Bangalore Rains: ಬೆಂಗಳೂರಿನಲ್ಲಿ ಭಾರಿ ಮಳೆ, ಮರದ ಕೊಂಬೆ ಬಿದ್ದು 6 ಜನರಿಗೆ ಗಾಯ

|

Updated on: Aug 13, 2024 | 7:08 AM

ಬೆಂಗಳೂರಿನ ಹಲವೆಡೆ ಸೋಮವಾರ ಬೆಳಗ್ಗೆ ಹಾಗೂ ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆಗಳು ನದಿಯಂತಾಗಿದ್ದವು. ನೀರು ತುಂಬಿರುವ ರಸ್ತೆಯಲ್ಲೇ ಸವಾರರು ಸಂಚಾರ ಮಾಡಬೇಕಾಯಿತು. ಮರದ ಕೊಂಬೆಗಳು ರಸ್ತೆಗೆ ಬಿದ್ದವು. ಕೆ.ಆರ್.ಮಾರ್ಕೆಟ್ ಕೆಸರುಗದ್ದೆಯಾಗಿತ್ತು. ಟ್ರಾಫಿಕ್​​ನಲ್ಲಿ ಸಿಲುಕಿ ಜನ ಪರದಾಡುವಂತಾಗಿತ್ತು. ಮರದ ಕೊಂಬೆ ಬಿದ್ದು 6 ಜನ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Bangalore Rains: ಬೆಂಗಳೂರಿನಲ್ಲಿ ಭಾರಿ ಮಳೆ, ಮರದ ಕೊಂಬೆ ಬಿದ್ದು 6 ಜನರಿಗೆ ಗಾಯ
ಬೆಂಗಳೂರಿನಲ್ಲಿ ಭಾರಿ ಮಳೆ, ಮರದ ಕೊಂಬೆ ಬಿದ್ದು 6 ಜನರಿಗೆ ಗಾಯ
Follow us on

ಬೆಂಗಳೂರು, ಆಗಸ್ಟ್ 13: ಬೆಂಗಳೂರಲ್ಲಿ ಸೋಮವಾರ ಬೆಳಗ್ಗೆ ಹಾಗೂ ರಾತ್ರಿ ಸುರಿದ ಮಳೆಗೆ ಸಂಕಷ್ಟಗಳ ಪ್ರವಾಹವೇ ಸೃಷ್ಟಿಯಾಗಿತ್ತು. ಮಾರುತಿ ಸೇವಾನಗರದಲ್ಲಿ ಬೃಹತ್ ಮರದ ಕೊಂಬೆ ಪಾದಚಾರಿಗಳ ಮೇಲೆ ಬಿದ್ದು ಶಾಲೆಗೆ ತೆರಳುತ್ತಿದ್ದ ಬಾಲಕಿ ಸೇರಿ 6 ಮಂದಿ ಗಾಯಗೊಂಡಿದ್ದಾರೆ. ಮಹಿಳೆಯೊಬ್ಬರ ಕಾಲು ಮುರಿದಿದೆ. ಓರ್ವ ವ್ಯಕ್ತಿಯ ಎದೆಗೆ ಪೆಟ್ಟಾಗಿದ್ದು ಬೆನ್ನುಮೂಳೆ ಮುರಿದಿದೆ. ಡಿಸಿಎಂ ಡಿಕೆ ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿದ್ದಾರೆ.

2 ಕಿ.ಮೀ ರಸ್ತೆ ಮೇಲೆ ನೀರು ನಿಂತು ಅವಾಂತರ

ಕುಂದಲಹಳ್ಳಿಯಿಂದ ವರ್ತೂರು ಸಂಪರ್ಕಿಸುವ ರಸ್ತೆ ಕೆಸರು ಗದ್ದೆಯಂತೆ ಆಗಿತ್ತು. ರಸ್ತೆಯಲ್ಲಿ 2 ಅಡಿ ನೀರು ನಿಂತು 2 ಕಿಲೋ ಮೀಟರ್​ವರೆಗೆ ವಾಹನ ಸವಾರರು ಸರ್ಕಸ್ ಮಾಡಿದರು. ಇತ್ತ ಸಿಲ್ಕ್​ಬೋರ್ಡ್ ಜಂಕ್ಷನ್​ನಲ್ಲಿ ರಾಜಕಾಲುವೆ ತುಂಬಿ ನೀರು ರಸ್ತೆಗೆ ನುಗ್ಗಿತ್ತು. ಟ್ರಾಫಿಕ್ ಜಾಮ್​ನಲ್ಲಿ ಸವಾರರು ಹೈರಾಣಾದರು.

ಬೆಂಗಳೂರು ಸೇರಿ ರಾಜ್ಯದಾದ್ಯಂತ ಮಳೆ ಎಚ್ಚರಿಕೆ

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ರಾಮನಗರ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ ಆಗೋ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಯಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ.

ಶಿರೂರು ಗುಡ್ಡ ಕುಸಿತ ಜಾಗದಲ್ಲಿ ಮತ್ತೆ ಶೋಧಕಾರ್ಯ

ಉತ್ತರ ಕನ್ನಡ ಜಿಲ್ಲೆ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮಳೆ ಕಡಿಮೆಯಾಗಿದ್ದರಿಂದ ಗಂಗಾವಳಿ ನದಿ ನದಿ ನೀರಿನ ರಭಸ ತಗ್ಗಿದೆ. ನೌಕಾದಳದ ರಾಡಾರ್ ಸರ್ಚ್ ಮೂಲಕ ಮತ್ತೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಕಣ್ಮರೆಯಾದ ಮೂವರಿಗಾಗಿ ಶೋಧ ಕಾರ್ಯ ನಡೆಯಲಿದೆ. ನೌಕಾ ದಳ, ಎನ್​​ಡಿಆರ್​ಎಫ್ ಹಾಗೂ ಎಸ್​​ಡಿಆರ್​ಎಫ್ ತಂಡಗಳು ಕಾರ್ಯಾಚರಣೆ ನಡೆಸಲಿವೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಗೇಟ್ ಕಟ್​ಗೆ ಸ್ಫೋಟಕ ಕಾರಣ ಕೊಟ್ಟ ಎಚ್​​ಡಿಕೆ, ಜತೆಗೊಂದು ಸಲಹೆ

ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