ಟ್ರಾಫಿಕ್ನಿಂದ ಬೇಸತ್ತಿರುವ ಬೆಂಗಳೂರಿಗರಿಗೆ ಗುಡ್ನ್ಯೂಸ್, ಕೇಂದ್ರದತ್ತ ಎಲ್ಲರ ಚಿತ್ತ
ಇದು ಸಿಲಿಕಾನ್ ಬೆಂಗಳೂರಿನ ಟ್ರಾಫಿಕ್ ಸಾಗರವನ್ನು ದಾಟಿಕೊಂಡು ಹೋಗುವ ಮಾರ್ಗ. ಈ ರಸ್ತೆ ಯಾವಾಗಾದರೂ ಟ್ರಾಫಿಕ್ ದಟ್ಟಣೆಯಿಂದ ಕೂಡಿರುತ್ತೆ. ಇದರಿಂದ ಈ ಭಾಗದಲ್ಲಿ ಓಡಾಡುವವರು ಬೇಸತ್ತಿದ್ದಾರೆ. ಇಂತಹ ಟ್ರಾಫಿಕ್ ಏರಿಯಾದಲ್ಲಿ ಮೆಟ್ರೋ ಆರಂಭಿಸಲು ಬಿಎಂಆರ್ಸಿಎಲ್ ಮುಂದಾಗಿದ್ದು, ಕೇಂದ್ರ ಸರ್ಕಾರದಿಂದ ಸದ್ಯದಲ್ಲೇ ಗುಡ್ ನ್ಯೂಸ್ ಸಿಗುವ ನಿರೀಕ್ಷೆ ಇದೆ.

ಬೆಂಗಳೂರು, (ಜನವರಿ 21): ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ಗೆ (Bengaluru Traffic) ಜನ ಬೇಸತ್ತಿದ್ದಾರೆ. ಅದರಲ್ಲೂ ಕೆಲ ಏರಿಯಾಗಳಿಗೆ ಹೋಗಬೇಕಂದರೆ ಟ್ರಾಫಿಕ್ ಎಂಬ ಸಾಗರವನ್ನು ದಾಟಿಕೊಂಡು ಹೋಗಬೇಕು. ಹೌದು..ಹೆಬ್ಬಾಳ-ಸರ್ಜಾಪುರ (Hebbal To Sarjapur)ಮಾರ್ಗದ ರಸ್ತೆ ಯಾವಾಗಲೂ ವಾಹನಗಳಿಂದ ತುಂಬಿ ತುಳುಕುತ್ತಿರುತ್ತೆ. ಹೀಗಾಗಿ ಈ ಮಾರ್ಗದಲ್ಲಿ ವಾಹನ ಸವಾರರು ಟ್ರಾಫಿಕ್ ಕಿರಿಕಿರಿಗೆ ಬೇಸತ್ತು ಹೋಗಿದ್ದಾರೆ. ಇದರಿಂದ ಈ ಮಾರ್ಗದಲ್ಲಿ ಮೆಟ್ರೋ ಓಡಾಡಿಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ನಡೆಯುತ್ತಿರುವ ಚರ್ಚೆ ಅಂತಿಮ ಹಂತಕ್ಕೆ ಬಂದಿದೆ. ಆದ್ದರಿಂದ ಶೀಘ್ರದಲ್ಲೇ ಮೆಟ್ರೋ ಹಂತ 3A ಯೋಜನೆ ಆರಂಭಕ್ಕೆ ಸಿದ್ದತೆ ನಡೆಯುತ್ತಿದ್ದು, ಹೆಬ್ಬಾಳ-ಸರ್ಜಾಪುರವರೆಗೆ ವಿಸ್ತೃತ ಕೆಂಪು ಮಾರ್ಗ (Hebbal To Sarjapur Red Line Metro) ನಿರ್ಮಾಣವಾಗಲಿದೆ.
ಅಂತಿಮ ಡಿಪಿಆರ್ ವರದಿ ಸಿದ್ಧ
ಈ ಯೋಜನೆಗೆ ಈ ಹಿಂದೆ ರಾಜ್ಯ ಸರ್ಕಾರ 28,405 ಕೋಟಿ ರೂ. ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ಇದಕ್ಕೆ ಕೇಂದ್ರ ಸರ್ಕಾರ, ಯೋಜನಾ ವೆಚ್ಚ ಹೆಚ್ಚಾಗಿದೆ ವೆಚ್ಚ ಕಡಿಮೆ ಮಾಡಿ ಎಂದು ಸೂಚನೆ ನೀಡಿತ್ತು. ಈ ಹಿನ್ನೆಲೆ ರಾಜ್ಯ ಸರ್ಕಾರ ಥರ್ಡ್ ಪಾರ್ಟಿಯಿಂದ ಮತ್ತೊಮ್ಮೆ ಹೊಸ DPR ರೆಡಿ ಮಾಡಿಸಿದ್ದು, ಇದರಲ್ಲಿ 28,405 ಕೋಟಿಯಿಂದ 25,485 ಕೋಟಿ ರೂ. ವೆಚ್ಚವನ್ನು ಇಳಿಸಲಾಗಿದೆ. ಅಂದರೆ 2,920 ಕೋಟಿಯಷ್ಟು ಯೋಜನಾ ವೆಚ್ಚವನ್ನು ಕಡಿಮೆ ಮಾಡಲಾಗಿದೆ.
