Bengaluru Rains: ಕಾಮಾಕ್ಯ ಬಡಾವಣೆಯಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು, ಕೊಚ್ಚಿ ಹೋದ ವಾಹನಗಳು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 15, 2022 | 7:32 AM

ನೋಡನೋಡುತ್ತಿದ್ದಂತೆ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದ್ದು, ಸುಮಾರು ಆರು ಅಡಿಗಳಷ್ಟು ನೀರು ನಿಂತಿದೆ. ಸ್ಥಳೀಯರು ರಾತ್ರಿಯಿಡೀ ನಿದ್ದೆಗೆಟ್ಟು ನೀರು ಹೊರಹಾಕುತ್ತಿದ್ದಾರೆ.

Bengaluru Rains: ಕಾಮಾಕ್ಯ ಬಡಾವಣೆಯಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು, ಕೊಚ್ಚಿ ಹೋದ ವಾಹನಗಳು
ಬೆಂಗಳೂರಿನ ಕಾಮಾಕ್ಯದಲ್ಲಿ ಮನೆಗಳಿಗೆ ನೀರು ನುಗ್ಗಿದೆ.
Follow us on

ಬೆಂಗಳೂರು: ನಗರದ ಕಾಮಾಕ್ಯ ಬಡಾವಣೆಯ 50ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ಅಕ್ಕಿ, ಬೇಳೆ ಸೇರಿ ದಿನಬಳಕೆ ವಸ್ತುಗಳು ಹಾಳಾಗಿವೆ. ಫ್ರಿಡ್ಜ್, ವಾಷಿಂಗ್ ಮಷೀನ್, ಟಿವಿ, ಕಂಪ್ಯೂಟರ್ ಸೇರಿದಂತೆ ದುಬಾರಿ ಎಲೆಕ್ಟ್ರಾನಿಕ್ ವಸ್ತುಗಳೆಲ್ಲ ನೀರು ಪಾಲಾಗಿವೆ. ನೋಡನೋಡುತ್ತಿದ್ದಂತೆ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದ್ದು, ಸುಮಾರು ಆರು ಅಡಿಗಳಷ್ಟು ನೀರು ನಿಂತಿದೆ. ಸ್ಥಳೀಯರು ರಾತ್ರಿಯಿಡೀ ನಿದ್ದೆಗೆಟ್ಟು ನೀರು ಹೊರಹಾಕುತ್ತಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿರುವ ಚರಂಡಿಯ ನೀರು ಮನೆಗಳಿಗೆ ನುಗ್ಗಿತು. ಪ್ರಾಣ ಉಳಿಸಿಕೊಳ್ಳಲು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ರಭಸವಾಗಿ ಹರಿದ ನೀರಿನಲ್ಲಿ ಕಾರುಗಳು ತೇಲಿಹೋದವು. ಒಂದರ ಮೇಲೆ ಮತ್ತೊಂದು ಕಾರು ಡೆಡ್​ಎಂಡ್​ನಲ್ಲಿ ನಿಂತಿತ್ತು. ಟಿವಿ9 ಪ್ರತಿನಿಧಿ ಎದುರು ತಮ್ಮ ಪರಿಸ್ಥಿತಿ ವಿವರಿಸಿದ ಸ್ಥಳೀಯರು, ‘ಘಟನೆ ಆದಾಗ ಮನೆಯಲ್ಲಿಯೇ ಇದ್ದೆವು. ಏನು ಮಾಡಬೇಕೆಂದು ತಿಳಿಯದೆ ಡೋರ್ ಲಾಕ್ ಮಾಡಿಕೊಂಡೆವು. ಮುಂದೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಎರಡು ವರ್ಷದಿಂದ ಇಲ್ಲಿಯೇ ವಾಸವಿದ್ದೇವೆ. ಇಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ಇದೇ ಮೊದಲು. ಬಿಬಿಎಂಪಿಯವರು ಸಕಾಲಕ್ಕೆ ರಸ್ತೆ ಸರಿಪಡಿಸಿದ್ದರೆ ಇಂಥ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಈಗ ಮನೆಯೊಳಗೆ ಕ್ಲೀನ್ ಮಾಡಿಕೊಳ್ತಿದ್ದೀವಿ. ಫ್ರಿಡ್ಜ್, ವಾಷಿಂಗ್ ಮಷಿನ್, ಟಿವಿ, ಕಂಪ್ಯೂಟರ್, ಕಾಟ್ ಎಲ್ಲವೂ ಹಾಳಾಗಿದೆ’ ಎಂದು ಅಳಲು ತೋಡಿಕೊಂಡರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮತ್ತು ಹಿರಿಯ ಅಧಿಕಾರಿ ರಾಕೇಶ್ ಸಿಂಗ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜನರು, ‘ಇದಕ್ಕೆಲ್ಲಾ ಯಾರು ಹೊಣೆ’ ಎಂದು ಪ್ರಶ್ನಿಸಿದರು. ‘ರಾಜಕಾಲುವೆ ನೀರು ಏಕಾಏಕಿ ರಸ್ತೆಗೆ ಹರಿದಿದೆ. ಅಪೂರ್ಣ ಮತ್ತು ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣ. ಮನೆಗಳ ಮುಂದೆ ನಿಲ್ಲಿಸಿದ್ದ 20ಕ್ಕೂ ಹೆಚ್ಚು ಕಾರುಗಳು ತೇಲಿ ಹೋಗಿವೆ. ಮನೆಯೊಳಗೆ ನೀರು ನುಗ್ಗಿದ್ದರಿಂದ ದಿನಬಳಕೆ ವಸ್ತುಗಳು, ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗಿವೆ. ಈ ಪರಿಸ್ಥಿತಿಗೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

