದ ವಿಶೇಷವಾಗಿ ಪ್ರದರ್ಶಿಸಲಾಗುತ್ತದೆ. ಓಪನ್ ಡೇಗೆ ಪ್ರವೇಶ ಉಚಿತವಾಗಿದೆ. ಸಂಸ್ಥೆಗಳು ಮತ್ತು ವ್ಯಕ್ತಿಗಳು ಈವೆಂಟ್‌ಗಾಗಿ openday.iisc.ac.in ನಲ್ಲಿ ನೋಂದಾಯಿಸಿಕೊಳ್ಳಬಹುದು.
IISc Open Day – ಸಂದರ್ಶಕರಿಗೆ ಸಲಹೆ:
ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಬರುತ್ತಿರುವ ಅಗಾಧ ಪ್ರತಿಕ್ರಿಯೆಯನ್ನು ಗಮನಿಸಿ ಸಾರ್ವಜನಿಕರಿಗೆ ಎದುರಾಗಬಹುದಾದ ಅನಾನುಕೂಲತೆಯನ್ನು ಕಡಿಮೆ ಮಾಡಲು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವಂತೆ IISc ತನ್ನ ಸಂದರ್ಶಕರಿಗೆ ಸಲಹೆ ನೀಡಿದೆ.
ಸಾರ್ವಜನಿಕರು ಒಳ ಆವರಣದಲ್ಲಿ ಸಂಸ್ಥೆಯ ಸಾರಿಗೆಯನ್ನು ಬಳಸಬಹುದಾಗಿದೆ. ಶಾಲಾ ಬಸ್‌ಗಳು ಮತ್ತು ವ್ಯಾನ್‌ಗಳ ಪಾರ್ಕಿಂಗ್ ಸ್ಥಳವು ಜಿಮ್ಖಾನಾ ಮೈದಾನದ ಒಳಗಿರುತ್ತದೆ ಮತ್ತು ಪ್ರಯಾಣಿಕರು ಪ್ರೊ. ಸಿಎನ್‌ಆರ್ ರಾವ್ ವೃತ್ತದಲ್ಲಿರುವ ಐಐಎಸ್‌ಸಿ ಮುಖ್ಯ ಗೇಟ್‌ನಲ್ಲಿ ಇಳಿಯಬೇಕು. ಕ್ಯಾಂಪಸ್‌ನೊಳಗೆ ಪ್ರಯಾಣಿಸಲು, ಸಂದರ್ಶಕರು 15 ಇ-ರಿಕ್ಷಾ ವಾಹನಗಳನ್ನು (Trans-Vahan) ಉಚಿತವಾಗಿ ಬಳಸಬಹುದಾಗಿದೆ.
ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಪೋಷಕರು ಮಕ್ಕಳ ಮೇಲೆ ನಿಗಾ ವಹಿಸುವಂತೆ ಮನವಿ ಮಾಡಲಾಗಿದೆ. ಕ್ಯಾಂಪಸ್ ಅನ್ನು ಸ್ವಚ್ಛವಾಗಿಡಲು ಪ್ರವಾಸಿಗರಿಗೆ ಮನವಿ ಮಾಡಲಾಗಿದೆ. ಸಂದರ್ಶಕರಿಗೆ ನೆರವಾಗಲು ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಮತ್ತು ಸ್ವಯಂಸೇವಕರಿಗೆ ರಿಸ್ಟ್‌ಬ್ಯಾಂಡ್ ತೊಡಿಸಲಾಗಿದ್ದು, ಕ್ಯಾಂಪಸ್‌ನಾದ್ಯಂತ ಅವರನ್ನು ನಿಯೋಜಿಸಲಾಗುವುದು ಎಂದು IISc ಹೇಳಿದೆ.