
ಬೆಂಗಳೂರು, ಫೆಬ್ರವರಿ 20: ನಾಲ್ಕನೇ ಹಂತದ ಕಾವೇರಿ ನೀರು ಪೂರೈಕೆ ಯೋಜನೆ ಕಾಮಗಾರಿಯ ಕಾರಣ ಫೆಬ್ರವರಿ 20ರ ಗುರುವಾರ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ನೀರು ಪೂರೈಕೆ ಸ್ಥಗಿತವಾಗಲಿದೆ. ಈ ಬಗ್ಗೆ ಬೆಂಗಳೂರು ಜಲ ಮಂಡಳಿ ಮಾಹಿತಿ ನೀಡಿದೆ. ಮಾರತ್ತಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಮಾರತ್ತಹಳ್ಳಿಯ ಜೀವಿಕಾ ಆಸ್ಪತ್ರೆ ಬಳಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಫೆಬ್ರವರಿ 20 ರಂದು ನಗರದ ವಿವಿಧ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಪ್ರಕಟಣೆ ತಿಳಿಸಿದೆ.
ನಾಲ್ಕನೇ ಹಂತದ ಕಾವೇರಿ ನೀರಿನ ಪೂರೈಕೆ ಯೋಜನೆಯ ಕಾಮಗಾರಿ ಗುರುವಾರ ಬೆಳಗ್ಗೆ 9 ರಿಂದ ರಾತ್ರಿ 9 ರ ವರೆಗೆ ನಡೆಯಲಿದೆ. ಇದರಿಂದಾಗಿ ಈ ಅವಧಿಯಲ್ಲಿ ನೀರು ಪೂರೈಕೆ ಸ್ಥಗಿತವಾಗಲಿದೆ.
ಮಾರತ್ತಹಳ್ಳಿ, ದೊಡ್ಡಾನೆಕುಂದಿ, ಮುನ್ನೆಕೊಳಲು, ಓಎಂಬಿಆರ್‌ಲೇಔಟ್, ಎಚ್‌ಆರ್‌ಬಿಆರ್‌ಲೇಔಟ್, ಸಿಗೇಹಳ್ಳಿ, ಬಟ್ಟರ ಹಳ್ಳಿ, ಮೇಡೆಹಳ್ಳಿ, ಟಿ.ಸಿ.ಪಾಳ್ಯ, ವಿಜಿನಪುರ, ಬೆಳ್ಳಂದೂರು, ಯಮಲೂರು, ಮುರುಗೇಶ್ ಪಾಳ್ಯ, ಕೋಣೆನ ಅಗ್ರಹಾರ, ಸಿ.ವಿ.ರಾಮನ್ ನಗರ, ಇಂದ್ರನಗರ, ತಿಪ್ಪಸಂದ್ರ, ಜೀವನ್ ಭೀಮಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಅಗತ್ಯವಿರುವ ನೀರನ್ನು ಮೊದಲೇ ಸಂಗ್ರಹಿಸಿಟ್ಟುಕೊಂಡು ಸಹಕರಿಸುವಂತೆ ಜಲಮಂಡಳಿಯ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಫೆಬ್ರವರಿ ಉಷ್ಣಾಂಶ 20 ವರ್ಷಗಳಲ್ಲೇ ಗರಿಷ್ಠ
ಏತನ್ಮಧ್ಯೆ, ನೀರಿನ ಬಿಕ್ಕಟ್ಟು ತಡೆಯುವ ನಿಟ್ಟಿನಲ್ಲಿ ಈ ಬಾರಿ ಬೇಸಿಗೆ ಆರಂಭಕ್ಕೂ ಮುನ್ನವೇ ಜಲಮಂಡಳಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ನೀರಿನ ಸಮಸ್ಯೆ ಆರಂಭವಾಗುವ ಲಕ್ಷಣಗಳು ಗೋಚರಿಸಿರುವ ಕಾರಣ, ಕಳೆದ ಬಾರಿ ಬೇಸಿಗೆಯಲ್ಲಿ ಹೊರಡಿಸಿದ್ದ ಆದೇಶ ಮರು ಜಾರಿ ಮಾಡಲು ಜಲಮಂಡಳಿ ಮುಂದಾಗಿದೆ. ಅನಗತ್ಯವಾಗಿ ನೀರು ವ್ಯರ್ಥ ಮಾಡಿದವರಿಗೆ ಹಾಗೂ ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸಿದರೆ ದಂಡ ವಿಧಿಸುವುದಾಗಿ ಹೇಳಿದೆ.