ಸ್ಥಳ ಪರಿಶೀಲನೆ ನಂತರ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತ, ‘ರಸ್ತೆಗೆ ರಾಜಕಾಲುವೆಯ ನೀರು ಹರಿದಿದೆ. ವಿದ್ಯಾಪೀಠ ಸಮೀಪ 77 ಮಿಮೀ ಮಳೆಯಾಗಿದೆ. ಒಮ್ಮೆಲೆ ದೊಡ್ಡಮಟ್ಟದಲ್ಲಿ ಮಳೆಯಾಗಿರುವ ಕಾರಣ ಹೀಗಾಗಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

ಮಗು ಸಾಕೋದು ಹೇಗೆ?
ಬೆಂಗಳೂರಿನ ಕಾಮಾಕ್ಯ ಬಡಾವಣೆಯಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ಮಣಿ ಅವರ ಮನೆಗೆ ನೀರು ನುಗ್ಗಿದ್ದು, 18 ವರ್ಷಗಳಿಂದ ಒಂದೇ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಅವರ ಬದುಕು ನೀರುಪಾಲಾಗಿದೆ. ಅಕ್ಕಿ, ಬೇಳೆ, ಗೃಹೋಪಯೋಗಿ ವಸ್ತುಗಳು, ಬಟ್ಟೆಗಳು ಸಹ ಕೊಚ್ಚೆ ನೀರಿನಿಂದ ಹಾಳಾಗಿವೆ. ಮನೆಯಲ್ಲಿ 5 ತಿಂಗಳ ಮಗು ಇದೆ, ಜೀವನ ಮಾಡಲು ಕಷ್ಟ. ಫುಟ್​ಪಾತ್ ಮೇಲೆ ಮಲಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಾದರೂ ನೆರವಿಗೆ ಬರಬೇಕು ಎಂದು ಅವರು ಮನವಿ ಮಾಡಿದರು.

