ಮತದಾರರ ಮಾಹಿತಿ ಕಳವು ಪ್ರಕರಣ: ಕಚೇರಿ ಖಾಲಿ ಮಾಡಿದ ಚಿಲುಮೆ ಸಂಸ್ಥೆ ವಿರುದ್ಧ ಬಿಬಿಎಂಪಿ, ಕಾಂಗ್ರೆಸ್ ದೂರು
Voter Data Theft: ಈ ಹಿಂದೆ 2018ರಲ್ಲೂ ಮತದಾರರ ಅರಿವು ಮೂಡಿಸುವ ಕಾರ್ಯ ಹಾಗೂ ವಿಶೇಷ ಮತದಾರರ ಪರಿಷ್ಕೃಣೆಗೆ ಬಿಬಿಎಂಪಿ ಚುಲುಮೆ ಸಂಸ್ಥೆಗೆ ಅನುಮತಿ ನೀಡಿತ್ತು. ಆಗ ಕಾಂಗ್ರೆಸ್-JDS ಸಮ್ಮಿಶ್ರ ಸರ್ಕಾರವಿತ್ತು.
ಬೆಂಗಳೂರು: ಮತದಾರರ ಮಾಹಿತಿ (Voters Details) ಕಳವು ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು (Congress Leaders) ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ಇದರ ಬೆನ್ನಲ್ಲೆ ಈಗ ಬಿಬಿಎಂಪಿ(BBMP) ಚಿಲುಮೆ ಸಂಸ್ಥೆಯ ಲೋಕೇಶ್ ವಿರುದ್ಧ ದೂರು ನೀಡಿದೆ. ಹಾಗೂ ಮತ್ತೊಂದೆಡೆ ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar), ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್(Salim Ahmad), ರಾಮಲಿಂಗಾರೆಡ್ಡಿ(Ramalinga Reddy) ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಚಿಲುಮೆ ಸಂಸ್ಥೆಯ ಲೋಕೇಶ್ ವಿರುದ್ಧ ದೂರು ನೀಡಿದ ಬಿಬಿಎಂಪಿ
ಬೆಂಗಳೂರಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಚಿಲುಮೆ ಸಂಸ್ಥೆಯ ಲೋಕೇಶ್ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ದೂರು ಸಲ್ಲಿಸಿದೆ. ಹಾಗೂ ಚಿಲುಮೆ ಸಂಸ್ಥೆಯ ಲೋಕೇಶ್ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಚುನಾವಣಾ ಆಯೋಗದ ವಿಶೇಷ ಮತದಾರರ ಜಾಗೃತಿ ಅಭಿಯಾನ SVEEP (Systematic Voters Education and Electoral Participation) ನಡೆಸಲು ಚಿಲುಮೆ ಸಂಸ್ಥೆಗೆ ಬಿಬಿಎಂಪಿ ಅನುಮತಿ ನೀಡಿತ್ತು. ಆದರೆ ಚಿಲುಮೆ ಸಂಸ್ಥೆ ಆದೇಶವನ್ನು ದುರುಪಯೋಗಪಡಿಸಿಕೊಂಡಿದೆ. ನೂರಾರು ಏಜೆಂಟರಿಗೆ ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿಗಳ ನಕಲಿ ಐಡಿ-ಕಾರ್ಡ್‌ಗಳನ್ನು ನೀಡಿ ಮತದಾರರ ಸೂಕ್ಷ್ಮ ಮಾಹಿತಿ ಸಂಗ್ರಹಿಸಿದೆ. ಹೀಗಾಗಿ ಈಗ ಚಿಲುವೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ, ಕಾಂಗ್ರೆಸ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ನಂಬಿಕೆ ದ್ರೋಹ: ಮತದಾರರ ಪಟ್ಟಿ ನವೀಕರಣ ನೆಪದಲ್ಲಿ ಬೆಂಗಳೂರಿನ ಸಾವಿರಾರು ಮಂದಿಯ ಸೂಕ್ಷ್ಮ ಮಾಹಿತಿ ಸಂಗ್ರಹಿಸಿದ ಎನ್ಜಿಒ
ಈ ಹಿಂದೆಯೂ ಮತದಾರರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದ್ದ ಚಿಲುಮೆ
ಇನ್ನು ಈ ಹಿಂದೆ 2018ರಲ್ಲೂ ಮತದಾರರ ಅರಿವು ಮೂಡಿಸುವ ಕಾರ್ಯ ಹಾಗೂ ವಿಶೇಷ ಮತದಾರರ ಪರಿಷ್ಕೃಣೆಗೆ ಬಿಬಿಎಂಪಿ ಚುಲುಮೆ ಸಂಸ್ಥೆಗೆ ಅನುಮತಿ ನೀಡಿತ್ತು. ಆಗ ಕಾಂಗ್ರೆಸ್-JDS ಸಮ್ಮಿಶ್ರ ಸರ್ಕಾರವಿತ್ತು. 2019ರ ಲೋಕಸಭಾ ಚುನಾವಣೆ ವೇಳೆ ಅರಿವು ಮೂಡಿಸಲು ಅನುಮತಿ ನೀಡಲಾಗಿತ್ತು. ಅದೇ ಆಧಾರದಲ್ಲಿ ಈ ಬಾರಿಯೂ ಚುಲುವೆ ಸಂಸ್ಥೆಗೆ ಬಿಬಿಎಂಪಿ ಅನುಮತಿ ನೀಡಿತ್ತು.
