Bengaluru Lakes: ಬೆಂಗಳೂರು ಕೆರೆಗಳ ನಿರ್ವಹಣೆ, ಅಭಿವೃದ್ಧಿಪಡಿಸಲು ಖಾಸಗಿ ಸಂಸ್ಥೆಗಳಿಗೆ ಅವಕಾಶ! ಬಿಬಿಎಂಪಿ ಹೊಸ ಯೋಜನೆ

|

Updated on: May 13, 2024 | 8:04 AM

ಈ ಹಿಂದೆ ಕೂಡ ಬಿಬಿಎಂಪಿ ಖಾಸಗಿ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿತ್ತು. ಆದರೆ, ನ್ಯಾಯಾಲಯದ ಆದೇಶದ ನಂತರ ಆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. ಅದಾಗಿ ನಾಲ್ಕು ವರ್ಷಗಳ ನಂತರ ಈಗ ಪುನಃ ಅಂಥ ಕ್ರಮಕ್ಕೆ ಮುಂದಾಗಿದೆ.

Bengaluru Lakes: ಬೆಂಗಳೂರು ಕೆರೆಗಳ ನಿರ್ವಹಣೆ, ಅಭಿವೃದ್ಧಿಪಡಿಸಲು ಖಾಸಗಿ ಸಂಸ್ಥೆಗಳಿಗೆ ಅವಕಾಶ! ಬಿಬಿಎಂಪಿ ಹೊಸ ಯೋಜನೆ
ಬೆಂಗಳೂರು ಕೆರೆಗಳ ನಿರ್ವಹಣೆ, ಅಭಿವೃದ್ಧಿಪಡಿಸಲು ಖಾಸಗಿ ಸಂಸ್ಥೆಗಳಿಗೆ ಅವಕಾಶ!
Follow us on

ಬೆಂಗಳೂರು, ಮೇ 13: ಬೆಂಗಳೂರಿನಾದ್ಯಂತ ಇರುವ ಕೆರೆಗಳ (Bengaluru Lakes) ಸಮರ್ಪಕ ನಿರ್ವಹಣೆ ಮಾಡದೆ ಅಂತರ್ಜಲ ಪ್ರಮಾಣ ಕುಸಿದಂಥ ಸಂಕಷ್ಟ ಎದುರಿಸಬೇಕಾಗಿ ಬಂದಿರುವುದು ಹಾಗೂ ಮಳೆಗಾಲದಲ್ಲಿ ಪ್ರವಾಹದಂಥ ಸಮಸ್ಯೆಗಳು ಸೃಷ್ಟಿಯಾಗುತ್ತಿರುವುದನ್ನು ತಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಇದೀಗ ಹೊಸ ಐಡಿಯಾವೊಂದು ಪಾಲಿಕೆಗೆ ಹೊಳೆದಿದೆ. ಅದರಂತೆ ಹೊಸ ಯೋಜನೆಯನ್ನೂ ರೂಪಿಸಲು ಮುಂದಾಗಿದೆ. ಖಾಸಗಿ ಸಂಸ್ಥೆಗಳು, ಲಾಭೋದ್ದೇಶವಿಲ್ಲದ ಸ್ವಯಂಸೇವಾ ಸಂಸ್ಥೆಗಳು ಮತ್ತು ನಾಗರಿಕ ಗುಂಪುಗಳಿಗೆ ಕೆರೆಗಳ ಅಭಿವೃದ್ಧಿಗೆ ಹಣ, ಸಂಪನ್ಮೂಲಗಳನ್ನು ನೀಡಲು ಅವಕಾಶ ನೀಡುವ ಹೊಸ ನೀತಿಯನ್ನು ರೂಪಿಸಿದೆ. ಜತೆಗೆ, ಈ ಸಂಸ್ಥೆಗಳಿಗೆ ಕೆರೆಗಳ ನಿರ್ವಹಣೆಗೆ ಅವಕಾಶ ನೀಡಲೂ ಮುಂದಾಗಿದೆ.

ಹೊಸ ನೀತಿಯ ಪ್ರಕಾರ, ಖಾಸಗಿ ಸಂಸ್ಥೆಗಳು ತಾವಾಗಿಯೇ ಕೆರೆ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಅಥವಾ ಬಿಬಿಎಂಪಿಗೆ ಆರ್ಥಿಕವಾಗಿ ನೆರವಾಗುವ ಮೂಲಕ ಪರೋಕ್ಷವಾಗಿ ಕೆರೆ ಕಾಮಗಾರಿಗಳಿಗೆ ನೆರವಾಗಬಹುದಾಗಿದೆ.

