ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಉದ್ಯಮಿ ವಿಜಯ್ ಟಾಟಾ ದೂರು ದಾಖಲು: 50 ಕೋಟಿ ರೂ.ಗೆ ಬೆದರಿಕೆ ಆರೋಪ
ಡಿನೋಟಿಫಿಕೇಷನ್, ಗಣಿಗಾರಿಕೆಗೆ ಅನುಮತಿ ಪ್ರಕರಣಗಳಲ್ಲಿ ಕಾನೂನು ಸಮರ ನಡೆಸುತ್ತಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಕುಮಾರಸ್ವಾಮಿ 50 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಲ್ಲದೆ ಬೆದರಿಕೆ ಹಾಕಿದ್ದಾರೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಕ್ಕೆ ಸಂಬಂಧಿಸಿದ ವಿವರ ಇಲ್ಲಿದೆ.
ಬೆಂಗಳೂರು, ಅಕ್ಟೋಬರ್ 3: ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಎಂಬವರು ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಕುಮಾರಸ್ವಾಮಿ ಹಾಗೂ ರಮೇಶ್ ಗೌಡ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಲಾಗಿದೆ. ನಂತರ ಆ ಬಗ್ಗೆ ಹೇಳಿಕೆ ನೀಡಿ, 50 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.
ವಿಜಯ್ ಟಾಟಾ ಆರೋಪವೇನು?
ಜೆಡಿಎಸ್ ಮುಖಂಡ ರಮೇಶ್ ಗೌಡ ನಮ್ಮ ಮನೆಗೆ ಬಂದಿದ್ದರು. ನಿಖಿಲ್ ಚನ್ನಪಟ್ಟಣ ಉಪ ಚುನಾವಣೆ ನಿಲ್ಲುತ್ತಿದ್ದಾರೆ ಎಂದಿದ್ದರು. ಅದೇ ವೇಳೆ, ಹೆಚ್ಡಿ ಕುಮಾರಸ್ವಾಮಿ ಕೂಡ ದೂರವಾಣಿ ಕರೆ ಮಾಡಿದ್ದರು. ಚುನಾವಣೆಗಾಗಿ 50 ಕೋಟಿ ರೂಪಾಯಿ ಹಣ ನೀಡುವಂತೆ ನನ್ನನ್ನು ಕೇಳಿದ್ದರು. ನಾನು ಹಣ ಕೊಡಲಾಗದು ಎಂದಿದ್ದಕ್ಕೆ ಕುಮಾರಸ್ವಾಮಿ ಕೋಪಿಸಿಕೊಂಡಿದ್ದರು.
ಇದನ್ನೂ ಓದಿ: ಸೈಟ್ ವಾಪಸ್ ಪಡೆದು ಕೋರ್ಟ್ ಆದೇಶ ಉಲ್ಲಂಘನೆ: ಮುಡಾ ಆಯುಕ್ತರ ಬಂಧನಕ್ಕೆ ಕುಮಾರಸ್ವಾಮಿ ಆಗ್ರಹ
ಬೆದರಿಕೆ ಹಾಕಿದ್ದ ಕುಮಾರಸ್ವಾಮಿ: ವಿಜಯ್ ಆರೋಪ
ಹಣ ಕೊಡುವುದಿಲ್ಲ ಎಂದಿದ್ದಕ್ಕೆ, ನಿಮ್ಮ ಪ್ರಾಜೆಕ್ಟ್ ಕಂಪ್ಲೀಟ್ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ದೇವಸ್ಥಾನ ಕಟ್ಟಲು ರಮೇಶ್ ಗೌಡ ಕೂಡ 5 ಕೋಟಿ ರೂಪಾಯಿ ಕೇಳಿದ್ದರು. ತುಂಬಾ ಕಷ್ಟವಿದೆ ಯಾವುದೇ ಕಾರಣಕ್ಕೂ ಹಣ ಕೊಡಲ್ಲ ಅಂದಿದ್ದೆ. 1 ವಾರದಿಂದ ರಮೇಶ್ ಗೌಡ ಕಾಲ್, ಮೆಸೇಜ್ ಮಾಡುತ್ತಿದ್ದರು. 2019ರ ಚುನಾವಣೆಯಲ್ಲೂ ಅವರಿಗಾಗಿ ತುಂಬಾ ಖರ್ಚು ಮಾಡಿದ್ದೆವು ಎಂದು ವಿಜಯ್ ಟಾಟ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