AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯಮಿಗೆ ಬೆದರಿಕೆ ಆರೋಪ: ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲು

ಉದ್ಯಮಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. 50 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಉದ್ಯಮಿ ನೀಡಿದ್ದ ದೂರಿನ ಮೇರೆಗೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಉದ್ಯಮಿಗೆ ಬೆದರಿಕೆ ಆರೋಪ:  ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲು
ಹೆಚ್​ಡಿ ಕುಮಾರಸ್ವಾಮಿ
TV9 Web
| Edited By: |

Updated on:Oct 03, 2024 | 6:46 PM

Share

ಬೆಂಗಳೂರು, (ಅಕ್ಟೋಬರ್ 03): 50 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಉದ್ಯಮಿ ವಿಜಯ್ ಟಾಟಾ ನೀಡಿದ್ದ ದೂರಿನ ಮೇರೆಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್ ದಾಖಲಾಗಿದೆ. BNS U/s3(5)308,(2)351(2) ಅಡಿಯಲ್ಲಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಎಂಎಲ್‌ಸಿ ರಮೇಶ್ ಗೌಡ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಎಂಬವರು ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಕುಮಾರಸ್ವಾಮಿ ಹಾಗೂ ರಮೇಶ್ ​ಗೌಡ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಲಾಗಿತ್ತು. ನಂತರ ಆ ಬಗ್ಗೆ ಹೇಳಿಕೆ ನೀಡಿ, 50 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದರು. ಈ ದೂರಿನ ಮೇರೆಗೆ ಇದೀಗ ಕುಮಾರಸ್ವಾಮಿ ಮತ್ತು ಎಂಎಲ್‌ಸಿ ರಮೇಶ್ ಗೌಡ  ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಇದನ್ನೂ ಓದಿ: ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಉದ್ಯಮಿ ವಿಜಯ್ ಟಾಟಾ ದೂರು ದಾಖಲು: 50 ಕೋಟಿ ರೂ.ಗೆ ಬೆದರಿಕೆ ಆರೋಪ

ಎಫ್​ಐಆರ್​ನಲ್ಲಿ ಏನಿದೆ?

2018 ರಿಂದ ಜೆಡಿಎಸ್ ಪಕ್ಷದಿಂದ ಗುರುತಿಸಿಕೊಂಡಿದ್ದೇನೆ. ನನ್ನ ಕಾರ್ಯ ಅಭಿನಂದಿಸಿ ಪಕ್ಷದ ಸೋಷಿಯಲ್ ಮೀಡಿಯಾ ವಿಂಗ್ ಗೆ ಉಪಾಧ್ಯಕ್ಷನಾಗಿ ಮಾಡಿದ್ರು . ನಾನು ಉಪಾಧ್ಯಕ್ಷನಾದ ಬಳಿಕ ದೇವೇಗೌಡರು ,‌ಕುಮಾರಸ್ವಾಮಿ ಸೇರಿ ಸಭೆ ಮಾಡಿರುತ್ತೇವೆ. ಸಾಮಾಜಿಕ ಜಾಲತಾಣ ಸೇರಿದಂತೆ ಪಕ್ಷದ ಏಳಿಗೆ ಬಗ್ಗೆ ಚರ್ಚೆಗಳನ್ನ ನಡೆಸಿರುತ್ತೇವೆ. 2019 ರಲ್ಲಿ ಮಂಡ್ಯ ಲೋಕಸಭಾ ಎಲೆಕ್ಷನ್ ಸಂಧರ್ಭದಲ್ಲಿ ನಿಖಿಲ್ ಪರವಾಗಿ ಸಾಕಷ್ಟು ಅಭಿಯಾನ ಮಾಡಿದ್ದೇವೆ. ಈ ಅಭಿಯಾನಗಳಿಗೆ ನಾನು ವೈಯುಕ್ತಿಕವಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದೇನೆ. ಇದಾದ ಬಳಿಕ ನಾನು ಕೆಲ ವರ್ಷಗಳಿಂದ ನನ್ನ ರಿಯಲ್ ಎಸ್ಟೇಟ್ ಉದ್ಯಮದ ಬಗ್ಗೆ ಗಮನ ಹರಿಸಿದ್ದೆ. ಹೀಗಾಗಿ ಪಕ್ಷದ ಕಾರ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಕಳೆದ ಒಂದು ತಿಂಗಳು ನನ್ನ ಮನೆಗೆ ಆಗಮಿಸಿದ್ದ ಮಾಜಿ ಎಂಎಲ್ ಸಿ ರಮೇಶ್ ಗೌಡ , ಪಕ್ಷದ ಕಾರ್ಯಗಳಲ್ಲಿ ಪುನಃ ತೊಡಗಿಸಿಕೊಳ್ಳುವಂತೆ ಕೋರಿದ್ರು. ಕುಮಾರೆ ಪಕ್ಷದ ಸಂಘಟನೆಯ ಜವಾಬ್ಧಾರಿ ವಹಿಸಿಕೊಳ್ಳುವಂತೆ ಕೋರಿದ್ದರು.

