
ಬೆಂಗಳೂರು, ಜ.29: ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಇಂದು ಸಚಿವರು, ಶಾಸಕರು, ಸಂಸದರು, ಎಂಎಲ್ಸಿಗಳ ಜೊತೆ 2024-25ನೇ ಸಾಲಿನ ಬಿಬಿಎಂಪಿ ಬಜೆಟ್ (BBMP Budget) ಪೂರ್ವಭಾವಿ ಸಭೆ ನಡೆಸಿದರು. ಈ ವೇಳೆ ಜನಪ್ರತಿನಿಧಿಗಳು ನಗರದಲ್ಲಿನ ಸಮಸ್ಯೆಗಳನ್ನು ಬಿಚ್ಚಿಟ್ಟರು. ಸಮಸ್ಯೆ, ಸಲಹೆಗಳನ್ನು ಆಲಿಸಿದ ಡಿಕೆ ಶಿವಕುಮಾರ್, ಎಲ್ಲವನ್ನೂ ಒಂದೊಂದಾಗಿಯೇ ಸರಿಪಡಿಸುವ ಭರವಸೆ ನೀಡಿದ್ದಾರೆ.
ಬಿಬಿಎಂಪಿ ಬಜೆಟ್ ಸಿದ್ಧತೆ ಕುರಿತು ಸಲಹೆ ಮತ್ತು ಸೂಚನೆಗಳನ್ನು ಡಿಕೆ ಶಿವಕುಮಾರ್ ಪಡೆದರು. ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ, ಕುಡಿಯುವ ನೀರಿನ ಸಮಸ್ಯೆ, ಘನತ್ಯಾಜ್ಯ ವಿಲೇವಾರಿ ವಿಚಾರವಾಗಿ ನಗರದಲ್ಲಿ ಸಮಸ್ಯೆ ಉದ್ಭವಿಸಿದೆ. ಅಲ್ಲದೆ, 2013ರಿಂದ ಕುಡಿಯುವ ನೀರಿನ ದರ ಹೆಚ್ಚಳವಾಗಿಲ್ಲ. ಶೇಕಡಾ 50ಕ್ಕಿಂತ ಹೆಚ್ಚು ಜನ ಸರಿಯಾಗಿ ತೆರಿಗೆ ಪಾವತಿ ಮಾಡುತ್ತಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ನಾನು ಸಣ್ಣ ಸಮೀಕ್ಷೆ ಮಾಡಿದಾಗ ಸರಿಯಾಗಿ ತೆರಿಗೆ ಪಾವತಿ ಮಾಡುತ್ತಿಲ್ಲ. ಹೀಗಾಗಿ ಬೆಂಗಳೂರಿನವರ ಆಸ್ತಿಗಳ ದಾಖಲೆ ಸ್ಕ್ಯಾನ್ ಮಾಡಿಸಲಾಗುತ್ತಿದೆ. ಆಸ್ತಿ ತೆರಿಗೆ ಮಸೂದೆ ತಿದ್ದುಪಡಿ ಮಾಡಿದಾಗ ದಂಡದ ಪ್ರಮಾಣ ಹೆಚ್ಚಳ. ಹೀಗಾಗಿ ಕಾನೂನಿನಲ್ಲಿ ಮತ್ತೆ ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ. ಎಲ್ಲಾ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಎಲ್ಲವನ್ನೂ ಒಂದೇ ಬಾರಿಗೆ ಬಗೆಹರಿಸಲು ಆಗುವುದಿಲ್ಲ. ಬಿಡಿಎ, ಜಲಮಂಡಳಿ, ಬೆಸ್ಕಾಂ ಎಲ್ಲಾ ಒಟ್ಟಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದರು.
ಇದನ್ನೂ ಓದಿ: ಬೆಂಗಳೂರಿನ ಮುಂದಿನ 50 ವರ್ಷ ಅಭಿವೃದ್ಧಿಗಾಗಿ ತುಮಕೂರನ್ನು ಈಗಿಂದಲೇ ಬೆಳೆಸಬೇಕು: ಡಿಕೆ ಶಿವಕುಮಾರ್
ಕುಡಿಯುವ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಆರು ಟಿಎಂಸಿ ನೀರನ್ನು ಬೆಂಗಳೂರಿಗೆ ಬಳಸಲು ಸರ್ಕಾರಿ ಆದೇಶ (GO) ಹೊರಡಿಸಲಾಗಿದೆ. ಆ ಮೂಲಕ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗಿದೆ. ಈ ಮಧ್ಯೆ ಅನಧಿಕೃತ ಫ್ಲೆಕ್ಸ್ಗಳನ್ನು ನಿಷೇಧಿಸಲಾಗಿದ್ದು, ಪಾಲಿಕೆ ಅಧಿಕಾರಿಗಳು ನನ್ನ ಮೇಲೂ ದಂಡ ವಿಧಿಸಿದ್ದಾರೆ. ಯಾವುದೇ ಪಕ್ಷ, ನಾಯಕರು ಅನಧಿಕೃತ ಫ್ಲೆಕ್ಸ್ ಹಾಕಿದರೂ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಸೂಚನೆ ನೀಡಿದರು.
ಈ ಹಿಂದೆ ಯೋಜನಾ ಆಯೋಗದಲ್ಲಿ ಹಣವನ್ನು ಮೀಸಲಿಟ್ಟಿದ್ದರು, ಆದರೆ ಅದು ಬಂದಿಲ್ಲ. ಬೆಂಗಳೂರಿಗೆ ಆದ್ಯತೆ ನೀಡಲು ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲು ಸಮಯಾವಕಾಶ ಕೋರಿದ್ದೇನೆ. ಈ ಮಧ್ಯೆ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