ಜೋಳದ ಹಿಟ್ಟು ನೀರು ಪಾಲು
ಅಕಾಲಿಕ ಮಳೆಯಿಂದ ಉತ್ತರ ಕರ್ನಾಟಕ ಶೈಲಿಯ ಊಟದ ಮನೆಗೆ ನೀರು ನುಗ್ಗಿದೆ. ಮನೆಯಲ್ಲಿದ್ದವರು ರೊಟ್ಟಿ ಕೊಟ್ಟು ಬರುವಷ್ಟರಲ್ಲಿ ಅನಾಹುತ ಸಂಭವಿಸಿದ್ದು, ಮನೆಯಲ್ಲಿದ್ದ ಜೋಳದ ಹಿಟ್ಟು, ರೇಷನ್ ಎಲ್ಲವೂ ನೀರುಪಾಲಾಗಿದೆ. ಉತ್ತರ ಕರ್ನಾಟಕ ಶೈಲಿಯ ಊಟವನ್ನು ಮನೆಯಲ್ಲೇ ತಯಾರು ಮಾಡಿ ಸಪ್ಲೈ ಮಾಡುವ ಮೂಲಕ ಕುಟುಂಬ ಜೀವನ ಮಾಡುತ್ತಿತ್ತು. ಏಳು ಗಂಟೆಗೆ ಸರಿಯಾಗಿ ಮನೆಯೊಳಗೆ ಚರಂಡಿ ನೀರು ನುಗ್ಗಿದೆ. ಮನೆ ಕ್ಲೀನ್ ಮಾಡುವುದೇ ಕಷ್ಟ ಎನಿಸುತ್ತಿದೆ. ದಾಸ್ತಾನು ಮಾಡಿಕೊಂಡಿದ್ದ ಹಿಟ್ಟು, ದಿನಸಿ ಹಾಳಾಗಿದೆ. ಬದುಕುವುದು ಹೇಗೆ ತಿಳಿಯುತ್ತಿಲ್ಲ ಎಂದು ಶಾಂಭವಿ ಪ್ರತಿಕ್ರಿಯಿಸಿದರು.

ಪಾನಿಪುರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಸರೋಜಮ್ಮ ಅವರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ನೀರು ನುಗ್ಗಿದಾಗ ಮನೆಯಲ್ಲಿದ್ದ ತಟ್ಟೆ, ಲೋಟ, ಬಿಂದಿಗೆ, ಬಕೆಟ್, ಕುಕ್ಕರ್, ದೇವರಫೋಟೊಗಳು ತೇಲುತ್ತಿದ್ದವು. ಬೀರುಗೂ ನೀರು ನುಗ್ಗಿ ಎಲ್ಲವೂ ಹಾಳಾಗಿದೆ. ಸುಮಾರು ಒಂದೂವರೆ ಲಕ್ಷ ರೂಪಾಯಿಯಷ್ಟು ಬೆಲೆ ಬಾಳುವ ವಸ್ತುಗಳು ಹಾಳಾಗಿವೆ. ಮನೆಯಲ್ಲಿ ಆಳೆತ್ತರಕ್ಕೆ ನೀರು ನುಗ್ಗಿದ ಕಾರಣ ಮನೆಯಿಂದ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡೆವು. ಈಗ ಅಕ್ಕಪಕ್ಕದವರು ಬಂದು ಸಹಾಯ ಮಾಡುತ್ತಿದ್ದಾರೆ ಎಂದು ಸರೋಜಮ್ಮ ತಿಳಿಸಿದರು.

