BBMP Elections 2022: ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಆರಂಭಿಸಿದ ಬಿಜೆಪಿ, ವಾರ್ಡ್​ ಗ್ರೂಪ್​ ಸಂಘಟನೆಗೆ ಒತ್ತು ಕೊಡಲು ನಿರ್ಧಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 26, 2022 | 10:03 PM

ಯಾವ್ಯಾವ ಪಕ್ಷದ ಆಡಳಿತ ಅವಧಿಯಲ್ಲಿ ಬೆಂಗಳೂರಿಗೆ ಏನೆಲ್ಲಾ ದೊರೆಯಿತು ಎನ್ನುವ ವಿವರವನ್ನು ಜನರ ಎದುರು ಇರಿಸುತ್ತೇವೆ. ಅತಿಹೆಚ್ಚು ಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದರು.

BBMP Elections 2022: ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಆರಂಭಿಸಿದ ಬಿಜೆಪಿ, ವಾರ್ಡ್​ ಗ್ರೂಪ್​ ಸಂಘಟನೆಗೆ ಒತ್ತು ಕೊಡಲು ನಿರ್ಧಾರ
ಸಂಸದ ತೇಜಸ್ವಿ ಸೂರ್ಯ ಮತ್ತು ಬಿಬಿಎಂಪಿ ಕಚೇರಿ
Follow us on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ (BBMP Elections) ಭಾರತೀಯ ಜನತಾ ಪಕ್ಷವು (BJP) ಸಿದ್ಧತೆ ಆರಂಭಿಸಿದೆ. ಮಂಗಳವಾರ ಮತ್ತು ಬುಧವಾರ (ಜ.25-26) ಸತತ ಎರಡು ದಿನಗಳ ಕಾಲ ಬೆಂಗಳೂರು ನಗರ ವ್ಯಾಪ್ತಿಯ ಪದಾಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚುನಾವಣೆ ಸಿದ್ಧತೆ ಕುರಿತು ಶಾಸಕರು, ಸಚಿವರು, ಲೋಕಸಭಾ ಸದಸ್ಯರ ಜತೆ ಚರ್ಚಿಸಲಾಯಿತು. ಪಕ್ಷ ಸಂಘಟನೆ, ವಾರ್ಡ್, ಗ್ರೂಪ್​ ಮಟ್ಟದಲ್ಲಿ ಸಬಲೀಕರಣಕ್ಕೆ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದರು. ನಗರ ವ್ಯಾಪ್ತಿಯಲ್ಲಿ ಜನರು ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳು ಹಾಗೂ ಸಂಘಟನೆಯ ವಿಚಾರದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ನಗರ ವ್ಯಾಪ್ತಿಯಲ್ಲಿ ಬಿಜೆಪಿ ಸದೃಢವಾಗಿದೆ. ಕಳೆದ‌ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯರೇ ಆಯ್ಕೆಯಾಗಿದ್ದರು. ಈ ಬಾರಿಯೂ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಸಭೆಯ ವಿವರ ನೀಡಿದ ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಚುನಾವಣೆಗೆ ಪಕ್ಷವನ್ನು ಸಿದ್ಧಪಡಿಸುವ ಕುರಿತು ಮುಖ್ಯಮಂತ್ರಿಯ ಜೊತೆಗೆ ಸುದೀರ್ಘ ಚರ್ಚೆ ನಡೆಯಿತು. ಅಭಿವೃದ್ಧಿ ಕೆಲಸಗಳ ವೇಗ ಹೆಚ್ಚಿಸಬೇಕು. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆಯಬೇಕು ಎಂಬ ಬಗ್ಗೆ ಎಲ್ಲರೂ ತಮ್ಮ ಅಭಿಪ್ರಾಯ ಹಂಚಿಕೊಂಡರು. ಬೆಂಗಳೂರಿನ ಅಭಿವೃದ್ಧಿ ಕುರಿತಾಗಿ, ಮೂಲ‌ಸೌಕರ್ಯ ಕಲ್ಪಿಸುವುದು, ಕೊಳಚೆ ಪ್ರದೇಶದ ಅಭಿವೃದ್ಧಿ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಬಗ್ಗೆ ಗಮನ ಹರಿಸಲು ಮುಖ್ಯಮಂತ್ರಿ ಸೂಚಿಸಿದರು. ನಗರದ ಸಮಸ್ಯೆಗಳನ್ನು ಒಂದು ವಾರದಲ್ಲಿ ಪರಿಹರಿಸಲು ನಿರ್ಧರಿಸಲಾಯಿತು ಎಂದರು.

