ಬೆಂಗಳೂರು, ಜನವರಿ 10: ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಅಂಗವಾಗಿ ಪ್ರತಿ ವರ್ಷ ಒಂದೊಂದು ರೀತಿಯ ವಿಷಯವಸ್ತುವಿನ ಆಧಾರದಲ್ಲಿ ತೋಟಗಾರಿಕೆ ಇಲಾಖೆ ಬೆಂಗಳೂರಿನ (Bengaluru) ಸಸ್ಯಕಾಶಿ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ (Lalbagh Flower Show) ಆಯೋಜಿಸುತ್ತದೆ. ಅದರಂತೆ, ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಪ್ರತಿವರ್ಷದಂತೆ ಈ ವರ್ಷವೂ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಸಿದ್ದತೆ ನಡೆಸಿದೆ.
ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನವನ್ನು ಜನವರಿ 16 ರಿಂದ 26ರವರೆಗೆ 11 ದಿನಗಳ ಕಾಲ ಆಯೋಜಿಸುತ್ತಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಮಹರ್ಷಿ ವಾಲ್ಮೀಕಿ ಜೀವನ ಆಧಾರಿತ ವಿಷಯ ಹಾಗೂ ರಾಮಾಯಣ ಮಹಾಕಾವ್ಯವನ್ನು ಆಕರ್ಷಕವಾಗಿ ಪುಷ್ಪಗಳಲ್ಲಿ ಅರಳಿಸಲು ತೀರ್ಮಾನಿಸಲಾಗಿದೆ.
ಫಲಪುಷ್ಪ ನೋಡಲು ಬರುವ ಪ್ರವಾಸಿಗರು ಮತ್ತು ಬೆಂಗಳೂರಿನ ಜನತೆ ಮಹರ್ಷಿ ವಾಲ್ಮೀಕಿ ವಿಷಯಾಧರಿತ ಹೂವಿನ ಪ್ರತಿಕೃತಿ ಹಾಗೂ ರಾಮಾಯಣದ ಪ್ರಮುಖ ಘಟನೆಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ. ಹೂ ಅಲಂಕಾರಕ್ಕಾಗಿ ದೇಶ ವಿದೇಶಗಳಿಂದ ಹೂವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ವೈಕುಂಠ ಏಕಾದಶಿ: ದೇವಸ್ಥಾನಗಳಿಗೆ ಭಕ್ತರ ದಂಡು, ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ
ಫಲಪುಷ್ಪ ಪ್ರದರ್ಶನಕ್ಕೆ 70 ತರಹದ 25 ಲಕ್ಷ ಹೂವುಗಳನ್ನು ಬಳಕೆ ಮಾಡಲಾಗುತ್ತಿದೆ. ಚಳಿಗಾಲದಲ್ಲಿ ಬೆಳೆಯುವಂತಹ ಪೂಷಿಯಾ, ಅಗಪಾಂಥಸ್, ಸೈಕ್ಲೋಮನ್, ಕ್ಯಾಲಾಲಿಲ್ಲ, ಟ್ಯೊಬಿರಸ್ ರೂಟೆಡ್, ಸೇರಿದಂತೆ ಇನ್ನೂ ಸಾಕಷ್ಟು ಹೂವುಗಳನ್ನು ಪ್ರದರ್ಶನಕ್ಕೆ ಬಳಸಲಾಗುತ್ತಿದೆ. 25 ಲಕ್ಷ ಹೂವುಗಳಲ್ಲಿ, ಹೂವು ಕುಂಡದಲ್ಲಿ ಬೆಳೆಯುವ ಹಾಗೂ ಲಾಲ್ಬಾಗ್ನಲ್ಲಿ ಬೆಳೆಯುವ ಹೂವುಗಳು, ಲಾಲ್ಬಾಗ್ನಲ್ಲಿ ಬೆಳೆಯುವ 15 ಲಕ್ಷ ಹಾಗೂ ಗುಲಾಬಿ, ಸೇವಂತಿಗೆ ಸೇರಿದಂತೆ 10 ವಿವಿಧ ಜಾತಿಯ ಹೂವುಗಳನ್ನು ಬಳಸಲಾಗುತ್ತಿದೆ.
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಲು ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಜನರು ಆಗಮಿಸುತ್ತಾರೆ. ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಲಾಲ್ಬಾಗ್ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗುತ್ತಿದೆ. ಫಲಪುಷ್ಪ ಪ್ರದರ್ಶನಕ್ಕೆ ಬರುವ ಜನರಿಗೆ ಪ್ರವೇಶ ಟಿಕೆಟ್ ನಿಗದಿಪಡಿಸಲಾಗಿದೆ. ಹಿರಿಯರಿಗೆ 80 ರಿಂದ 100 ರೂ. ಇದ್ದು ಮಕ್ಕಳಿಗೆ 30 ರೂ. ನಿಗದಿಪಡಿಸಲಾಗಿದೆ. ಇನ್ನು ಶಾಲಾ ಸಮವಸ್ತ್ರ ತೊಟ್ಟು ಬರುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