ಸದನದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಅಪಘಾತ ಸಂಬಂಧ ಚರ್ಚೆ; ಪರಿಸ್ಥಿತಿ ವಿವರಿಸಿದ ಗೃಹ ಸಚಿವ ಪರಮೇಶ್ವರ್

| Updated By: ಆಯೇಷಾ ಬಾನು

Updated on: Jul 11, 2023 | 1:39 PM

16ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲೂ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಆಗುತ್ತಿರುವ ಅಪಘಾತಗಳ ಬಗ್ಗೆ ಚರ್ಚೆ ನಡೆದಿದೆ. ರಾಜಾಜಿನಗರ ಶಾಸಕ ಸುರೇಶ್​ಕುಮಾರ್, ಬೆಂಗಳೂರು-ಮೈಸೂರು ಹೆದ್ದಾರಿಯ ಅಪಘಾತ ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸಿದ್ರು.

ಸದನದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಅಪಘಾತ ಸಂಬಂಧ ಚರ್ಚೆ; ಪರಿಸ್ಥಿತಿ ವಿವರಿಸಿದ ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಡಾ.ಜಿ.ಪರಮೇಶ್ವರ್​
Follow us on

ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ(Bengaluru Mysuru Expressway) ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸಾವಿನ ಹೆದ್ದಾರಿಯಾಗಿ ಖ್ಯಾತಿ ಪಡೆಯುತ್ತಿದೆ. ಹೀಗಾಗಿ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಾಹನಗಳ ವೇಗದ ಮಿತಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಇದೆಲ್ಲದರ ನಡುವೆ 16ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲೂ(Karnataka Assembly Session) ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಆಗುತ್ತಿರುವ ಅಪಘಾತಗಳ ಬಗ್ಗೆ ಚರ್ಚೆ ನಡೆದಿದೆ.

ಇಂದು (ಜು 11) ನಡೆದ ವಿಧಾನಸಭೆ ಕಲಾಪದಲ್ಲಿ ರಾಜಾಜಿನಗರ ಶಾಸಕ ಸುರೇಶ್​ಕುಮಾರ್, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಹೆಚ್ಚಳದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಉತ್ತರ ನೀಡಿದ್ರು. ಸರಿಯಾಗಿ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಮಾಡಿಲ್ಲ. ಬಹಳಷ್ಟು ನ್ಯೂನತೆಗಳಿವೆ. ರಸ್ತೆ ತಿರುವುಗಳಲ್ಲಿ, ವೇಗ ಮಿತಿ ಇಳಿಕೆಗೆ ಯಾವುದೇ ಸೂಚನಾ ಫಲಕಗಳನ್ನು ಹಾಕಿಲ್ಲ. ಹೆದ್ದಾರಿಯಲ್ಲಿ ವೇಗವಾಗಿ ವಾಹನ ಬಂದಾಗ ಅಪಘಾತಗಳಾಗ್ತಿವೆ. ಮಾರ್ಚ್​ನಲ್ಲಿ 62 ಅಪಘಾತವಾಗಿದ್ದು, 20 ಜನ ಮೃತಪಟ್ಟಿದ್ದಾರೆ. 63 ಜನ ಗಾಯಗೊಂಡಿದ್ದಾರೆ. ಏಪ್ರಿಲ್​ನಲ್ಲಿ 23 ಜನ ಸಾವು, 83 ಗಾಯ. ಮೇ ತಿಂಗಳಲ್ಲಿ 29 ಸಾವು, 93 ಗಾಯ. ಜೂನ್ 28 ಸಾವು, 96 ಗಾಯ. ಮಾರ್ಚ್​​ನಿಂದ ಜೂನ್​ವರೆಗೆ ಒಟ್ಟು 100 ಸಾವು ಸಂಭವಿಸಿದ್ದು 335 ಜನರಿಗೆ ಗಾಯಗಳಾಗಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿವರಿಸಿದರು.

ಇದನ್ನು ಓದಿ: Assembly Session: ಸಿದ್ದರಾಮಯ್ಯ ಗಂಭೀರ ಮುಖಭಾವದೊಂದಿಗೆ ವಿಧಾನ ಸಭೆ ಪ್ರವೇಶಿಸಿದರೆ ವಿಜಯೇಂದ್ರ ಮಾಧ್ಯಮದವರಿಗೆ ವಿಶ್ ಮಾಡಿ ಒಳನಡೆದರು

ಸಂಚಾರ ವಿಭಾಗದ ಎಡಿಜಿಪಿ ಎಕ್ಸ್​​ಪ್ರೆಸ್​ ವೈವೇ ಪರಿಶೀಲಿಸಿದ್ದಾರೆ. ಪಾದಚಾರಿಗಳು ಹೆದ್ದಾರಿಗೆ ಬರದಂತೆ ತಂತಿ ಬೇಲಿ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ಯಾಟ್ರೋಲಿಂಗ್ ವಾಹನಗಳ ಸಂಖ್ಯೆ ಹೆಚ್ಚಿಸಲು, ಯಾವುದೇ ವಾಹನಗಳು ಮಾರ್ಗ ಮಧ್ಯೆ ನಿಲ್ಲದಂತೆ ಕ್ರಮಕ್ಕೆ ಸೂಚಿಸಲಾಗಿದೆ. ಎಕ್ಸ್​​ಪ್ರೆಸ್​ ವೈವೇ ವ್ಯಾಪ್ತಿಯಲ್ಲಿ ಸ್ಥಳಗಳ ಸೂಚನಾ ಫಲಕಗಳನ್ನು ಹಾಕಲಾಗುತ್ತೆ. ಲೈನ್ ಪಾಲನೆಗೆ ಕ್ರಮ, ಓವರ್ ಟೇಕ್ ಹೇಗೆ ಅನ್ನೋ ಬಗ್ಗೆ ಸೂಚನೆ ಕೊಡಲಾಗುತ್ತದೆ. ಕೆಲವು ವಾಹನ ಚಾಲಕರಿಗೆ ಸಂಚಾರಿ ನಿಯಮಗಳು ಗೊತ್ತಿಲ್ಲ. ಲೈಸೆನ್ಸ್ ಸುಲಭವಾಗಿ ಸಿಗುತ್ತದೆ, ಹಾಗಾಗಿ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಹೆದ್ದಾರಿ ಪ್ರಾಧಿಕಾರಕ್ಕೆ ಶೀಘ್ರವೇ ರಾಜ್ಯ ಸರ್ಕಾರ ಪತ್ರ ಬರೆಯುತ್ತೆ. ಅಪಘಾತ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