ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಟ್ಟಡಗಳ ಕುಸಿತ ಹೆಚ್ಚಾಗಿದೆ. ಎರಡು ದಿನಗಳ ಹಿಂದೆ ನಗರದ ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ಇಂದು ಡೇರಿ ಸರ್ಕಲ್ ಬಳಿಯ ಕೆಎಂಎಫ್ ಕ್ವಾಟ್ರಸ್ ಒಳಗಡೆ ಇರುವ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಕೇವಲ ಎರಡು ದಿನದ ಅಂತರದಲ್ಲಿ ಮೂರು ಅಂತಸ್ತಿನ ಎರಡು ಕಟ್ಟಡಗಳು ಕುಸಿದಿವೆ. ಹೀಗಾಗಿ ಬೆಂಗಳೂರಿನ ಜನರಲ್ಲಿ ಆತಂಕ ಹೆಚ್ಚಾಗಿದ್ದು ಮತ್ತೊಂದು ಆತಂಕಕಾರಿ ಮಾಹಿತಿ ಹೊರ ಬಿದ್ದಿದೆ.
ನಗರದಲ್ಲಿ 250ಕ್ಕೂ ಹೆಚ್ಚು ಕಟ್ಟಡಗಳು ಕುಸಿಯುವ ಹಂತದಲ್ಲಿವೆ ಎಂದು ಬಿಬಿಎಂಪಿ 2019ರಲ್ಲಿ ಕಟ್ಟಡಗಳ ಪಟ್ಟಿ ಮಾಡಿತ್ತು. ಪೂರ್ವ ವಲಯ 60, ಪಶ್ಚಿಮ ವಲಯ 33 ಕಟ್ಟಡ, ಯಲಹಂಕ 70, ದಕ್ಷಿಣ ವಲಯ 40, ಮಹದೇವಪುರ ವಲಯದಲ್ಲಿ 5 ಕಟ್ಟಡಗಳು ಕುಸಿಯುವ ಹಂತದಲ್ಲಿವೆ. 2019ರಲ್ಲೇ ಕುಸಿಯುವ ಕಟ್ಟಡಗಳ ಪಟ್ಟಿ ಮಾಡಿದ್ದರೂ ಇದೂವರೆಗೂ ಶಿಥಿಲಗೊಂಡ ಕಟ್ಟಡಗಳನ್ನ ತೆರವು ಮಾಡಲು ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಬಿಎಂಪಿಯ ನಿರ್ಲಕ್ಷ್ಯದಿಂದಾಗಿ ಇಂದು ಜನ ಸಂಕಷ್ಟ ಎದುರಿಸುವಂತಾಗಿದೆ.
ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ
ಸೆಪ್ಟೆಂಬರ್ 27ರಂದು ಬಂದ್ ಇದ್ರೂ ಮೆಟ್ರೋ ಕಾಮಗಾರಿಗೆ ಮಾತ್ರ ಬ್ರೇಕ್ ಹಾಕಿರಲಿಲ್ಲ. ಹಾಗಾಗಿ ಕಾರ್ಮಿಕರೆಲ್ಲಾ ನಿನ್ನೆ ಬೆಳಗ್ಗೆ ಬೇಗನೆ ಎದ್ದು ತಮ್ಮ ತಮ್ಮ ಪಾಡಿಗೆ ಕೆಲಸಕ್ಕೆ ಹೋಗಿದ್ರು. ಒಬ್ಬರಲ್ಲ ಇಬ್ಬರಲ್ಲ.. ಈ ಬಿಲ್ಡಿಂಗ್‌ನಲ್ಲಿ ವಾಸಿಸುತ್ತಿದ್ದ ಸುಮಾರು 30 ಮಂದಿ ಕಾರ್ಮಿಕರು ಕೆಲಸಕ್ಕೆ ತೆರಳಿದ್ರು. ಕೇವಲ ಮೂರ್ನಾಕು ಸೆಕೆಂಡ್‌ಗಳಷ್ಟೇ ನಿನ್ನೆ ಬೆಳಗ್ಗೆ 11:30 ರ ಸುಮಾರಿಗೆ ಸ್ಥಳೀಯರು ನೋಡ-ನೋಡ್ತಿದ್ದಂತೆ ಕಣ್ಣೆದುರಲ್ಲೇ ಮೂರಂತಸ್ತಿನ ಕಟ್ಟಡ ನೆಲಸಮವಾಗಿತ್ತು. ಹೀಗೆ ಕಣ್ಣೆದುರೇ ಕಟ್ಟಡ ನೆಲಸಮವಾಗ್ತ್ತಿದ್ದಂತೆ ಅಲ್ಲಿದ್ದವರೆಲ್ಲಾ ಓಡ್ರೋ ಓಡ್ರೋ ಅಂತಾ ಕಾಲ್ಕಿತ್ತು ಬಚಾವ್ ಆಗಿದ್ರು. ಬಿಲ್ಡಿಂಗ್ ಬೀಳ್ತಿದ್ದಂತೆ ಕ್ಷಣಾರ್ಧದಲ್ಲಿ ಇಡೀ ಪ್ರದೇಶ ಧೂಳಿನಿಂದ ಆವೃತವಾಗಿತ್ತು. ಆ ಎಲ್ಲಾ ಭೀಕರ ದೃಶ್ಯಗಳು ಮೊಬೈಲ್‌ನಲ್ಲೇ ಸೆರೆಯಾಗಿದ್ವು.
ಕಟ್ಟಡ ವಾಲಿರೋದು ಅಕ್ಕಪಕ್ಕದ ಮನೆಯವರ ಗಮನಕ್ಕೆ ಬಂದಿತ್ತು. ಹಾಗಾಗಿ ಸ್ಥಳೀಯರೇ ಮುಂದೆ ನಿಂತು ಕಾರ್ಮಿಕರನ್ನ ಹೊರಗೆ ಕರೆಸಿ ಕೆಲಸಕ್ಕೆ ಕಳುಹಿಸಿದ್ರು. ಇನ್ನುಳಿದಿದ್ದ ಇಬ್ಬರನ್ನು ಸಹ ಹೊರಗೆ ಕರೆತಂದಿದ್ದಾರೆ. ಬಳಿಕ ಬಿಲ್ಡಿಂಗ್ ಸುತ್ತಮುತ್ತ ಇದ್ದ ವಾಹನಗಳನ್ನ ತೆರವುಗೊಳಿಸಿ ಅಲರ್ಟ್ ಆಗಿದ್ರು. ಹಾಗಾಗಿ ಈ ಕಟ್ಟಡದಲ್ಲಿದ 30 ಮಂದಿ ಕಾರ್ಮಿಕರ ಪ್ರಾಣ ಉಳಿದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಮೂರು ಅಂತಸ್ತಿನ ಕಟ್ಟಡ ಕುಸಿತ! ಮಗುವನ್ನು ರಕ್ಷಿಸುವುದಕ್ಕೆ ಕೆಳಗೆ ಎಸೆದ ಪೋಷಕರು