ಕಟ್ಟುನಿಟ್ಟಿನ ಕ್ರಮ: ಇನ್ಮುಂದೆ ಸ್ಲೀಪರ್ ಬಸ್ ಗಳಿಗೆ 8 ನಿಯಮ ಪಾಲನೆ ಕಡ್ಡಾಯ
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಸಂಸ್ಥೆ ಪ್ರಯಾಣಿಕರ ಸುರಕ್ಷತೆ ಕುರಿತು ಎಲ್ಲಾ ಸ್ಲೀಪರ್ ಕೋಚ್ ಹಾಗೂ ಅಖಿಲ ಭಾರತ ಪ್ರವಾಸಿ ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆ ಸೂಚನೆ ಪಾಲಿಸುವಂತೆ ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರಿಗೆ ಮತ್ತು ಬಸ್ ಕೋಚ್ ನಿರ್ಮಾಣ ಮಾಡುವ ಕಂಪನಿಗಳಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಖಡಕ್ ಆಗಿ ಸೂಚನೆ ನೀಡಿದ್ದಾರೆ. ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್ ಪೋರ್ಟ್ ನೀಡಿರುವ ನಿಯಮ ಜಾರಿ ಮಾಡಲಾಗಿದ್ದು, ಇನ್ಮುಂದೆ ಸ್ಲೀಪರ್ ಬಸ್ ಗಳಿಗೆ ಈ 8 ನಿಯಮ ಪಾಲನೆ ಕಡ್ಡಾಯವಾಗಿದೆ. ಹಾಗಾದ್ರೆ, ಎಂಟು ನಿಯಮಗಳೇನು ಎನ್ನುವುದು ಈ ಕೆಳಗಿಂತಿದೆ.

ಬೆಂಗಳೂರು, (ಜನವರಿ 21): ಚಿತ್ರದುರ್ಗ ಖಾಸಗಿ ಬಸ್ ಅಗ್ನಿದುರಂತ (Chitradruga Bus Accident) ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಅವರು ಮಹತ್ವದ ಸಭೆ ನಡೆಸಿದ್ದಾರೆ. ರಾಜ್ಯದ ಖಾಸಗಿ ಬಸ್ ಮಾಲೀಕರು,ಬಸ್ ಕೋಚ್ ನಿರ್ಮಾಣ ಕಂಪನಿಗಳ ಮಾಲೀಕರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಜತೆ ಸಭೆ ಮಾಡಿದ್ದು, ಈ ಸಭೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಯಾವ ರೀತಿಯಲ್ಲಿ ಬಸ್ ಗಳ ಬಾಡಿ ಬಿಲ್ಡಿಂಗ್ ಮಾಡಬೇಕು? ಎಷ್ಟು ಎಮರ್ಜೆನ್ಸಿ ಡೋರ್ ಇಡಬೇಕು? ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದು, ಅಂತಿಮವಾಗಿ 8 ನಿಯಮಗಳ ಕಡ್ಡಾಯ ಪಾಲನೆ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ.
ರಾಮಲಿಂಗಾರೆಡ್ಡಿ ಖಡಕ್ ಸೂಚನೆ
ಪ್ರಯಾಣಿಕರಿಗೆ ಯಾವ ರೀತಿಯಲ್ಲಿ ಮಾಹಿತಿ ನೀಡಬೇಕು? ಫೈರ್ ಎಸ್ಟಿಂಗ್ ವಿಷರ್ ಗಳನ್ನು ಅಳವಡಿಸುವ ಬಗ್ಗೆ,ಎಮರ್ಜೆನ್ಸಿ ಎಕ್ಸಿಟ್ ಡೋರ್ ಗಳ ಬಳಿ ಯುವಕರು ಮತ್ತು ಮಧ್ಯ ವಯಸ್ಕರಿಗೆ ಸೀಟ್ ನೀಡಬೇಕು, ಎಸಿ ಬಸ್ಸುಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಹೇಗೆ ನಂದಿಸಬೇಕು? ಹೊರಗೆ ಬರಲು ಗ್ಲಾಸ್ ಹೊಡೆಯಲು ಹ್ಯಾಮರ್ ಗಳನ್ನು ಇಡಬೇಕು? ಪ್ರಯಾಣಿಕರು ಡೋರ್ ಜಂಪ್ ಮಾಡಲು ಮೆಟ್ಟಿಲುಗಳ ವ್ಯವಸ್ಥೆ ಮಾಡಬೇಕು, ಬೆಂಕಿ ಕಾಣಿಸಿಕೊಂಡರೇ ಪ್ರಯಾಣಿಕರಿಗೆ ಡ್ರೈವರ್ ಅಲರಾಂ ನೀಡಬೇಕು. ಹೀಗೆ ಖಾಸಗಿ ಬಸ್ ಮಾಲೀಕರಿಗೆ ಮತ್ತು ಬಸ್ ಬಾಡಿ ಬಿಲ್ಡಿಂಗ್ ಮಾಡುವ ಕಂಪನಿಗಳಿಗೆ ಸಾರಿಗೆ ಸಚಿವರು ಖಡಕ್ ಆಗಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬಸ್ಗಳಲ್ಲೂ ವಿಮಾನದ ಗಗನಸಖಿಯರ ರೀತಿ ಸಂದೇಶ! ಸಾರಿಗೆ ಇಲಾಖೆಯಿಂದ ಖಾಸಗಿ ಬಸ್ಗಳಿಗೆ ಹೊಸ ನಿಯಮ
ಸ್ಲೀಪರ್ ಬಸ್ ಗಳಿಗೆ 8 ನಿಯಮ ಪಾಲನೆ ಕಡ್ಡಾಯ
- ಸ್ಲೀಪರ್ ಬಸ್ ಗಳಲ್ಲಿ ಚಾಲಕರ ಹಿಂಬದಿ ಡೋರ್ ತೆಗೆಯಬೇಕು.