ರೆಪ್ರೆಸೆಂಟೇಷನ್ ಆಫ್ ದಿ ಪೀಪಲ್ ಆಕ್ಟ್ ಅಡಿ ದೂರು
ಇನ್ನು ಈ ಅಕ್ರಮ ಆರೋಪದ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ದೂರು ಬಂದಿದೆ. ಅಕ್ರಮದಲ್ಲಿ ಖಾಸಗಿ ವ್ಯಕ್ತಿಗಳು ಭಾಗಿಯಾದ್ದಾರೆಂದು ಆರೋಪಿಸಿದ್ದು ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ರೆಪ್ರೆಸೆಂಟೇಷನ್ ಆಫ್ ದಿ ಪೀಪಲ್ ಆಕ್ಟ್ ಅಡಿ ಕಾಂಗ್ರೆಸ್ ದೂರು ನೀಡಿದೆ. ಈ ಸಂಬಂಧ ಕಾನೂನು ಸಲಹೆ ಪಡೆದು ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.
ಸಮೀಕ್ಷೆ ನಡೆಸಲು ನಾವು ಯಾವುದೇ ಸಂಸ್ಥೆಗೆ ಅನುಮತಿ ಕೊಟ್ಟಿಲ್ಲ ಮತ್ತೊಂದೆಡೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಮಾತನಾಡಿದ್ದು, ಸಮೀಕ್ಷೆ ನಡೆಸಲು ನಾವು ಯಾವುದೇ ಸಂಸ್ಥೆಗೆ ಅನುಮತಿ ಕೊಟ್ಟಿಲ್ಲ. ಈ ಬಗ್ಗೆ ದೂರು ತಕ್ಷಣ ರದ್ದು ಪಡಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ತನಿಖೆ ನಡೆಸಿ ಕಾನೂನಿನಡಿ ಕ್ರಮ ಕೈಗೊಳ್ಳಬೇಕೆಂದು ದೂರು ಸಲ್ಲಿಸಿದ್ದೇವೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಚುನಾವಣಾಧಿಕಾರಿಗೂ ಸೂಚಿಸಲಾಗಿದೆ ಎಂದು ಮನೋಜ್ ಕುಮಾರ್ ಮೀನಾ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಇದನ್ನೂ ಓದಿ: ಮತದಾರರ ಮಾಹಿತಿ ಕಳ್ಳತನ ಸಂಬಂಧ ಸುದ್ದಿಗೋಷ್ಠಿ: ಬಿಜೆಪಿ ವಿರುದ್ಧ ರಣದೀಪ್ ಸುರ್ಜೇವಾಲ ವಾಗ್ದಾಳಿ
ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ಪತ್ರ ರದ್ದು ಮಾಡಲಾಗಿದೆ
ಬಿಬಿಎಂಪಿ ವಿಶೇಷ ಚುನಾವಣಾ ಆಯುಕ್ತ ರಂಗಪ್ಪ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಐಡಿ ಕಾರ್ಡ್ ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸಕ್ಕೆ ಚುಲುಮೆ ಸಂಸ್ಥೆಗೆ ಅನುಮತಿ ನೀಡಲಾಗಿತ್ತು. ಆದ್ರೆ ಮತದಾರರ ಖಾಸಗಿ ಮಾಹಿತಿ ಸಂಗ್ರಹಿಸುತ್ತಿರುವ ಬಗ್ಗೆ ದೂರು ಬಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 6 ಲಕ್ಷ ಮತದಾರರು ಡಿಲೀಟ್ ಆಗಿದ್ದಾರೆ. ಚುಲುಮೆ ಸಂಸ್ಥೆ ನೀಡಿರುವ ಮಾಹಿತಿ ಮೇರೆಗೆ ಡಿಲೀಟ್ ಮಾಡಿದ್ದಲ್ಲ. ಮತದಾರರ ಪಟ್ಟಿಯಲ್ಲಿ 2 ಕಡೆ ಹೆಸರು ಇದ್ದವರನ್ನು ಕೈಬಿಡಲಾಗಿದೆ. ಸತ್ತವರ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದರು.
ಕಚೇರಿ ಖಾಲಿ ಮಾಡಿದ ಚಿಲುಮೆ ಎಂಟರ್ ಪ್ರೈಸಸ್
ಅಕ್ರಮ ಬಯಲಾಗುತ್ತಿದ್ದಂತೆ ಚಿಲುಮೆ ಎಂಟರ್ ಪ್ರೈಸಸ್ ಕಚೇರಿ ಖಾಲಿಯಾಗಿದೆ. ಬಿಬಿಎಂಪಿಗೆ ಕೊಟ್ಟ ವಿಳಾಸದಲ್ಲಿ, ಡಿಎಪಿ ಹೊಂಬಾಳೆ ವಿಳಾಸದಲ್ಲಿ ಯಾವುದೇ ಕಚೇರಿ ಇಲ್ಲ. ಕಟ್ಟಡ ಮಾಲೀಕರಿಗೆ ಮೂರು ತಿಂಗಳ ಬಾಡಿಗೆಯನ್ನೂ ನೀಡದೇ ಏಕಾಏಕಿ ಕಚೇರಿ ಖಾಲಿ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಓಟರ್ ಐಡಿ ಅಕ್ರಮ ಬಹಿರಂಗವಾಗುತ್ತಿದ್ದಂತೆ ತಿಂಗಳ ಹಿಂದೆ ಬಿಲ್ಡಿಂಗ್ ಖಾಲಿ ಮಾಡಲಾಗಿದೆಯಂತೆ. ಯಾವುದೇ ಸಾಕ್ಷಿಯನ್ನೂ ಉಳಿಸದೇ ಕಟ್ಟಡ ಖಾಲಿ ಮಾಡಲಾಗಿದೆಯಂತೆ.
Published On - 3:13 pm, Thu, 17 November 22