ಬಿಬಿಎಂಪಿ ಕಲ್ಯಾಣ ಇಲಾಖೆಯಲ್ಲಿ ಬಹುಕೋಟಿ ಹಗರಣ: ಪಶ್ಚಿಮ ವಲಯ ಜಂಟಿ ಅಯುಕ್ತರ ವರ್ಗಾವಣೆ

| Updated By: Ganapathi Sharma

Updated on: Jul 04, 2024 | 12:19 PM

ಬಿಬಿಎಂಪಿ ಕಲ್ಯಾಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆಯೇ ರಾಜ್ಯ ಸರ್ಕಾರ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಅಯುಕ್ತರನ್ನು ವರ್ಗಾವಣೆ ಮಾಡಿದೆ. ಇದರೊಂದಿಗೆ ರಾಜ್ಯದಲ್ಲಿ ಮತ್ತೊಂದು ಹಗರಣದ ವಿಚಾರ ಈಗ ಮುನ್ನೆಲೆಗೆ ಬಂದಂತಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ, ಮುಡಾ ಅಕ್ರಮದ ಜತೆ ಬಿಬಿಎಂಪಿ ಕಲ್ಯಾಣ ಇಲಾಖೆ ಅಕ್ರಮದ ಬಗ್ಗೆಯೂ ಚರ್ಚೆ ಜೋರಾಗಿದೆ.

ಬಿಬಿಎಂಪಿ ಕಲ್ಯಾಣ ಇಲಾಖೆಯಲ್ಲಿ ಬಹುಕೋಟಿ ಹಗರಣ: ಪಶ್ಚಿಮ ವಲಯ ಜಂಟಿ ಅಯುಕ್ತರ ವರ್ಗಾವಣೆ
ಬಿಬಿಎಂಪಿ ಕಲ್ಯಾಣ ಇಲಾಖೆಯಲ್ಲಿ ಬಹುಕೋಟಿ ಹಗರಣ: ಪಶ್ಚಿಮ ವಲಯ ಜಂಟಿ ಅಯುಕ್ತರ ವರ್ಗಾವಣೆ
Follow us on

ಬೆಂಗಳೂರು, ಜುಲೈ 4: ಬಿಬಿಎಂಪಿ ಕಲ್ಯಾಣ ಇಲಾಖೆಯಲ್ಲಿ ನಡೆದಿತ್ತು ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಅಯುಕ್ತರನ್ನು ವರ್ಗಾವಣೆ ಮಾಡಲಾಗಿದೆ. ಬಹುಕೋಟಿ ಹಗರಣ ಹೊರ ಬರುತ್ತಿದಂತೆಯೇ ಜಂಟಿ ಅಯುಕ್ತರ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಅದೇಶ ಹೊರಡಿಸಿದೆ. ಸದ್ಯ ಅವರನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿ ನಿಯುಕ್ತಿಗೊಳಿಸಲಾಗಿದೆ.

ಕಲ್ಯಾಣ ಇಲಾಖೆಯಲ್ಲಿ ಹಗರಣ ನಡೆದಿದ್ದ ಬಗ್ಗೆ ‘ಟಿವಿ9’ ಸುದ್ದಿ ಬಿತ್ತರಿಸಿತ್ತು. ಕೋವಿಡ್ ಸಾಂಕ್ರಾಮಿಕದ ವೇಳೆ ನಡೆದಿದ್ದ ಹಗರಣ ಸಂಬಂಧ ಲೋಕಾಯುಕ್ತ ವಿಚಾರಣೆಗೆ ಅನುಮತಿ ಕೇಳಿದ್ದ ಬಗ್ಗೆ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಜಂಟಿ ಆಯುಕ್ತರ ವರ್ಗಾವಣೆಯಾಗಿದೆ.

102 ಕೋಟಿ ರೂ. ಹಗರಣ

ಕಲ್ಯಾಣ ಇಲಾಖೆಯಿಂದ ಹೆಸರೇ ಇಲ್ಲದ ಸೊಸೈಟಿಗಳಿಗೆ ಹಣ ವರ್ಗಾಯಿಸಿದ್ದ ಆರೋಪ ಕೇಳಿಬಂದಿತ್ತು. ಸುಮಾರು 102 ಕೋಟಿ ರೂಪಾಯಿ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿತ್ತು. ಕೋವಿಡ್ ವೇಳೆ ಹಣ ವರ್ಗಾಯಿಸಿದ್ದ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. 2020 ರಿಂದ 2021ರ ಅವಧಿಯಲ್ಲಿ ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ ಈ ಬಹುಕೋಟಿ ಹಗರಣ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಹಣಕಾಸು ವಿಭಾಗದ 9 ಅಧಿಕಾರಿಗಳ ಮೇಲೆ ದೂರು ದಾಖಲಾಗಿತ್ತು.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ರೀತಿಯೇ ಬಿಬಿಎಂಪಿಯಲ್ಲೂ ಬಹುಕೋಟಿ ಹಗರಣ; 9 ಅಧಿಕಾರಿಗಳ ವಿರುದ್ಧ ದೂರು ದಾಖಲು

ಹಣ ದುರುಪಯೋಗದ ಕುರಿತು ವಿಚಾರಣೆ ನಡೆಯುತ್ತಿದೆ. ಯಾವ ಆಧಾರದಲ್ಲಿ ಆರೋಪ ಮಾಡಲಾಗಿದೆ ಎಂಬುದನ್ನು ತಿಳಿಯಬೇಕಿದೆ. ಹಗರಣ ಸಂಬಂಧ ಲೋಕಾಯುಕ್ತರು ನಮ್ಮ ಬಳಿ ವರದಿ ಕೇಳಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದರು. ಹಗರಣ ಆರೋಪಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳ ಕಚೇರಿ ಕೂಡ ಬಿಬಿಎಂಪಿಯಿಂದ ವರದಿ ಕೇಳಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