Namma Metro: ನಗರದ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ!
ಬಿಎಂಆರ್‌ಸಿಎಲ್ ಬೆಂಗಳೂರಿನ 9 ಮೆಟ್ರೋ ನಿಲ್ದಾಣಗಳಲ್ಲಿ ಸೈಕ್ಲಿಂಗ್‌ಗೆ ಉತ್ತೇಜನ ನೀಡಲು ಉಚಿತ ಸೈಕಲ್ ಪಾರ್ಕಿಂಗ್ ಒದಗಿಸಿದೆ. ಲಾಸ್ಟ್-ಮೈಲ್ ಸಂಪರ್ಕ ಸುಧಾರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ಟೆಂಡರ್ ಕರೆಯಲಾಗಿದ್ದು, ಫೆಬ್ರವರಿ 9ರ ನಂತರ ನಿರ್ವಹಣಾ ಸಂಸ್ಥೆ ಅಂತಿಮಗೊಳ್ಳಲಿದೆ. ಆದಾಗ್ಯೂ, ಸೈಕಲ್ ಪ್ರಯಾಣಿಕರು ಪಾರ್ಕಿಂಗ್ ಶುಲ್ಕಕ್ಕಿಂತ ಸುರಕ್ಷಿತ ಮೂಲಸೌಕರ್ಯದ ಅಗತ್ಯವಿದೆ ಎಂದು ಒತ್ತಿಹೇಳಿದ್ದಾರೆ.

ಬೆಂಗಳೂರು, ಜನವರಿ 27: ಮೆಟ್ರೋ ನಿಲ್ದಾಣಗಳಿಗೆ ಲಾಸ್ಟ್–ಮೈಲ್ ಸಂಪರ್ಕವಾಗಿ ಸೈಕ್ಲಿಂಗ್‌ನ್ನು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಗರದಲ್ಲಿನ ಒಂಬತ್ತು ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ ಒದಗಿಸಲು ನಿರ್ಧರಿಸಿದೆ. ನಿಗಮದ ಈ ಯೋಜನೆಗೆ ಸೈಕಲಿಸ್ಟ್ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಾರ್ಕಿಂಗ್ ಶುಲ್ಕಕ್ಕಿಂತ ಮೂಲಸೌಕರ್ಯದ್ದೇ ಬಾಧೆ
ಈ ನಿರ್ಧಾರವನ್ನು ಮೆಟ್ರೋ ಪಾರ್ಕಿಂಗ್ ವ್ಯವಸ್ಥೆ ನಿರ್ವಹಣೆಗೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಇತ್ತೀಚೆಗೆ ಆಹ್ವಾನಿಸಿರುವ ಟೆಂಡರ್ ಮೂಲಕ ಪ್ರಕಟಿಸಲಾಗಿದೆ. ಫೆಬ್ರವರಿ 9ರವರೆಗೆ ಟೆಂಡರ್ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಬಳಿಕ ಸಂಸ್ಥೆಯನ್ನು ಅಂತಿಮಗೊಳಿಸಲಾಗುವುದು. ಪ್ರಸ್ತುತ ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್ ಪಾರ್ಕಿಂಗ್‌ಗೆ ಗಂಟೆಗೆ ಒಂದು ರೂ. ಮತ್ತು ದಿನಕ್ಕೆ ಗರಿಷ್ಠ 10 ರೂ. ಶುಲ್ಕ ವಿಧಿಸಲಾಗುತ್ತಿದೆ.
ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಹೇಳುವಂತೆ, ಸೈಕಲ್ ಪ್ರಯಾಣಿಕರು ಹೆಚ್ಚು ಬಳಸುವ ನಿಲ್ದಾಣಗಳನ್ನು ಗುರುತಿಸಿ ಈ ಉಚಿತ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಸದ್ಯಕ್ಕೆ ಈ ಸೌಲಭ್ಯವು ಕೇವಲ ಒಂಬತ್ತು ನಿಲ್ದಾಣಗಳಿಗೆ ಮಾತ್ರ ಅನ್ವಯವಾಗಲಿದ್ದು, ಉಳಿದ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಮುಂದುವರಿಯಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನೂ ಓದಿ Namma Metro: ಆರೆಂಜ್ ಲೈನ್ ಮೆಟ್ರೋ ಕಾಮಗಾರಿ; ಬೆಂಗಳೂರಲ್ಲಿ ಮತ್ತೊಂದು ಫ್ಲೈ ಓವರ್ ಡೆಮಾಲಿಷ್?
ಆದರೆ ಸೈಕಲ್ ಪ್ರಯಾಣಿಕರು, ಉಚಿತ ಪಾರ್ಕಿಂಗ್‌ಗಿಂತ ಮೂಲಸೌಕರ್ಯ ಸುಧಾರಣೆ ಹೆಚ್ಚು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ಸೈಕಲ್ ಮೇಯರ್ ಎಂದೇ ಪ್ರಸಿದ್ಧರಾದ ಸತ್ಯಾ ಶಂಕರ್, ಪಾರ್ಕಿಂಗ್ ಶುಲ್ಕ ಸಮಸ್ಯೆಯಲ್ಲ, ಸುರಕ್ಷಿತ ಜಾಗದ ಕೊರತೆಯೇ ಮುಖ್ಯ ಅಡಚಣೆ ಎಂದು ಹೇಳಿದ್ದಾರೆ. ಇನ್ನೊಬ್ಬ ಸೈಕ್ಲಿಸ್ಟ್ ಬಿಜು ಚೆರಾಯತ್, ಹಲವೆಡೆ ಸೈಕಲ್ ಲಾಕ್ ಮಾಡಲು ಕಂಬ ಅಥವಾ ಆಧಾರವಿಲ್ಲದಿರುವುದು ತೊಂದರೆಯಾಗಿದೆ ಎಂದು ಹೇಳಿದ್ದಾರೆ.
ಯಾವೆಲ್ಲಾ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಜಾರಿ
- ಪರ್ಪಲ್ ಲೈನ್ – ಮೈಸೂರು ರಸ್ತೆ, ಬ್ಯಾಪನಹಳ್ಳಿ
- ಗ್ರೀನ್ ಲೈನ್ – ಮಡವಾರ, ಪೀಣ್ಯ ಇಂಡಸ್ಟ್ರಿ, ಜೆಪಿ ನಗರ
- ಯೆಲ್ಲೋ ಲೈನ್ – ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ಸ್ ಸಿಟಿ, ರಾಗಿಗುಡ್ಡ, ಜಯದೇವ ಆಸ್ಪತ್ರೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:28 am, Tue, 27 January 26
