ಐಟಿ ಕಂಪನಿಗಳನ್ನು ಸ್ಥಳಾಂತರಿಸುವುದಾಗಿ ಸಿಎಂಗೆ ಎಚ್ಚರಿಕೆ ನೀಡಿದ ಒಆರ್​ಆರ್​ಸಿಎ

| Updated By: Rakesh Nayak Manchi

Updated on: Sep 03, 2022 | 7:57 AM

ಬೆಂಗಳೂರಿನಲ್ಲಿ ಮಳೆಯಿಂದಾಗಿ ಐಟಿ ಕಂಪನಿಗಳು ತತ್ತರಿಸಿದ್ದು, ಮೂಲಸೌಕರ್ಯಗಳ ಸುಧಾರಣೆಯಾಗದೆ 225 ಕೋಟಿ ರೂ. ನಷ್ಟ ಅನುಭವಿಸಿದೆ. ಈ ನಿಟ್ಟಿನಲ್ಲಿ ಪತ್ರದ ಮೂಲಕ ಮುಖ್ಯಮಂತ್ರಿಯವರಲ್ಲಿ ಮೂಲಸೌಕರ್ಯ ಸುಧಾರಿಸುವಂತೆ ಕಂಪನಿಗಳ ಸಂಘ ಮನವಿ ಮಾಡಿಕೊಂಡಿದೆ.

ಐಟಿ ಕಂಪನಿಗಳನ್ನು ಸ್ಥಳಾಂತರಿಸುವುದಾಗಿ ಸಿಎಂಗೆ ಎಚ್ಚರಿಕೆ ನೀಡಿದ ಒಆರ್​ಆರ್​ಸಿಎ
ಬೆಂಗಳೂರಿನ ಬೆಳ್ಳಂದೂರು ಬಳಿ ಮಳೆಯಿಂದ ಜಲಾವೃತಗೊಂಡ ಹೊರವರ್ತುಲ ರಸ್ತೆ
Image Credit source: PTI
Follow us on

ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅವಾಂತರಗಳೇ ಸೃಷ್ಟಿಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಳ್ಳುತ್ತಿದೆ. ವರುಣನ ಆರ್ಭಟಕ್ಕೆ ಜನರು ಮಾತ್ರವಲ್ಲದೆ ದೊಡ್ಡದೊಡ್ಡ ಐಟಿ ಕಂಪನಿಗಳು ಕೂಡ ಬೇಸತ್ತಿದೆ. ಸರಿಯಾದ ಮೂಲಸೌಕರ್ಯಗಳಿಲ್ಲದೆ ಮಳೆ ಸಂದರ್ಭದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುವ ಮೂಲಕ  ನಷ್ಟವನ್ನು ಅನುಭವಿಸುವಂತಾಗಿದೆ. ಈ ಬಗ್ಗೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಪತ್ರ ಬರೆದಿರುವ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ORRCA), ಮೂಲಸೌಕರ್ಯ ಸುಧಾರಿಸದಿದ್ದರೆ ಐಟಿ ಕಂಪನಿಗಳನ್ನು ಸ್ಥಳಾಂತರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಾರತಹಳ್ಳಿ ಸರ್ಜಾಪುರ ಔಟರ್ ರಿಂಗ್ ರೋಡ್​ನಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಅಲ್ಲಲ್ಲಿ ಮಳೆ ನೀರು ನಿಲ್ಲುತ್ತಿದೆ. ಇದರಿಂದಾಗಿ ಐಟಿ ಕಂಪನಿಗಳಿಗೆ ಭಾರೀ ನಷ್ಟವಾಗಿದ್ದು, ಕಂಪನಿಗಳ ಸಂಘವೇ ಹೇಳುವಂತೆ ಸುಮಾರು 225 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಒಂದೊಮ್ಮೆ ತಾನು ಸರ್ಕಾರದ ಮುಂದಿಟ್ಟ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಂಪನಿಗಳು ಪರ್ಯಾಯ ಸ್ಥಳಗಳನ್ನು ಹುಡುಕಿಕೊಳ್ಳಲು ನಿರ್ಧರಿಸಿದೆ.

ಐಟಿ ಕಾರಿಡಾರ್ ಪ್ರದೇಶದಲ್ಲಿ ಸಮಪರ್ಕ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸದಿದ್ದರೆ ಐಟಿ ಕಂಪನಿಗಳು ಪರ್ಯಾಯ ಸ್ಥಳ‌ ಹುಡುಕಿಕೊಳ್ಳಲಿವೆ. ಸಪ್ಟೆಂಬರ್1 ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಹೊರವರ್ತುಲ ರಸ್ತೆಗಳಲ್ಲಿ‌ ಇರುವ ಕಂಪನಿಗಳ ಸಂಘ, ಕೆಲವು ಬೇಡಿಕೆಗಳನ್ನ ಮುಂದಿಟ್ಟಿದೆ.

ಸರ್ಕಾರಕ್ಕೆ ಐಟಿ ಕಂಪನಿಗಳು ಮುಂದಿಟ್ಟ ಮೊದಲ ಬೇಡಿಕೆ ಎಂದರೆ, ಮೂಲಸೌಕರ್ಯಗಳನ್ನು ಸುಧಾರಿಸುವುದು. ನಂತರ ಕೆ.ಆರ್ ಪುರಂ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಸುಧಾರಣೆ ಮಾಡಬೇಕು, ಬಿಎಂಟಿಸಿಯಿಂದ ವೋಲ್ವೋ ಬಸ್​ಗಳನ್ನು ಬಿಡಬೇಕು, ದಟ್ಟಣೆ ತಡೆಯಲು ರಸ್ತೆ ಬದಿಗಳಲ್ಲಿ ಪಾರ್ಕಿಂಗ್ ನಿಷೇಧಿಸಬೇಕು, ಪಾದಚಾರಿ ಮಾರ್ಗ ಹಾಗೂ ಸೈಕಲ್ ಸವಾರರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಪಾಥ್ ನಿರ್ಮಾಣ ಮಾಡಬೇಕು, ಪಾದಾಚಾರಿಗಳು ರಸ್ತೆ ದಾಟಲು ಅನುಕೂಲವಾಗುವಂತೆ ಪ್ರತಿ 500 ಮೀಟರ್​ಗೆ ಪಾದಚಾರಿ ಮೇಲ್ಸೆತುವೆ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:56 am, Sat, 3 September 22