ಬೆಂಗಳೂರು, ಅ.03: ನಗರದ ಕೆ.ಆರ್ ಮಾರ್ಕೆಟ್(KR Market)ಗೆ ಪ್ರತಿದಿನ ನೂರಾರು ಲಾರಿಗಳಲ್ಲಿ ಕೊತ್ತಂಬರಿ, ಕರಿಬೇವಿನ ಸೊಪ್ಪು ಸೇರಿದಂತೆ ಬಗೆಬಗೆಯ ಸೊಪ್ಪು ಬರುತ್ತದೆ. ಆದರೆ, ಆ ಸೊಪ್ಪನ್ನು ಜನರು ಮಲ, ಮೂತ್ರ ಮಾಡಿರುವ ಜಾಗದಲ್ಲಿ ಸುರಿಯುತ್ತಾರೆ. ಹೌದು, ಇಡೀ ಬೆಂಗಳೂರಿಗೆ ಸಪ್ಲೈ ಆಗುವ ಸೊಪ್ಪಿನ ರಾಶಿಯನ್ನು ಕೆ.ಆರ್ ಮಾರ್ಕೆಟ್ ರೋಡ್ ಮೇಲೆ ಪ್ರತಿದಿನ ಲಾಟ್ ಗಟ್ಟಲೇ ಸುರಿದಿರುತ್ತಾರೆ. ಅಷ್ಟೇ ಅಲ್ಲ, ಪಕ್ಕದಲ್ಲೇ ಕಸ ತುಂಬಿರುವ ಆಟೋಗಳಿಂದ ಗಲೀಜು ನೀರು ಕೂಡ ಸುರಿಯುತ್ತಿರುತ್ತದೆ. ಇದು ಸಿಲಿಕಾನ್ ಸಿಟಿ ಜನರ ಆಕ್ರೋಶ ಕಾರಣವಾಗಿದೆ.
ಇನ್ನು ಈ ಸೊಪ್ಪು ಹಾಕುವ ರಸ್ತೆ ಮೇಲೆ ಯಾವುದೇ ರೀತಿಯ ಟಾರ್ಪಲ್, ಶೀಟ್ಗಳನ್ನು ಹಾಕಿರುವುದಿಲ್ಲ. ಬೆಳಿಗ್ಗೆಯಿಂದ ನೂರಾರು ಜನರು ಮೂತ್ರ ವಿಸರ್ಜನೆ ಮಾಡಿರುವ ಜಾಗದಲ್ಲಿ ಸೊಪ್ಪಿನ ರಾಶಿ ಸುರಿದು ವ್ಯಾಪಾರ ಮಾಡುತ್ತಾರೆ. ಚಪ್ಪಲಿ ಕಾಲಿನಿಂದ ಸೊಪ್ಪನ್ನು ತಳ್ಳಿ ಗುಡ್ಡೆ ಹಾಕುತ್ತಾರೆ. ಈ ಹೋಲ್ಸೇಲ್ ವ್ಯಾಪಾರಿಗಳಿಂದಲೇ ಬೆಂಗಳೂರಿನ ಎಲ್ಲಾ ಅಂಗಡಿ ಮಾಲೀಕರು ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಗಲೀಜು ನೀರಿನಲ್ಲಿ ಬಿದ್ದಿದ್ದ ಸೊಪ್ಪು ಜನರ ಹೊಟ್ಟೆ ಸೇರುತ್ತಿದೆ.
ಇದನ್ನೂ ಓದಿ:ಬೆಂಗಳೂರು: ಜಾಸ್ತಿ ಬಾಡಿಗೆ ಹಣ ಕೊಡಲು ನಿರಾಕರಿಸಿದಕ್ಕೆ ಯುವತಿಗೆ ಆಟೋ ಚಾಲಕನಿಂದ ಅವಾಚ್ಯವಾಗಿ ನಿಂದನೆ
ಕೆಲವು ಮನೆ ಮತ್ತು ಹೋಟೆಲ್ನಲ್ಲಿ ಅವಸರಕ್ಕೆ ಕೊತ್ತಂಬರಿ, ಕರಿಬೇವು ಹಾಗೂ ಇತರೆ ಸೊಪ್ಪನ್ನು ತೊಳೆಯುವುದಿಲ್ಲ ಕಾರಣ, ಶುದ್ಧವಾಗಿ ಇರುತ್ತದೆ ಎನ್ನುವ ನಂಬಿಕೆ. ಆದರೆ, ಈ ಜಾಗದಲ್ಲಿರುವ ಸೊಪ್ಪನ್ನು ನೋಡಿದರೆ ಯಾರೂ ಕೂಡ ಊಟ ಮಾಡುವುದಿಲ್ಲ. ಅಷ್ಟರಮಟ್ಟಿಗೆ ಗಲೀಜು ಜಾಗದಲ್ಲಿ ಸುರಿಯಲಾಗಿರುತ್ತದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಕೆ.ಆರ್ ಮಾರ್ಕೆಟ್ನಿಂದ ಸರಬರಾಜು ಆಗುವ ಸೊಪ್ಪು ಸುರಿಯುವ ಜಾಗವನ್ನು ನೋಡಿದರೆ, ಜೀವನದಲ್ಲಿ ಮತ್ತೆ ಕೊತ್ತಂಬರಿ, ಕರಿಬೇವು ತಿನ್ನಲು ಹಿಂದೇಟು ಹಾಕುವುದಂತೂ ನಿಜ. ಕೂಡಲೇ ಆರೋಗ್ಯ ಇಲಾಖೆ, ಬಿಬಿಎಂಪಿ ಈ ಬಗ್ಗೆ ಕ್ರಮ ಕೈಕೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