ಬೆಂಗಳೂರಿನ ಜಟ್ಕಾ ಕಟ್ ಹಿಂದವೀ ಮೀಟ್ ಮಾರ್ಟ್‌ಗಳಿಗೆ ಬಿಬಿಎಂಪಿ ನೊಟೀಸ್

ಲೈಸನ್ಸ್ ಪಡೆಯದೆ ಹಿಂದವೀ ಮೀಟ್ ಮಾರ್ಟ್​ಗಳನ್ನು ತೆರೆಯಲಾಗಿದೆ. ತಕ್ಷಣ ಪರವಾನಗಿ ಪಡೆಯಬೇಕು ಎಂದು ಸೂಚಿಸಿರುವ ಬಿಬಿಎಂಪಿ, ಒಂದು ವಾರದ ಗಡುವು ನೀಡಿದೆ.

ಬೆಂಗಳೂರಿನ ಜಟ್ಕಾ ಕಟ್ ಹಿಂದವೀ ಮೀಟ್ ಮಾರ್ಟ್‌ಗಳಿಗೆ ಬಿಬಿಎಂಪಿ ನೊಟೀಸ್
ಹಿಂದವೀ ಮೀಟ್ ಮಾರ್ಟ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 19, 2022 | 7:50 AM

ಬೆಂಗಳೂರು: ಹಲಾಲ್​ ವಿರೋಧಿ ಆಂದೋಲನದ ಭಾಗವಾಗಿ ಆರಂಭವಾದ ಹಿಂದವೀ ಮೀಟ್ ಮಾರ್ಟ್​ಗಳಿಗೆ ಬಿಬಿಎಂಪಿ ನೊಟೀಸ್ ಜಾರಿ ಮಾಡಿದೆ. ಲೈಸನ್ಸ್ ಪಡೆಯದೆ ಹಿಂದವೀ ಮೀಟ್ ಮಾರ್ಟ್​ಗಳನ್ನು ತೆರೆಯಲಾಗಿದೆ. ತಕ್ಷಣ ಪರವಾನಗಿ ಪಡೆಯಬೇಕು ಎಂದು ಸೂಚಿಸಿರುವ ಬಿಬಿಎಂಪಿ, ಒಂದು ವಾರದ ಗಡುವು ನೀಡಿದೆ. ಈ ಅವಧಿಯಲ್ಲಿ ಲೈಸೆನ್ಸ್ ಪಡೆಯದಿದ್ದರೆ ಮಾರ್ಟ್ ಮುಚ್ಚಿಸಲಾಗುವುದು ಎಂದು ಉಲ್ಲಾಳದ ಹಿಂದವೀ ಮಾರ್ಟ್ ಮಾಲೀಕನಿಗೆ ರಾಜರಾಜೇಶ್ವರಿ ವಲಯ ಕಚೇರಿಯಿಂದ ಜಾರಿ ಮಾಡಿರುವ ನೋಟಿಸ್ ಎಚ್ಚರಿಸಿದೆ. ಬಿಬಿಎಂಪಿ ಪಶುಪಾಲನೆ ಸಹಾಯಕ ನಿರ್ದೇಶಕರು ಈ ನೊಟೀಸ್ ನೀಡಿದ್ದಾರೆ.

ಹಲಾಲ್ ಕಟ್ ವಿರುದ್ಧ ನಡೆದಿದ್ದ ಪ್ರಚಾರದಲ್ಲಿ ಹಿಂದವೀ ಮೀಟ್ ಮಾರ್ಟ್ ಸಕ್ರಿಯವಾಗಿತ್ತು. ಆದರೆ ವ್ಯಾಪಾರ ನಡೆಸಲು ಹಿಂದವೀ ಮೀಟ್ ಮಾರ್ಟ್​ಗಳು ಪಾಲಿಕೆಯಿಂದ ಲೈಸೆನ್ಸ್ ಪಡೆದಿಲ್ಲ. ಹಲವು ಅಂಶಗಳನ್ನು ಉಲ್ಲೇಖಿಸಿ ಏಪ್ರಿಲ್ 12ರಂದು ಬಿಬಿಎಂಪಿ ನೊಟೀಸ್ ನೀಡಿದೆ. ಕೇವಲ ಕೋಳಿ ಅಂಗಡಿಯಾದರೆ ಪರವಾನಗಿ ಶುಲ್ಕ ₹ 2,500 ಇರುತ್ತದೆ. ಕೋಳಿಯ ಜೊತೆಗೆ ಮಟನ್ ಮತ್ತು ಫಿಶ್ ಮಳಿಗೆ ನಡೆಸುವುದಿದ್ದರೆ ₹10,500 ಶುಲ್ಕ ಪಾವತಿಸಬೇಕು. ಪ್ರತಿವರ್ಷ ಶುಲ್ಕ ಪಾವತಿಸಬೇಕು. ಮೊದಲ ಬಾರಿಗೆ ಪರವಾನಿಗೆ ಪಡೆಯಲು ಇದೇ ಶುಲ್ಕ ಅನ್ವಯವಾಗುತ್ತದೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ಉಲ್ಲಾಳ, ಜ್ಞಾನ ಭಾರತಿ, ಕಮ್ಮನಹಳ್ಳಿ, ಇಂದಿರಾನಗರ, ಹೊರಮಾವು, ನಾಗವಾರ, ಬನ್ನೇರುಘಟ್ಟ, ನೆಲಗದರನಹಳ್ಳಿಯಲ್ಲಿ ಹಿಂದವೀ ಮೀಟ್ ಮಾರ್ಟ್​ಗಳು ಕಾರ್ಯನಿರ್ವಹಿಸುತ್ತಿವೆ. ಬಿಬಿಎಂಪಿ ನಿಯಮಗಳಿಗೆ ಅನುಗುಣವಾಗಿ ನಾವು ಲೈಸೆನ್ಸ್ ಪಡೆದುಕೊಳ್ಳುತ್ತೇವೆ. ಎಲ್ಲ ನಿಯಮಗಳನ್ನೂ ಪಾಲಿಸುತ್ತೇವೆ ಎಂದು ಹಿಂದವೀ ಮೀಟ್ ಮಾರ್ಟ್ ಮಾಲೀಕ ಮುನೇಗೌಡ ಪ್ರತಿಕ್ರಿಯಿಸಿದರು.

