ಮಹಿಳೆಯದೇ ತಪ್ಪು ಎಂದ ಕಸದ ಲಾರಿ ಮಾಲೀಕ: ವ್ಯತಿರಿಕ್ತ ಹೇಳಿಕೆ ನೀಡಿದ ಪ್ರತ್ಯಕ್ಷದರ್ಶಿ
ಬೈಕ್ಗೆ ಡಿಕ್ಕಿ ಹೊಡೆದ ನಂತರ ಲಾರಿ ಚಾಲಕ ಎಸ್ಕೇಪ್ ಆಗಲು ಮುಂದಾಗಿದ್ದ ಎಂದು ಡಿಸಿಪಿ ಕುಲ್ದೀಪ್ ಕುಮಾರ್ ಜೈನ್ ಹೇಳಿದರು.
ಕಸದ ಲಾರಿ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ರಸ್ತೆ ಅಪಘಾತ ಕುರಿತು ಪ್ರತಿಕ್ರಿಯಿಸಿರುವ ಸಂಚಾರ ವಿಭಾಗ ಡಿಸಿಪಿ ಕುಲ್ದೀಪ್ ಕುಮಾರ್ ಜೈನ್, ಕಸದ ಲಾರಿ ಡಿಕ್ಕಿ ಹೊಡೆದು ಸ್ಕೂಟರ್ ಸವಾರರು ಸಾವನ್ನಪ್ಪಿದ್ದರು. ಬೈಕ್ಗೆ ಡಿಕ್ಕಿ ಹೊಡೆದ ನಂತರ ಲಾರಿ ಚಾಲಕ ಎಸ್ಕೇಪ್ ಆಗಲು ಮುಂದಾಗಿದ್ದ. ಸುಮಾರು 150 ಮೀಟರ್ ದೂರ ಹೊದ ಬಳಿಕ ಆಟೊ ಚಾಲಕರೊಬ್ಬರು ಲಾರಿ ತಡೆದಿದ್ದರು. ಈ ವೇಳೆ ಲಾರಿ ಚಾಲಕ ಶಿವರಾಜ್ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಆರೋಪಿ ಶಿವರಾಜನನ್ನು ಬಂಧಿಸಿದ್ದಾರೆ. ಪ್ರಾಥಮಿಕವಾಗಿ ತನಿಖೆ ನಡೆಸಿದಾಗ ಲಾರಿ ಚಾಲಕ ಕುಡಿದು ಚಾಲನೆ ಮಾಡಿಲ್ಲ ಎಂಬುದು ದೃಢಪಟ್ಟಿದೆ ಎಂದರು.
ದ್ವಿಚಕ್ರ ವಾಹನದಲ್ಲಿದ್ದ ಪದ್ಮಿನಿ ಅವರೇ ತಪ್ಪು ಮಾಡಿದ್ದರು ಎಂದು ಪೊಲೀಸ್ ವಿಚಾರಣೆ ವೇಳೆ ಲಾರಿ ಚಾಲಕ ಶಿವರಾಜ್ ಹೇಳಿಕೆ ನೀಡಿದ್ದಾನೆ. ಪದ್ಮಿನಿಯೇ ಲಾರಿಗೆ ಅಡ್ಡ ಬಂದಿದ್ದರು. ಒಂದು ಬದಿಯಿಂದ ಲಾರಿ ಟಚ್ ಆಗಿ ಅವರ ಮೇಲೆ ಹರಿದಿದೆ. ಇದರಲ್ಲಿ ನನ್ನ ತಪ್ಪೇನೂ ಇಲ್ಲ ಎಂದು ಲಾರಿ ಚಾಲಕ ತಿಳಿಸಿದ್ದಾನೆ. ಶಿವರಾಜ್ ಮೂಲತಃ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಮುದ್ನಾಳ್ ಗ್ರಾಮದ ನಿವಾಸಿ.
