ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಹೊಸ ತಿರುವು: ನಮ್ಮ ಮಾಲೀಕತ್ವದಲ್ಲಿ ಇಲ್ಲ ಎಂದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್
ಯೋಗ ಮತ್ತು ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವ ಅಧಿಕಾರ ನಮಗೆ ಇಲ್ಲ ಎಂದು ಹೇಳಿದರು.
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನವು ಬಿಬಿಎಂಪಿ ಮಾಲೀಕತ್ವದಲ್ಲಿ ಇಲ್ಲ. ಖಾತೆ ಮಾಡಿಸಿಕೊಳ್ಳಲು ವಕ್ಫ್ ಮಂಡಳಿ ಅರ್ಜಿ ಸಲ್ಲಿಸಬಹುದು ಎಂದು ಬಿಬಿಎಂಪಿ (Bruhat Bengaluru Mahanagara Palike – BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗ ಮತ್ತು ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವ ಅಧಿಕಾರ ನಮಗೆ ಇಲ್ಲ ಎಂದು ಹೇಳಿದರು. ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ವಕ್ಪ್ ಬೋರ್ಡ್ ನಮ್ಮ ಗಮನಕ್ಕೆ ತಂದಿರುವ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಈದ್ಗಾ ಮೈದಾನ ಬಿಬಿಎಂಪಿ ಮಾಲೀಕತ್ವದಲ್ಲಿ ಇಲ್ಲ ಎಂದು ಅವರು ಒಪ್ಪಿಕೊಂಡರು.
ನಗರ ವ್ಯಾಪ್ತಿಯಲ್ಲಿ ಸರ್ವೆ ನಡೆದಾಗ ಈದ್ಗಾ ಮೈದಾನವು ನಮ್ಮದು ಎಂದು ಯಾರೂ ಹೆಸರು ಬರೆಸಲಿಲ್ಲ. ಹೀಗಾಗಿ ಅದು ಬಿಬಿಎಂಪಿ ಹೆಸರಿಗೆ ಬಂದಿದೆ. ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ವಕ್ಫ್ ಮಂಡಳಿ ಅರ್ಜಿ ಸಲ್ಲಿಸಬಹುದು. ಅವರು ಅರ್ಜಿ ಸಲ್ಲಿಸಿದರೆ ದಾಖಲೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮಲ್ಲೇಶ್ವರಂನಲ್ಲಿ ಗೋಡೆ ಕುಸಿದು ಕಾರ್ಮಿಕನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಕಾರ್ಮಿಕನ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಅವರು ಘೋಷಿಸಿದರು. ಐಐಎಸ್ಸಿಯಿಂದ ಪರಿಹಾರ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಮತ್ತೊಮ್ಮೆ ₹ 25,000 ಪರಿಹಾರ ನೀಡಲು ಬಿಬಿಎಂಪಿ ನಿರ್ಧರಿಸಿದೆ ಎಂದು ಇದೇ ವೇಳೆ ಘೋಷಿಸಿದರು. ಮಳೆಯಿಂದ ಹಾನಿ ಅನುಭವಿಸುವ ನಿವಾಸಿಗಳಿಗೆ ಪರಿಹಾರ ನೀಡುತ್ತೇವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ವೇಳೆ ನಿರ್ಮಿಸಿದ್ದ ರಸ್ತೆಗಳು ಮಳೆಯಿಂದಾಗಿ ಮತ್ತೆ ಹಾಳಾಗಿವೆ. ಗುಣಮಟ್ಟದ ಕಾಮಗಾರಿ ಆಗಿಲ್ಲ. ಈ ಸಮಸ್ಯೆಯನ್ನು ಪರಿಹರಿಸುತ್ತೇವೆ. ಕೇವಲ ಒಂದು ಘಟನೆಯನ್ನು ನೋಡಿ ಅದನ್ನು ಎಲ್ಲೆಡೆ ಸಾಮಾನ್ಯಗೊಳಿಸಿ ಹೇಳಬೇಡಿ ಎಂದು ವಿನಂತಿಸಿದರು. ಪ್ರಧಾನಿ ಬಂದಾಗ ನಗರದಲ್ಲಿ ಅಳವಡಿಸಿದ್ದ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ತೆಗೆಯಲು ಸೂಚನೆ ನೀಡಿದೆ. 16 ಸಾವಿರ ಬ್ಯಾನರ್ ಫ್ಲೆಕ್ಸ್ಗಳನ್ನು ಬಿಬಿಎಂಪಿಯೇ ತೆರವು ಮಾಡಿದೆ. ಸರ್ಕಾರದ ಬ್ಯಾನರ್ಗಳಿಗೆ, ಕೆಲ ಖಾಸಗಿ ವ್ಯಕ್ತಿಗಳ ಬ್ಯಾನರ್ಗಳಿಗೆ ಅನುಮತಿ ನೀಡಲಾಗಿತ್ತು. ಕೆಲ ಬ್ಯಾನರ್ಗಳಿಗೆ ಅನುಮತಿ ನೀಡಿರಲಿಲ್ಲ ಎಂದು ಹೇಳಿದರು.
ಅನಧಿಕೃತವಾಗಿ ಫ್ಲೆಕ್ಸ್ ಹಾಕಿದವರ ಮೇಲೆ ಪ್ರಕರಣ ದಾಖಲಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲರ ಮೇಲೂ ಕೇಸ್ ಹಾಕಲು ಆಗುವುದಿಲ್ಲ ಎಂದರು. ಈ ಹಿಂದೆ ನಗರದಲ್ಲಿ ಫ್ಲೆಕ್ಸ್ ಹಾಕಿದ್ದ ಕಾಂಗ್ರೆಸ್ ನಾಯಕರ ಮೇಲೆ ಬಿಬಿಎಂಪಿ ಪ್ರಕರಣ ದಾಖಲಿಸಿತ್ತು.
ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚೆ: ಸಿಎಂ ಬೊಮ್ಮಾಯಿ
ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರ ಜತೆ ಚರ್ಚೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:41 pm, Wed, 22 June 22