
ಬೆಂಗಳೂರು, ಜನವರಿ 27: ಇತ್ತೀಚೆಗೆ ನಗರದಲ್ಲಿ (Bengaluru) ಡ್ರಗ್ಸ್ ಶೇಕರಣೆ ಮತ್ತು ಪೆಡ್ಲಿಂಗ್ ದಂಧೆ ಹೆಚ್ಚುತ್ತಿದೆ. ಇಂತಹ ಪ್ರಕರಣಗಳಲ್ಲಿ ವಿದೇಶಿಗರ ಕೈವಾಡವೂ ಹೆಚ್ಚಾಗಿ ಕಾಣುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡುವ ಮನೆ ಮಾಲೀಕರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ವಿದೇಶಿಗರಿಗೆ (Foreigners) ಮನೆ ಬಾಡಿಗೆ ನೀಡುವ ಮೊದಲು ಸ್ಥಳೀಯ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ಈಶಾನ್ಯ ವಿಭಾಗದ ಪೊಲೀಸರು ಸೂಚನೆ ನೀಡಿದ್ದಾರೆ.
ಪೊಲೀಸ್ ಇಲಾಖೆಯ ಹೇಳಿದಂತೆ ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡುವ ಸಂದರ್ಭದಲ್ಲಿ ಫಾರ್ಮ್–16 ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಈ ನಿಯಮವನ್ನು ಪಾಲಿಸದೆ ಬಾಡಿಗೆ ನೀಡಿದಲ್ಲಿ, ಮನೆ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಇದರಿಂದ ಬಾಡಿಗೆ ಮನೆಗಳಲ್ಲಿ ಯಾರು ವಾಸಿಸುತ್ತಿದ್ದಾರೆಂಬ ಮಾಹಿತಿ ಪೊಲೀಸರ ಕೈ ಸೇರುವುದರಿಂದ ನಗರದಲ್ಲಿ ನಡೆಯುವ ಹಲವು ಅಕ್ರಮಗಳಿಗೆ ಬ್ರೇಕ್ ಬೀಳಲಿದೆ.
ಇತ್ತೀಚಿನ ದಿನಗಳಲ್ಲಿ ವೀಸಾ ಅವಧಿ ಮುಗಿದರೂ ತಮ್ಮ ದೇಶಗಳಿಗೆ ಮರಳದೇ ನಗರದಲ್ಲಿ ತಂಗುತ್ತಿರುವ ವಿದೇಶಿ ಪ್ರಜೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರು ವಿದ್ಯಾರ್ಥಿ ವೀಸಾದ ಮೇಲೆ ಬಂದು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಶೇಷವಾಗಿ ಡ್ರಗ್ ಪೆಡ್ಲಿಂಗ್ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ವಿದೇಶಿ ಪ್ರಜೆಗಳ ಭಾಗವಹಿಸುವಿಕೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ ಬೆಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 5.15 ಕೋಟಿ ರೂ. ಮೌಲ್ಯದ ಡ್ರಗ್ಸ್, ನೈಜೀರಿಯಾ ಪ್ರಜೆ ವಶಕ್ಕೆ
ಈ ಹಿನ್ನೆಲೆ ಬೆಂಗಳೂರು ನಗರದಲ್ಲಿ ವಿದೇಶಿ ಪ್ರಜೆಗಳ ಚಲನವಲನದ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಿದ್ದು, ಅವರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಕಾನೂನು ಉಲ್ಲಂಘಿಸಿದರೆ ವಿದೇಶಿಗರ ಕಾಯ್ದೆ–1946ರ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.