- ಸ್ಲೀಪರ್ ಬರ್ತ್ ಗಳಲ್ಲಿ ಸ್ಲೈಡರ್ ತೆಗೆಯಬೇಕು
- ಫೈರ್ ಡಿಟೆಕ್ಷನ್ ಅನ್ನ ತಿಂಗಳೊಳಗೆ ಅಳವಡಿಸಬೇಕು
- 10ಕೆಜಿ ತೂಕದ ಅಗ್ನಿ ಶಾಮಕ ಸಾಧನ ಅಳವಡಿಕೆ ಕಡ್ಡಾಯ
- ಚಾಸಿಸ್ ಅನಧಿಕೃತ ವಿಸ್ತರಣೆಗೆ ಬ್ರೇಕ್
- ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರಮಾಣ ಪತ್ರ ಕಡ್ಡಾಯ
- ಪ್ರಯಾಣಿಕರ ಸೇಫ್ಟಿ ಮಾನದಂಡ ಇದ್ದರೆ ಮಾತ್ರ ಎಫ್ ಸಿ ಮಾಡಬೇಕು
- ಬಸ್ ಕವಚ ನಿರ್ಮಾಣ ಸಂಸ್ಥೆ ಸಿಂಧುತ್ವ ಪರಿಶೀಲಿಸಿದ ನಂತರವೇ ನೋಂದಣಿ ಮಾಡಬೇಕು
ಇನ್ನೂ ಗುಜರಾತಿನ 41 ವಾಹನಗಳಿಗೆ ಕೋರಮಂಗಲ ಆರ್ಟಿಓ ಕಚೇರಿಯಲ್ಲಿ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ ಬಗ್ಗೆ ಟಿವಿ9 ನಿನ್ನೆ ಸುದ್ದಿ ಪ್ರಸಾರ ಮಾಡಿತ್ತು. ರೂಲ್ಸ್ ಪ್ರಕಾರ ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ಪ್ರಕಾರ, ಯಾವುದೇ ರಾಜ್ಯದಲ್ಲಾದರೂ ವಾಹನಗಳ ಎಫ್‌ಸಿ ಮಾಡಿಸಿಕೊಳ್ಳಲು ಅವಕಾಶವಿದೆ. ಆದರೆ, ವಾಹನವವನ್ನು ಖುದ್ದು ಆರ್‌ಟಿಒ ಮುಂದೆ ಹಾಜರುಪಡಿಸಿದ ನಂತರ ಪರಿಶೀಲನೆ ನಡೆಸಿಯೇ ಎಫ್‌ಸಿ ನೀಡಬೇಕು ಎಂಬ ನಿಯಮವಿದೆ. ಆದರೆ, ಕೋರಮಂಗಲ ಆರ್‌ಟಿಒ ಅಧಿಕಾರಿಗಳು, ವಾಹನಗಳು ಇಲ್ಲಿಗೆ ಬಂದಿದ್ದವು, ನಾವು ಖುದ್ದಾಗಿ ಪರಿಶೀಲಿಸಿದ್ದೇವೆ ಎಂದು ಸುಳ್ಳು ಹೇಳಿ ಎಫ್‌ಸಿಗಳನ್ನು ನೀಡಿದ್ದರು.
ಆ ಸಮಯದಲ್ಲಿ ಆ ವಾಹನಗಳು ಗುಜರಾತ್‌ನಲ್ಲಿ ಸಂಚರಿಸುತ್ತಿರುವುದನ್ನು ಅಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳು ದಾಖಲೆ ಸಮೇತ ಬಹಿರಂಗಪಡಿಸಿದ್ದರು. ಈ ಸಂಬಂಧ ಕೋರಮಂಗಲ ಆರ್‌ಟಿಒದ ಹಿರಿಯ ಮೋಟಾರು ನಿರೀಕ್ಷಕ ನಿಸಾರ್ ಅಹಮದ್ ಅವರನ್ನು ಅಮಾನತುಗೊಳಿಸಲಾಗಿದೆ. ಇತ್ತ ಸಾರಿಗೆ ಇಲಾಖೆಯ ಸೂಚನೆಗೆ ಖಾಸಗಿ ಬಸ್ ಮಾಲೀಕರ ಸಂಘ ನಾವು ಸಾರಿಗೆ ರೂಲ್ಸ್ ಅಳವಡಿಸಿಕೊಳ್ಳುತ್ತೇವೆ. ಆದರೆ ಅದಕ್ಕೆ 6 ತಿಂಗಳುಗಳ ಕಾಲಾವಕಾಶ ಬೇಕು ಎಂದು ಮನವಿ ಮಾಡಿದ್ದಾರೆ.