ಬೆಂಗಳೂರು: ವಿಧಾನಸೌಧದ ಮುಂದೆ ಕೆಂಪೇಗೌಡ, ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ನಂಜಾವಧೂತಶ್ರೀ, ಚಂದ್ರಶೇಖರ್ ಸ್ವಾಮೀಜಿ, ಬಸವಮೂರ್ತಿ ಮಾದಾರ ಚೆನ್ನಯ್ಯಶ್ರೀ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಅಶೋಕ್, ಗೋಪಾಲಯ್ಯ, ಮಾಧುಸ್ವಾಮಿ, ವಿ.ಸೋಮಣ್ಣ, ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್, ಸಿ.ಸಿ.ಪಾಟೀಲ್, ಸಂಸದ ಸದಾನಂದಗೌಡ, ಶಾಸಕ ರಿಜ್ವಾನ್ ಅರ್ಷದ್ ಸೇರಿ ಹಲವರು ಭಾಗಿಯಾಗಿದ್ದರು.
ಶಂಕುಸ್ಥಾಪನೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಜನರ ಶಕ್ತಿ ಕೇಂದ್ರವಾಗಿರುವ ವಿಧಾನಸೌಧದ ಮುಂದೆ ಕನ್ನಡ ನಾಡಿನಲ್ಲಿ ಹುಟ್ಟಿ, ಕ್ರಾಂತಿ ಮಾಡಿದ ಇಬ್ಬರು ಮಹಾನ್ ನಾಯಕರ ಪ್ರತಿಮೆಗೆ ಶಂಕುಸ್ಥಾಪನೆ ಮಾಡಲಾಗಿದೆ. ಮಹಾನ್ ಪುರುಷರಾದ ಬಸವಣ್ಣನವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವೈಚಾರಿಕ ಪ್ರಗತಿಯನ್ನ ಮಾಡಿ ಒಂದು ದರ್ಶನ ಕೊಟ್ಟಿರುವ ನಾಡು ಕೊಟ್ಟಿರುವಂತಹ ನಾಯಕರು. ಊರು ಕೇರಿಗಳನ್ನ ಕಟ್ಟಿ ಮಾದರಿಯಾದ ಮಹಾನ್ ನಾಡು ಕಟ್ಟಿರುವ ಮಹಾಪ್ರಭು ಎರಡು ಮೂರ್ತಿಗಳನ್ನ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಲಾಗಿದೆ.
Karnataka CM Basavaraj Bommai takes part in the foundation stone laying ceremony of the statues of social reformer Basavanna and founder of Bengaluru Kempegowda on the premises of Vidhana Soudha pic.twitter.com/q8bRg5QC9l
— ANI (@ANI) January 13, 2023
ಅಶೋಕ್ಗೆ ಕೊಟ್ಟಂತಹ ಜವಾಬ್ದಾರಿಯನ್ನ ಅತ್ಯಂತ ಅಚ್ಚುಕಟ್ಟಾಗಿ ಮಾಡಿದ್ದಾರೆ. ಒಂದೂವರೆ 2 ತಿಂಗಳಿನಲ್ಲಿ ಪುತ್ಥಳಿಗಳ ಅನಾವರಣ ಮಾಡುತ್ತೇವೆ. ಎಲ್ಲಾ ಪರಮಪೂಜ್ಯರ ಸಾನಿಧ್ಯದಲ್ಲಿ ಶಂಕುಸ್ಥಾಪನೆ ಮಾಡಿದ್ದೇವೆ. ಈ ಮಹಾನ್ ವ್ಯಕ್ತಿಗಳ ಆಡಳಿತ ಆಧ್ಯಾತ್ಮಿಕ ಚಿಂತನೆ ನಮ್ಮ ನಾಡಿನಲ್ಲಿ ಬರಬೇಕು. ಕರ್ನಾಟಕ ಸಮಗ್ರ ಅಭಿವೃದ್ಧಿ ಆಗಿರುವಂತಹ ರಾಜ್ಯವಾಗಬೇಕು. ಈ ಇಬ್ಬರು ಮಾಹಾತ್ಮರ ಪ್ರೇರಣೆ, ವೈಚಾರಿಕ ವಿಚಾರ ನಿಲ್ಲಲಿ ಎಂಬುವ ಸಲುವಾಗಿ ಈ ಪ್ರತಿಮೆಗಳನ್ನ ಮಾಡಿದ್ದೇವೆ, ನನಗೆ ವಿಶ್ವಾಸವಿದೆ. ಈ ಮಹಾತ್ಮರ ಪ್ರೇರಣೆ ಜನತೆಗೆ ಒಳ್ಳೆದಾಗುತ್ತೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಪುತ್ಥಳಿ ಅನಾವರಣ ಬಹು ದಿನಗಳ ಕನಸು. ಕಳೆದ 75 ವರ್ಷಗಳಿಂದ ಪುತ್ಥಳಿ ಅನಾವರಣ ಸಾಧ್ಯವಾಗಿರಲಿಲ್ಲ. ಒಂದೂವರೆ ತಿಂಗಳಲ್ಲಿ ಪುತ್ಥಳಿಗಳ ಅನಾವರಣ ಮಾಡುತ್ತೇವೆ ಎಂದರು.
ಇನ್ನು ಕಾರ್ಯಕ್ರಮಕ್ಕೆ ಆಹ್ವಾನ ಇದ್ರೂ ಕೆಲ ವಿಪಕ್ಷ ನಾಯಕರು ಗೈರಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಹರಿಪ್ರಸಾದ್ ಗೈರಾಗಿದ್ದಾರೆ. ಸ್ಥಳೀಯ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:47 am, Fri, 13 January 23