ನಂತರ ರಮೇಶ್ ಗೌಡ ಆಗಸ್ಟ್ 24 2024 ರಂದು ರಾತ್ರಿ 10 ಗಂಟೆಗೆ ಮನೆಗೆ ಆಗಮಿಸಿದ್ದರು. ನಮ್ಮ ಜೊತೆಯಲ್ಲಿ ಕೂತು ಊಟ ಮಾಡುತ್ತಾ ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ವಿವರಿಸತೊಡಗಿದ್ರು. ನಿಖಿಲ್ ಕುಮಾರಸ್ವಾಮಿಗೆ ಟಿಕೇಟ್ ನೀಡೋದು ಅಂತಿಮವಾಗಿದ್ದು , ಈ ಬಾರಿ ಚುನಾವಣಾ ಕಾರ್ಯದಲ್ಲಿ ಸಕ್ರಿಯವಾಗಿರಲು ಮನವಿ ಮಾಡಿದ್ರು,

ಇದೇ ವೇಳೆ ತಮ್ಮ ಮೊಬೈಲ್ ನಿಂದ ಹೆಚ್ ಡಿ ಕುಮಾರಸ್ವಾಮಿ ಕರೆ ಮಾಡಿದ್ರು. ಕುಮಾರಸ್ವಾಮಿ ಜೊತೆಯಲ್ಲಿ ಮಾತನಾಡುತ್ತ ರಮೇಶ್ ಗೌಡ ನಮ್ಮ ಮನೆಗೆ ಬಂದಿರೋದಾಗಿ ತಿಳಿಸಿದ್ರು. ಆನಂತರ ನನಗೆ ಕುಮಾರಸ್ವಾಮಿ ಜೊತೆ ಮಾತನಾಡಲು ಫೋನ್ ಕೊಟ್ಟರು. ಕುಶಲೋಪರಿ ವಿಚಾರಿಸಿದ ಕುಮಾರಸ್ವಾಮಿ ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಪ್ರಸ್ತಾಪಿಸಿದ್ರು. ಉಪ ಚುನಾವಣೆ ಅನಿವಾರ್ಯ ನಮಗೆ ಖರ್ಚಿಗೆ 50 ಕೋಟಿ ರೂಪಾಯಿ ಕೊಡಬೇಕಾಗುತ್ತೆ ಎಂದರು. ಸರ್ ನನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದೆ. ನನ್ನ ಮಾತಿನಿಂದ ಕೋಪಗೊಂಡ ಕುಮಾರಸ್ವಾಮಿ 50 ‌ಕೋಟಿ ರೆಡಿ ಮಾಡು ಇಲ್ಲದೆ ಹೋದ್ರೆ ನಾನೇನ್ ಮಾಡುತ್ತೇನೇ ಗೊತ್ತಿಲ್ಲ ಎಂದು ಬೆದರಿಕೆ ಹಾಕಿದ್ರು.

ಅಷ್ಟೇ ಅಲ್ಲದೇ ಬೆಂಗಳೂರಿನಲ್ಲಿ ರಿಯಲ್ ಎಷ್ಟೇಟ್ ಉದ್ಯಮ ನಡೆಸೋದು ಮಾತ್ರವಲ್ಲ ಬದುಕೋದು ಕಷ್ಟ ಎಂದು ಬೆದರಿಕೆ ಹಾಕಿದ್ದಾರೆ. ರಮೇಶ್ ಗೌಡ 50 ಕೋಟಿ ರೆಡಿ ಮಾಡಿಕೊಳ್ಳಿ ಜೊತೆಗೆ ದೇವಸ್ಥಾನ , ಶಾಲೆ ಕಟ್ಟಿಸುತ್ತಿದ್ದು ಅದಕ್ಕೆ ಐದು ಕೋಟಿ ನೀಡುವಂತೆ ಒತ್ತಾಯಿಸಿದ್ರು. ಈ ಹಣ ನೀಡದೇ ಇದ್ರೆ ನಿಮಗೆ ತೊಂದರೆ ಎದುರಾಗುತ್ತೆ ಎಂದು ಧಮ್ಕಿ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಮೇಶ ಗೌಡರು ವಾಟ್ಸಪ್ ಸಂದೇಶ ಕೂಡ ಕಳುಹಿಸಿರುತ್ತಾರೆ. ಕುಮಾರಸ್ವಾಮಿ ಹಾಗು ರಮೇಶ್ ಗೌಡ ನನ್ನ ವಿರುದ್ಧ ಷಡ್ಯಂತ್ರ ರಚಿಸಿ ಹಣಕ್ಕಾಗಿ ಬೇಡಿಕೆ ಇಟ್ಟು ಜೀವಬೆದರಿಕೆ ಒಡ್ಡುತ್ತಿದ್ದಾರೆ ಎಂದು ಉದ್ಯಮಿ ವಿಜಯ್ ಟಾಟಾ ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:30 pm, Thu, 3 October 24