ಬೆಂಗಳೂರು ನಗರಕ್ಕೆ ಕಾವೇರಿ ನೀರಿನ ಸುಗಮ ಪೂರೈಕೆ, ಮೆಟ್ರೊ ಯೋಜನೆ, ಉಪನಗರ ರೈಲು ಯೋಜನೆಗಳು ಬಿಜೆಪಿ ಅಧಿಕಾರದ ಅವಧಿಯಲ್ಲಿ ಬಂದಿವೆ. ಅಭಿವೃದ್ಧಿ ಕೆಲಸಗಳ ವೇಗ ಹೆಚ್ಚಿಸುವ ಬಗ್ಗೆ ಹಾಗೂ ನಗರ ವ್ಯಾಪ್ತಿಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಚುನಾವಣೆಗೆ ಸನ್ನದ್ಧರಾಗಲು ಹಾಗೂ ಪ್ರತಿಪಕ್ಷಗಳನ್ನು ಎದುರಿಸಲು ಕಾರ್ಯಕರ್ತರನ್ನು ಹುರಿದುಂಬಿಸಲಾಗುತ್ತಿದೆ ಎಂದು ಹೇಳಿದರು.

ನಗರವಾಸಿಗಳ ಸಮಸ್ಯೆಗಳನ್ನು ಅರಿತು ಮಾಹಿತಿ ನೀಡುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಬೆಂಗಳೂರಿನ ಶಾಸಕರು, ಸಂಸದರು, ಮುಖಂಡರಿಗೆ ಸೂಚಿಸಿದ್ದಾರೆ. ಅದರಂತೆ ಸೋಮವಾರದಿಂದ ವಿವಿಧೆಡೆ ಸಭೆಗಳು ನಡೆಯಲಿವೆ. ನಗರ ವ್ಯಾಪ್ತಿಯಲ್ಲಿ ಎಷ್ಟು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎನ್ನುವುದನ್ನು ನ್ಯಾಯಾಲಯ ಸೂಚಿಸಲಿದೆ. ಅತಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಎಲ್ಲ ಸ್ಥಾನಗಳನ್ನು ಗೆಲ್ಲಲು ಪರಿಶ್ರಮ ಹಾಕುತ್ತೇವೆ. ಯಾವ್ಯಾವ ಪಕ್ಷದ ಆಡಳಿತ ಅವಧಿಯಲ್ಲಿ ಬೆಂಗಳೂರಿಗೆ ಏನೆಲ್ಲಾ ದೊರೆಯಿತು ಎನ್ನುವ ವಿವರವನ್ನು ಜನರ ಎದುರು ಇರಿಸುತ್ತೇವೆ. ಅತಿಹೆಚ್ಚು ಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದರು.

ಇದನ್ನೂ ಓದಿ: BBMP Elections 2022: ಬಿಬಿಎಂಪಿ ವಾರ್ಡ್​ಗಳ ಮರುವಿಂಗಡಣೆ: 198ರ ಬದಲು 243 ವಾರ್ಡ್​ ರಚನೆಗೆ ವರದಿ ಸಲ್ಲಿಕೆ, ಪ್ರದೇಶ ವಿಸ್ತರಣೆ ಇಲ್ಲ
ಇದನ್ನೂ ಓದಿ: ಬಿಬಿಎಂಪಿಗೆ ಚುನಾವಣೆ: ಶೀಘ್ರ ಸುಪ್ರೀಂಕೋರ್ಟ್‌ ಹಸಿರು ನಿಶಾನೆ ನಿರೀಕ್ಷೆ, ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಕೋಟಿ ವೆಚ್ಚಕ್ಕೆ ನಿರ್ಧಾರ

Published On - 10:00 pm, Wed, 26 January 22