ಇದನ್ನೂ ಓದಿ: ವಿಮಾನ ಪ್ರಯಾಣಿಕರೇ ಗಮನಿಸಿ: ಬೆಂಗಳೂರು ಏರ್ಪೋರ್ಟ್ನಿಂದ ಮಹತ್ವದ ಸೂಚನೆ; ಮಾಹಿತಿ ಇಲ್ಲಿದೆ
ಈ ಹಿಂದೆ ಒಂದು ಕಿಮೀ 767 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಡಿಪಿಆರ್ ಮಾಡಲಾಗಿತ್ತು. ಇದೀಗ ಒಂದು ಕಿಮೀಗೆ 688 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ವರದಿ ನೀಡಲಾಗಿದ್ದು, ಸದ್ಯದಲ್ಲೇ ಹೊಸ ಡಿಪಿಆರ್ ಅನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ಬಳಿಕ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ರವಾನೆ ಮಾಡಲಿದೆ.
ಸರ್ಜಾಪುರ ಟು ಹೆಬ್ಬಾಳ ಮೆಟ್ರೋ ಮಾರ್ಗದ ವಿವರ
ಇನ್ನೂ 37 ಕಿಮೀ ವಿಸ್ತೀರ್ಣದ ಸರ್ಜಾಪುರ ಟು ಹೆಬ್ಬಾಳ ಮಾರ್ಗದಲ್ಲಿ ಒಟ್ಟು 28 ಮೆಟ್ರೋ ಸ್ಟೇಷನ್ ಗಳು ಬರಲಿವೆ. 22.14 ಕಿಮೀ ಎಲಿವೇಟೆಡ್ ಮೆಟ್ರೋ ಸ್ಟೇಷನ್ ಗಳು, 14.45 ಕಿಮೀ ಅಂಡರ್ ಗ್ರೌಂಡ್ನಲ್ಲಿ ಮೆಟ್ರೋ ಸ್ಟೇಷನ್ ಗಳಿರುತ್ತವೆ. ಈ ಕೆಂಪು ಮೆಟ್ರೋ ಮಾರ್ಗವು ಹೆಬ್ಬಾಳದಲ್ಲಿ ಮೆಟ್ರೋ ‘ನೀಲಿ ಮಾರ್ಗ’, ಕೆಆರ್ ವೃತ್ತದಲ್ಲಿ ‘ನೇರಳೆ ಮಾರ್ಗ’ ಸಂಧಿಸಲಿದೆ. ಇನ್ನೂ ಡೈರಿ ವೃತ್ತದಲ್ಲಿ ‘ಗುಲಾಬಿ ಮಾರ್ಗ’ ಹಾಗೂ ಅಗರದಲ್ಲಿ ‘ನೀಲಿ ಮಾರ್ಗ’ ವನ್ನು ಸಂಧಿಸುತ್ತದೆ. ಹೀಗಾಗಿ ಇಲ್ಲಿ ನಾಲ್ಕು ಇಂಟರ್‌ಚೇಂಜ್ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.
ಈ ಮಾರ್ಗದಲ್ಲಿ ಯಾವ್ಯಾವ ಏರಿಯಾದಲ್ಲಿ ಮೆಟ್ರೋ ಸ್ಟೇಷನ್ ಗಳು ಬರಲಿವೆ ಅಂತ ನೋಡುವುದಾದರೆ, ಹೆಬ್ಬಾಳ, ಗಂಗಾನಗರ,ಪಶುವೈದ್ಯಕೀಯ ಮಹಾವಿದ್ಯಾಲಯ, ಮೇಖ್ರಿ ಸರ್ಕಲ್, ಗಾಲ್ಫ್ ಕ್ಲಬ್, ಪ್ಯಾಲೇಸ್ ಗುಟ್ಟಹಳ್ಳಿ, ಬಸವೇಶ್ವರ ವೃತ್ತ, ಕೆಆರ್ ಸರ್ಕಲ್, ಟೌನ್ ಹಾಲ್, ಶಾಂತಿನಗರ, ನಿಮ್ಹಾನ್ಸ್, ಡೈರಿ ಸರ್ಕಲ್, ಕೋರಮಂಗಲ 2ನೇ ಬ್ಲಾಕ್, ಕೋರಮಂಗಲ 3ನೇ ಬ್ಲಾಕ್, ಜಕ್ಕಸಂದ್ರ, ಅಗರ, ಇಬ್ಬಲೂರು, ಬೆಳ್ಳಂದೂರು ಗೇಟ್, ಕೈಕೊಂಡೂರು, ದೊಡ್ಡಕನ್ನಳ್ಳಿ, ಕಾರ್ಮೆಲಾರಂ, ದೊಡ್ಡಕನ್ನಳ್ಳಿ, ಅಗ್ರಹಾರ ರಸ್ತೆ ಮತ್ತು ಸರ್ಜಾಪುರ.
ಒಟ್ನಲ್ಲಿ ನಗರದ ಮೂಲೆ ಮೂಲೆಗೂ ಮೆಟ್ರೋ ವಿಸ್ತರಣೆ ಆಗುತ್ತಿರುವುದರಿಂದ ಟ್ರಾಫಿಕ್ ಕಡಿಮೆಯಾಗುತ್ತಿರುವುದಕ್ಕೆ ಸಾರ್ವಜನಿಕರು ಸಂತೋಷಗೊಂಡಿದ್ದಾರೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಕೆಂಪು ಮಾರ್ಗಕ್ಕೆ ಯಾವಾಗ ಗ್ರೀನ್ ಸಿಗ್ನಲ್ ನೀಡುತ್ತೋ ಕಾದು ನೋಡಬೇಕಿದೆ.