ಯಶ್ ಅಭಿಮಾನಿ ಕುಟುಂಬದ ಕಾರು ನೀರು ಪಾಲು
ಭಾರಿ ಮಳೆಗೆ ಚರಂಡಿ ನೀರು ನುಗ್ಗಿ ಕಾರು ಕೊಚ್ಚಿಹೋದ ಘಟನೆ ಬೆಂಗಳೂರಿನ ಕಾಮಾಕ್ಯ ಚಿತ್ರಮಂದಿರದ ಬಳಿ ನಡೆದಿದೆ. ನೀರಿನಲ್ಲಿ ಕೊಚ್ಚಿಹೋಗಿದ್ದ ಕಾರು ಬೈಕ್‌ ಮೇಲೆ ಬಿದ್ದಿತ್ತು. ಅದೇ ಕಾರಿನ‌ ಮೇಲೆ ಮತ್ತೊಂದು ಕಾರು ಬಂದು ನಿಂತಿತ್ತು. ಕಾರಿಗೆ ಹಾನಿಯಾದ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ಟ್ಯಾಕ್ಸಿ ಓಡಿಸಿಕೊಂಡಿದ್ದ ಮಾಲೀಕ ಶಶಿಕುಮಾರ್ ಕಣ್ಣೀರಿಟ್ಟರು. ತಾಯಿಯ ಹುಟ್ಟುಹಬ್ಬ ಜೊತೆಗೆ ನಾವೆಲ್ಲರೂ ಯಶ್ ಅಭಿಮಾನಿಗಳು. ಹೀಗಾಗಿ ಕುಟುಂಬ ಸಮೇತ ಸಿನಿಮಾಗೆ ಬಂದಿದ್ದೆವು. ನನ್ನ ತಮ್ಮ ಸಿನಿಮಾಗೆ ಬರಲ್ಲ ಎಂದು ಹೇಳಿದ್ದ. ನಾನೇ ಬಲವಂತ ಮಾಡಿ ಕರೆದುಕೊಂಡು ಬಂದೆ. ಸಿನಿಮಾ ನೋಡಿ ಹೊರಗೆ ಬರುವಷ್ಟರಲ್ಲಿ ಕಾರು ಕೊಚ್ಚಿಹೋಗಿದೆ ಎಂದು ಕಾರಿನ ಸ್ಥಿತಿ ಕಂಡ ಶಶಿಕುಮಾರ್ ಅಕ್ಕ ಹಂಸ ಅತ್ತುಬಿಟ್ಟರು. ರಾಜಕಾರಣಿಗಳ ಬೆಂಬಲಿಗರು ಈಗ ಊಟ ತರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ಊಟ ತಿನ್ನಲು ಆಗುತ್ತಾ? ಈಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರ ಜೊತೆಗೆ ಕಾರಿನ ಪರಿಸ್ಥಿತಿ ಈ ರೀತಿಯಾಗಿದೆ. ನಾವು ಕಾರಿನ ಇಎಂಐ ಕಟ್ಟೋದು ಹೇಗೆ ಎಂದು ಅವರು ಅಳಲು ತೋಡಿಕೊಂಡರು. 7.30ರ ಶೋಗೆ ಬಂದಿದ್ದ ಕುಟುಂಬಸ್ಥರು 11 ಗಂಟೆಗೆ ಹೊರಗೆ ಬಂದು ನೋಡಿದಾಗ ಕಾರು ಕಾಣಿಸುತ್ತಿರಲಿಲ್ಲ ಎಂದು ತಿಳಿಸಿದರು.

ಕಾರಿನ ಸ್ಥಿತಿ ಕಂಡು ಅಳಲು ಆರಂಭಿಸಿದ ಮಾಲೀಕ ಶಶಿಕುಮಾರ್, ಕಾರು ರಿಪೇರಿ ಮಾಡಿಸಲು 15 ದಿನ ಸಮಯ ಬೇಕು. ನಾವು ಅವತ್ತು ದುಡಿದು ಅವತ್ತೇ ತಿನ್ನೋರು. 15 ದಿನ ದುಡಿಮೆ ಇಲ್ಲ ಅಂದ್ರೆ ಜೀವನ ಮಾಡೋದು ಹೇಗೆ? ಇಎಂಐ ಹೇಗೆ ಕಟ್ಟೋದು ಎಂದು ಕೇಳಿದರು. ನೀರು ಸರಾಗವಾಗಿ ಹರಿಯಲು ಅವಕಾಶ ಇದ್ದಿದ್ದರೆ ನನ್ನ ಕಾರು ಇಂದು ನೀರಿನಲ್ಲಿ ಕೊಚ್ಚಿ ಹೋಗುತ್ತಿರಲಿಲ್ಲ. ಇದಕ್ಕೆ ಪರಿಹಾರ ಕೊಡೋರು ಯಾರೆಂದು ಕೇಳಿದರು.

ಇದನ್ನೂ ಓದಿ: Karnataka Rain: ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಇಂದೂ ಕೂಡ ಮಳೆ ಸಾಧ್ಯತೆ

ಇದನ್ನೂ ಓದಿ: Bengaluru Rain: ಬೆಂಗಳೂರು ನಗರದ ಹಲವೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