
ಬೆಂಗಳೂರು, ಜನವರಿ 19: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಕೋಲ್ಕತ್ತಾದ ಟಿಟಾಘರ್‌ನಿಂದ ಹೊರಟಿದ್ದ ಎಂಟನೇ ಚಾಲಕರಹಿತ ಮೆಟ್ರೋ ರೈಲು ಇಂದು ಬೆಳಗ್ಗೆ ಬೆಂಗಳೂರಿನ ಹೆಬ್ಬಗೊಡಿ ಮೆಟ್ರೋ ಡಿಪೋಗೆ ಸುರಕ್ಷಿತವಾಗಿ ಆಗಮಿಸಿದೆ. ಆರು ಕೋಚ್‌ಗಳನ್ನು ಒಳಗೊಂಡ ಈ ಮೆಟ್ರೋ ರೈಲು ಜನವರಿ 10ರಂದು ಟಿಟಾಘರ್‌ನಿಂದ ಹೊರಟಿದ್ದು, ಇದೀಗ ಯೆಲ್ಲೋ ಲೈನ್ ಕಾರ್ಯಾಚರಣೆಗೆ ಸಿದ್ಧಗೊಳ್ಳುತ್ತಿದೆ.
ಸದ್ಯ ಬೆಂಗಳೂರು ಮೆಟ್ರೋದ ಯೆಲ್ಲೋ ಲೈನ್‌ನಲ್ಲಿ ಏಳು ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ಹೊಸದಾಗಿ ಆಗಮಿಸಿದ ಎಂಟನೇ ರೈಲಿನ ತಾಂತ್ರಿಕ ಪರಿಶೀಲನೆಗಳನ್ನು ನಾಳೆಯಿಂದ (ಜನವರಿ 20) ಆರಂಭಿಸಲಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ಸುರಕ್ಷತಾ ಹಾಗೂ ತಾಂತ್ರಿಕ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಲಾಗುವುದು.
ಆರ್.ವಿ. ರಸ್ತೆದಿಂದ ಬೊಮ್ಮಸಂದ್ರದವರೆಗೆ 19.15 ಕಿಲೋಮೀಟರ್ ವ್ಯಾಪ್ತಿಯ ಯೆಲ್ಲೋ ಲೈನ್‌ನಲ್ಲಿ ಒಟ್ಟು 16 ನಿಲ್ದಾಣಗಳಿವೆ. ಈ ಮಾರ್ಗದ ಸಮರ್ಪಕ ಕಾರ್ಯಾಚರಣೆಗೆ ಒಟ್ಟು 16 ಚಾಲಕರಹಿತ ಮೆಟ್ರೋ ರೈಲುಗಳನ್ನು ಆರ್ಡರ್ ಮಾಡಲಾಗಿದ್ದು, ಈಗಾಗಲೇ ಎಂಟು ರೈಲುಗಳು ಬೆಂಗಳೂರು ತಲುಪಿವೆ. ಉಳಿದ ಎಂಟು ರೈಲುಗಳು ಪ್ರತಿ 10ರಿಂದ 20 ದಿನಗಳಿಗೊಮ್ಮೆ ಹಂತ ಹಂತವಾಗಿ ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ Namma Metro: ಮತ್ತೆ ಮೆಟ್ರೋ ದರ ಹೈಕ್ ಶಾಕ್? ದರ ಏರಿಕೆ ತಡೆಗೆ ತೇಜಸ್ವಿ ಸೂರ್ಯ ಪತ್ರ
ಪ್ರಸ್ತುತ ಯೆಲ್ಲೋ ಲೈನ್‌ನಲ್ಲಿ 10ರಿಂದ 12 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚಾರ ನಡೆಯುತ್ತಿದ್ದು, ಹೊಸ ರೈಲಿನ ಪರೀಕ್ಷೆ ಮುಗಿಸಿ ವಾಣಿಜ್ಯ ಸಂಚಾರ ಆರಂಭವಾದ ಬಳಿಕ 8ರಿಂದ 10 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸುವ ಸಾಧ್ಯತೆ ಇದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:36 pm, Mon, 19 January 26