ಕೋಗಿಲು ನಿವಾಸಿಗಳು ನಿರಾಶ್ರಿತರಲ್ಲ, ಲಕ್ಷಾಧಿಪತಿಗಳು! ಆರೋಪಿಗಳ ಖಾತೆಯಲ್ಲಿ ನಡೆದಿತ್ತು ಕೋಟಿ-ಕೋಟಿ ವ್ಯವಹಾರ
ಕೇರಳ ಮತ್ತು ಕರ್ನಾಟಕದ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ ಕೋಗಿಲು ಲೇಔಟ್ ಅಕ್ರಮ ಶೆಡ್, ಮನೆಗಳ ತೆರವು ಕಾರ್ಯಾಚರಣೆ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಸರ್ಕಾರಿ ಭೂಮಿ ಒತ್ತುವರಿ ಮಾಡಲು ಕುಮ್ಮಕ್ಕು ಕೊಟ್ಟವರ ಕೋಟಿಕೋಟಿ ಹಣದ ವ್ಯವಹಾರ ತನಿಖೆಯಲ್ಲಿ ಬಯಲಾಗಿದ್ದು, ಈ ಹಿನ್ನೆಲೆ ಪುನರ್ವಸತಿ ನೀಡದೇ ಇರುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಬೆಂಗಳೂರು, ಜನವರಿ 27: ಕೋಗಿಲು ಲೇಔಟ್ನಲ್ಲಿರುವ (Kogilu Layout) ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ಪ್ರಕರಣ ಇಡೀ ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಕೇರಳದ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರವನ್ನು ‘ಬುಲ್ಡೋಜರ್ ರಾಜ್’ ಎಂದು ಟೀಕೆ ಮಾಡಿದ್ದರು. ಅಷ್ಟೇ ಯಾಕೆ, ಶತ್ರು ರಾಷ್ಟ್ರ ಪಾಕಿಸ್ತಾನ ಕೂಡಾ ಕೋಗಿಲು ಲೇಔಟ್ ಒತ್ತುವರಿ ಬಗ್ಗೆ ಟೀಕೆ ಮಾಡಿತ್ತು. ಆದರೆ ಈಗ, ಕೋಗಿಲು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರಿಗೆ ರೋಚಕ ಸಂಗತಿಗಳು ಗೊತ್ತಾಗಿವೆ. ಕೋಗಿಲು ಲೇಔಟ್ನ ಫಕೀರ್ ಕಾಲೋನಿ ಹಾಗೂ ವಸೀಂ ಲೇಔಟ್ನಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿದವರಿಂದ ಲಕ್ಷ ಲಕ್ಷ ಹಣ ಪಡೆಯಲಾಗಿತ್ತು. ಸುಮಾರು 2 ಕೋಟಿ ರೂಪಾಯಿಗೂ ಅಧಿಕ ಹಣದ ವ್ಯವಹಾರ ನಡೆದಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೋಗಿಲು ಲೇಔಟ್ನ ಫಕೀರ್ ಲೇಔಟ್ ಹಾಗೂ ವಸೀಂ ಲೇಔಟ್ನಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಆರೋಪಿಗಳಾದ ವಸೀಂ ಹಾಗೂ ವಿಜಯ್ ಮತ್ತು ರಾಬಿನ್ ಎಂಬುವವರು ಲಕ್ಷ ಲಕ್ಷ ಹಣ ಪಡೆದಿದ್ದರು ಎನ್ನಲಾಗಿದೆ. ಮೂವರ ಬ್ಯಾಂಕ್ ಖಾತೆಗಳ ಜಾಲಾಡಿದಾಗ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿರುವುದು ಗೊತ್ತಾಗಿದೆ. ಪೊಲೀಸರ ತನಿಖೆಯಲ್ಲಿ ಈ ಸತ್ಯ ಬಯಲಾಗುತ್ತಿದ್ದಂತೆಯೇ, ಒತ್ತುವರಿದಾರರಿಗೆ ಪುನರ್ವಸತಿ ನೀಡದೇ ಇರುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಕೋಗಿಲು ನಿವಾಸಿಗಳು ಹೇಳಿದ್ದೇನು?
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೋಗಿಲು ನಿವಾಸಿಗಳು, ಎಲ್ಲರೂ ಮನೆ ಕಟ್ಟಿಕೊಂಡರು. ನಾವು ಕೂಡ ಮನೆ ಕಟ್ಟಿಕೊಂಡಿದ್ದೇವೆ. ಎರಡ್ಮೂರು ವರ್ಷದ ಹಿಂದೆ ಇಲ್ಲಿ ನಾವು ಮನೆ ನಿರ್ಮಾಣ ಮಾಡಿದ್ದೇವೆ ಎಂದಿದ್ದಾರೆ.
ಲಕ್ಷಾಂತರ ರೂಪಾಯಿ ಕೊಟ್ಟು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ಯಾಕೆ ಪುನರ್ವಸತಿ ನೀಡಬೇಕೆಂಬ ಚರ್ಚೆ ಶುರುವಾಗಿದೆ. ಆರಂಭದಲ್ಲಿ ಅಲ್ಲಿದವರು ಬಡವರು ಎಂಬ ಮಾನವೀಯತೆ ಇತ್ತು. ಆದರೆ ಕೋಟ್ಯಂತರ ರೂಪಾಯಿ ವ್ಯವಹಾರದ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಯಲಾಗಿದ್ದು, ಇದೀಗ 26 ಜನರಿಗೆ ಪುನರ್ವಸತಿ ನೀಡಬೇಕು ಎಂದಿಕೊಂಡಿದ್ದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಒತ್ತುವರಿದಾರರಿಗೆ ಪುನರ್ವಸತಿ ಅನುಮಾನ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್ : ಮೊದಲ ಹಂತದಲ್ಲಿ 80 ಅರ್ಜಿಗಳು ತಿರಸ್ಕೃತ
ಒಟ್ಟಿನಲ್ಲಿ ಕೋಗಿಲು ಲೇಔಟ್ ಅಕ್ರಮ ಒತ್ತುವರಿ ತೆರವು ಮಾಡಿ ಇಂದಿಗೆ 38 ದಿನಗಳಾಗಿವೆ. ಆದರೆ ಇಲ್ಲಿನ ನಿವಾಸಿಗಳಿಗೆ ಮನೆ ಕೊಡುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಸರ್ಕಾರವೂ ಮಾಹಿತಿ ನೀಡುತ್ತಿಲ್ಲ. ಇದರಿಂದ ಕೋಗಿಲು ನಿವಾಸಿಗಳು ಗೊಂದಲಕ್ಕೊಳಗಾಗಿದ್ದಾರೆ.