ಲೈಸೆನ್ಸ್ ಪಡೆಯದಿರುವುದೂ ಸೇರಿದಂತೆ ನೊಟೀಸ್ ಜಾರಿ ಮಾಡಲು ಇತರ ಕೆಲ ಕಾರಣಗಳೂ ಇವೆ. ಬಿಬಿಎಂಪಿ ಪಟ್ಟಿ ಮಾಡಿರುವ ಕಾರಣಗಳಿವು…

– ಪಾಲಿಕೆ ನೀಡುವ ಪರವಾನಗಿ ಪಡೆದುಕೊಂಡಿಲ್ಲ. – ಮಾರಾಟ ಮಾಡುವ ಮಾಂಸದ ಮೇಲೆ ಪಾಲಿಕೆ ಅಧಿಕೃತ ಮಾರ್ಕ್ ಇರುವುದಿಲ್ಲ. – ಮಾಂಸ ಮಾರಾಟ ಮಾಡುವ ಮಳಿಗೆಯಲ್ಲಿಯೇ ಅನಧಿಕೃತ ಪ್ರಾಣಿ ವಧೆ – ಮಾಂಸದ ಮಳಿಗೆಯಲ್ಲಿ ಗ್ಲಾಸ್ ಅಳವಡಿಸದೇ ಇರುವುದು – ಇನ್​ಸೆಕ್ಟ್ ಟ್ರ್ಯಾಪ್ ಅಳವಡಿಸಿಲ್ಲ – ಸಿಬ್ಬಂದಿಯ ವಾರ್ಷಿಕ ಆರೋಗ್ಯ ತಪಾಸಣೆಯ ಪತ್ರ ಒದಗಿಸಿಲ್ಲ – ಮಾಂಸ ಕತ್ತರಿಸುವ ಉಪಕರಣಗಳನ್ನು ಸಮರ್ಪಕ ರೀತಿಯಲ್ಲಿ ಶುದ್ಧಗೊಳಿಸುತ್ತಿಲ್ಲ – ಮಾಂಸ, ಕೋಳಿ ಮಾರಾಟ ಮಳಿಗೆಯಲ್ಲಿ ಗಾಳಿ, ಬೆಳಕು, ಶುದ್ಧ ನೀರಿನ ವ್ಯವಸ್ಥೆ ಇಲ್ಲ – ಮಾಂಸದ ಅಂಗಡಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ವ್ಯವಸ್ಥಿತವಾಗಿ ವಿಲೇವಾರಿ ಮಾಡುತ್ತಿಲ್ಲ – ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಪರಿಸರ ಮಾಲಿನ್ಯ ಉಂಟು ಮಾಡಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನ ಹಿಂದವೀ ಮೀಟ್ ಮಾರ್ಟ್​ಗಳಲ್ಲಿ ನಿನ್ನೆ ಒಂದೇ ದಿನ 43 ಲಕ್ಷ ರೂಪಾಯಿ ವ್ಯಾಪಾರ; ಕೆಲ ಮಾಹಿತಿ ಇಲ್ಲಿದೆ

ಇದನ್ನೂ ಓದಿ: ಈಗಾಗಲೇ FSSAI ಇರುವಾಗ ಹಲಾಲ್​ನ ಪ್ರತ್ಯೇಕ ಅಗತ್ಯವಿಲ್ಲ; 2020ರಲ್ಲೇ ಕೇಂದ್ರಕ್ಕೆ ಪತ್ರ ಬರೆದಿದ್ದ ಹಿಂದೂ ಮುಖಂಡ