ಲಾರಿ ಚಾಲಕ ಪದ್ಮಿನಿ ಅವರಿದ್ದ ಸ್ಕೂಟರ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದ ಎಂದು ಪ್ರತ್ಯಕ್ಷದರ್ಶಿ ಆಟೊ ಚಾಲಕ ರಾಜು ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮುಂಜಾಗ್ರತಾ ಕ್ರಮ: ಗೌರವ್ ಗುಪ್ತಾ ಬೆಂಗಳೂರಲ್ಲಿ ನಿನ್ನೆ ಸುರಿದ ಮಳೆಯಿಂದ ಹಲವೆಡೆ ಅವಾಂತರ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಬೃಹತ್ ಬೇಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದರು. ಪೌರಕಾರ್ಮಿಕರು ಈಗಾಗಲೇ ಹಲವು ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಳೆಯಿಂದ ತೊಂದರೆ ಅನುಭವಿಸಿದ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕಸದ ಲಾರಿಗಳಿಂದ ರಸ್ತೆ ಅಪಘಾತಗಳು ಆಗುತ್ತಿರುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಘನತ್ಯಾಜ್ಯ ವಿಲೇವಾರಿಯ ಎಲ್ಲ ವಾಹನಗಳ ದಾಖಲೆ ಪರಿಶೀಲಿಸುತ್ತೇವೆ. ಫ್ಲೈಓವರ್, ಜಂಕ್ಷನ್ ಅಕ್ಕಪಕ್ಕ ವೇಗವಾಗಿ ವಾಹನಗಳ ಸಂಚಾರ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರ ಜೊತೆ ಸಮಾಲೋಚನೆ ನಡೆಸುತ್ತೇವೆ. ವಾಹನಗಳ ದಾಖಲೆಗಳನ್ನು ತಾಂತ್ರಿಕವಾಗಿ ಪರಿಶೀಲನೆ ಮಾಡುತ್ತೇವೆ. ಫಿಟ್ನೆಸ್ ಸರ್ಟಿಫಿಕೆಟ್, ವಿಮೆಯ ದಾಖಲೆ ಸರಿಯಿಲ್ಲದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಅನುಭವಿ ಚಾಲಕರನ್ನೇ ನೇಮಿಸಿಕೊಳ್ಳುತ್ತೇವೆ ಎಂದರು.
ಕಸದ ಲಾರಿ ಡಿಕ್ಕಿ: ಮಹಿಳೆ ಸಾವು ದ್ವಿಚಕ್ರ ವಾಹನಕ್ಕೆ ಕಸದ ಲಾರಿ ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿರುವ ಘಟನೆ ನಗರದ ನಾಯಂಡಹಳ್ಳಿ ಬಳಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಸೇಂಟ್ ಮಾರ್ಕ್ಸ್ ರಸ್ತೆಯಿಂದ ರಾಜರಾಜೇಶ್ವರಿ ನಗರಕ್ಕೆ ಹೋಗುತ್ತಿದ್ದ ಪದ್ಮಿನಿ ಮೃತರು. ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಕೂಟರ್ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಚಾಲಕ ಲಾರಿಯನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಪರಾರಿಯಾದ. ಕಸದ ಲಾರಿಗಳಿಂದ ಪದೇಪದೇ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ವಾಹನಗಳ ಕ್ರಮಬದ್ಧ ತಪಾಸಣೆ ಮತ್ತು ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಈ ಕುರಿತು ಆದೇಶ ಹೊರಡಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಎಲ್ಲ ಕಾಂಪ್ಯಾಕ್ಟರ್, ಟಿಪ್ಪರ್ಗಳು ಫಿಟ್ನೆಸ್ ಸರ್ಟಿಫಿಕೆಟ್ ಹೊಂದಿರಬೇಕು. ವೇಗ ನಿಯಂತ್ರಕಗಳನ್ನು ಅಳವಡಿಸಿರಬೇಕು ಎಂದು ಹೇಳಿದ್ದಾರೆ.
ಘನತ್ಯಾಜ್ಯ ನಿರ್ವಹಣೆ ಅಧಿಕಾರಿಗಳು ಕಸದ ಲಾರಿಗಳ ಪ್ರಮಾಣ ಪತ್ರಗಳನ್ನು ಆಗಾಗ ಪರಿಶೀಲಿಸುತ್ತಿರುಬೇಕು. ಕಾರ್ಯಪಾಲಕ ಎಂಜಿನಿಯರ್ ಕಸದ ಲಾರಿಗಳ ರ್‍ಯಾಂಡಮ್ ಚೆಕ್ ಮಾಡಬೇಕು. ಚಾಲಕರ ವಾಹನ ಚಾಲನಾ ಸಾಮರ್ಥ್ಯವನ್ನು ನಿಗದಿತ ಮಾನದಂಡ ಬಳಸಿ ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕಸದ ಲಾರಿ ಡಿಕ್ಕಿ ಹೊಡೆದು ಮಹಿಳೆ ಸಾವು: ತಡವಾಗಿ ಎಚ್ಚೆತ್ತ ಬಿಬಿಎಂಪಿ, ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಇದನ್ನೂ ಓದಿ: ಬೆಂಗಳೂರಿನ ಜಟ್ಕಾ ಕಟ್ ಹಿಂದವೀ ಮೀಟ್ ಮಾರ್ಟ್‌ಗಳಿಗೆ ಬಿಬಿಎಂಪಿ ನೊಟೀಸ್