Namma Metro: ಆರೆಂಜ್ ಲೈನ್ ಮೆಟ್ರೋ ಕಾಮಗಾರಿ; ಬೆಂಗಳೂರಲ್ಲಿ ಮತ್ತೊಂದು ಫ್ಲೈ ಓವರ್ ಡೆಮಾಲಿಷ್?
ಬೆಂಗಳೂರು ಮೆಟ್ರೋದ ಆರೆಂಜ್ ಲೈನ್ ಯೋಜನೆಯಡಿ ಜೆಪಿ ನಗರದ ಡಾಲರ್ಸ್ ಕಾಲೋನಿ ಫ್ಲೈಓವರ್ ತೆರವಿಗೆ BMRCL ಟೆಂಡರ್ ಕರೆದಿದೆ. 25 ಕೋಟಿ ವೆಚ್ಚದ ಈ ಫ್ಲೈಓವರ್ ತೆರವು, ಆರೆಂಜ್ ಲೈನ್ ಮೆಟ್ರೋ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿದೆ. ಆದರೆ, ಈ ನಿರ್ಧಾರವು ತೀವ್ರ ಟ್ರಾಫಿಕ್ ಸಮಸ್ಯೆ ಮತ್ತು ಅನಾನುಕೂಲತೆಯನ್ನು ಹುಟ್ಟು ಹಾಕಬಹುದೆಂದು ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಜನವರಿ 24: ಜೆಪಿ ನಗರದ ಸುತ್ತಮುತ್ತಲಿನ ಡಾಲರ್ಸ್ ಕಾಲೋನಿ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಡಾಲರ್ಸ್ ಕಾಲೋನಿ ಜಂಕ್ಷನ್ ಫ್ಲೈಓವರ್ ಅನ್ನು ಡೆಮಾಲಿಷನ್ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಟೆಂಡರ್ ಕರೆದಿದೆ. ಜಯದೇವ ಫ್ಲೈಓವರ್ ತೆರವು ಬಳಿಕ ಈಗ ಮತ್ತೊಂದು ಮೇಲ್ಸುತುವೆ ತೆರವಿಗೆ ಮುಂದಾಗಿರುವುದು ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದೆ.
ಒಂದು ಕೀಮೀ ಉದ್ದದ ಮೇಲ್ಸೇತುವೆ ತೆರವು!
ಜೆಪಿ ನಗರದ ನಾಲ್ಕನೇ ಹಂತದಿಂದ ಕೆಂಪಾಪುರವರೆಗಿನ ಆರೆಂಜ್ ಲೈನ್ ಮೆಟ್ರೋ ಕಾಮಗಾರಿಯ ಹಿನ್ನೆಲೆಯಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. 2018ರಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡಿದ್ದ ಈ ಫ್ಲೈಓವರ್, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ ಹಾಗೂ ಜಯನಗರ ಸುತ್ತಮುತ್ತಲಿನ ಪ್ರದೇಶಗಳ ಸಂಚಾರಕ್ಕೆ ಮಹತ್ವದ ನೆರವಾಗಿತ್ತು. ಸುಮಾರು ಒಂದು ಕಿಲೋಮೀಟರ್ ಉದ್ದದ ಈ ಮೇಲ್ಸುತುವೆ ತೆರವುಗೊಳ್ಳಲಿರುವುದರಿಂದ ದಿನನಿತ್ಯದ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದು ಟ್ರಾಫಿಕ್ನಿಂದ ಬೇಸತ್ತಿರುವ ಬೆಂಗಳೂರಿಗರಿಗೆ ಗುಡ್ನ್ಯೂಸ್, ಕೇಂದ್ರದತ್ತ ಎಲ್ಲರ ಚಿತ್ತ
ಕಾಮಗಾರಿ ಮುಗಿಯುವ ತನಕ ಟ್ರಾಫಿಕ್ ಸಮಸ್ಯೆ
ಬಿಎಂಆರ್ಸಿಎಲ್ ಆರೆಂಜ್ ಲೈನ್ ಮೆಟ್ರೋ ಯೋಜನೆಯಡಿ ಡಬಲ್ ಡೆಕ್ಕರ್ ಫ್ಲೈಓವರ್ ಜೊತೆಗೆ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಇತ್ತೀಚೆಗೆ ಸಿವಿಲ್ ಕಾಮಗಾರಿಗೆ ಟೆಂಡರ್ ಆಹ್ವಾನಿಸಿದೆ. ಮೂರನೇ ಹಂತದ ಮೆಟ್ರೋ ಯೋಜನೆಯಾದ ಆರೆಂಜ್ ಲೈನ್ ಒಟ್ಟು 44.65 ಕಿಮೀ ವಿಸ್ತೀರ್ಣ ಹೊಂದಿದ್ದು, ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಮೊದಲ ಕಾರಿಡಾರ್ ಹಾಗೂ ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಕಡಬಗೆರೆವರೆಗೆ ಎರಡನೇ ಕಾರಿಡಾರ್ ಒಳಗೊಂಡಿದೆ. ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಮೆಟ್ರೋ ಕಾಮಗಾರಿ ಸ್ವಾಗತಾರ್ಹವಾದರೂ, ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣ ಪೂರ್ಣಗೊಳ್ಳುವವರೆಗೆ ಸಂಚಾರ ಸಮಸ್ಯೆ ಇದ್ದೇ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.