ಬಿಬಿಎಂಪಿಯ ಈ ಕ್ರಮ ಇದೇ ಮೊದಲಲ್ಲ!

ಈ ಹಿಂದೆ ಕೂಡ ಬಿಬಿಎಂಪಿ ಖಾಸಗಿ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿತ್ತು. ಆದರೆ, ನ್ಯಾಯಾಲಯದ ಆದೇಶದ ನಂತರ ಆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. ಅದಾಗಿ ನಾಲ್ಕು ವರ್ಷಗಳ ನಂತರ ಈಗ ಪುನಃ ಅಂಥ ಕ್ರಮಕ್ಕೆ ಮುಂದಾಗಿದೆ.

ಹೊಸ ನೀತಿಗೆ ‘ಸರೋವರ ಸಂರಕ್ಷಣೆಯಲ್ಲಿ ಸಮುದಾಯದ ಒಳಗೊಳ್ಳುವಿಕೆ ನೀತಿ, 2024’ ರ ಎಂದು ಹೆಸರಿಸಲಾಗಿದ್ದು, ಇದಕ್ಕೆ ಕರ್ನಾಟಕ ಹೈಕೋರ್ಟ್‌ನಿಂದ ಅನುಮೋದನೆ ಪಡೆಯುವ ಕೆಲಸ ಬಾಕಿ ಇದೆ ಎಂದು ಬಿಬಿಎಂಪಿ ತಿಳಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟಿವೆ ಕೆರೆಗಳು?

ಬಿಬಿಎಂಪಿ ವ್ಯಾಪ್ತಿಯಲ್ಲಿ 202 ಕೆರೆಗಳು ಇದ್ದು, ಅವುಗಳ ಪೈಕಿ 183 ಅಸ್ತಿತ್ವದಲ್ಲಿವೆ. ಇತರ ಕೆರೆಗಳು ಬಹುತೇಕ ಬತ್ತಿಹೋಗಿವೆ. ಸಂಪೂರ್ಣ ಒತ್ತುವರಿಯಾಗದ ಕೆರೆಗಳ ಪೈಕಿ 114 ಕೆರೆಗಳನ್ನು ಬಿಬಿಎಂಪಿ ಪುನರುಜ್ಜೀವನಗೊಳಿಸಿದೆ ಮತ್ತು ಇನ್ನೂ 42 ಕೆರೆಗಳ ಪುನಶ್ಚೇತನಕ್ಕೆ ಕೆಲಸ ಮಾಡುತ್ತಿದೆ. 27 ಅಭಿವೃದ್ಧಿಯಾಗಬೇಕಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ. ಕೆರೆಗಳ ಪುನಶ್ಚೇತನದ ಜೊತೆಗೆ ಅವುಗಳ ನಿರ್ವಹಣೆಗಾಗಿ 50 ಕೋಟಿ ರೂಪಾಯಿಗಳನ್ನು ಬಿಬಿಎಂಪಿ ವ್ಯಯಿಸುತ್ತದೆ. ಹೊಸ ನೀತಿ ಜಾರಿಗೆ ಬಂದರೆ ಈ ಮೊತ್ತ ಕಡಿಮೆ ಮಾಡಬಹುದಾಗಿದೆ ಎಂಬುದು ಬಿಬಿಎಂಪಿ ಲೆಕ್ಕಾಚಾರ.

ಇದನ್ನೂ ಓದಿ: ಬೆಂಗಳೂರಿನಲ್ಲಿ ತಡರಾತ್ರಿ ಭಾರಿ ಮಳೆ; ಇನ್ನೂ 4 ದಿನ ಮಳೆಯ ಮುನ್ಸೂಚನೆ

ಹೊಸ ನೀತಿಯಿಂದ ಕೆರೆಗಳ ಸಾಮಾನ್ಯ ನಿರ್ವಹಣೆಯ ಜೊತೆಗೆ ಬೆಂಚುಗಳು, ಸಾರ್ವಜನಿಕ ವಿಶ್ರಾಂತಿ ಕೊಠಡಿಗಳು, ನೀರಿನ ಸಂಸ್ಕರಣಾ ಘಟಕಗಳು, ಉದ್ಯಾನವನಗಳು ಮತ್ತಿತರ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಹಣ ಸಂಗ್ರಹಿಸುವ ಬಗ್ಗೆಯೂ ಬಿಬಿಎಂಪಿ ಆಶಾವಾದ ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