ಬೆಂಗಳೂರು: ಬೆಂಗಳೂರಿನ ಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ರೇವಾ ವಿಶ್ವವಿದ್ಯಾಲಯ (Reva University) ಬೇಡದ ಕಾರಣಗಳಿಗೆ ಸುದ್ದಿಯಲ್ಲಿದೆ ಮಾರಾಯ್ರೇ. ವಿಷಯ ಏನು ಗೊತ್ತಾ? ವಿದ್ಯಾರ್ಥಿಗಳಿಂದ ಭಾರಿ ಮೊತ್ತದ ಫೀಸು ಕಟ್ಟಿಸಿಕೊಳ್ಳುವ ರೇವಾ ಯೂನಿವರ್ಸಿಟಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿ ಬಿ ಎಮ್ ಪಿ) (BBMP) ರೂ. 16 ಕೋಟಿ ತೆರಿಗೆ (tax dues) ಕಟ್ಟುವುದನ್ನು ಬಾಕಿ ಉಳಿಸಿಕೊಂಡಿದೆ. ತೆರಿಗೆ ಬಾಕಿ ಬೇಗ ಚುಕ್ತಾ ಮಾಡುವಂತೆ ಬಿ ಬಿ ಎಮ್ ಪಿ ಪದೇಪದೆ ನೋಟೀಸ್ ಕಳಿಸದರೂ ವಿಶ್ವವಿದ್ಯಾಲಯದ ಅಧಿಕಾರಿಗಳು ಕ್ಯಾರೆ ಅಂದಿಲ್ಲ. ಕೊನೆಗೆ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ಪಾಲಿಕೆ ಸಿಬ್ಬಂದಿ ರೇವಾ ವಿಶ್ವವಿದ್ಯಾಲದ ಮೇನ್ ಗೇಟ್ ಗೆ ಬೀಗ ಜಡಿದಿದ್ದಾರೆ. ಕಳೆದ ವರ್ಷ ತನ್ನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕರು, ಪೋಷಕರು ಅಥಾವಾ ಕುಟುಂಬದ ದುಡಿಯುವ ವ್ಯಕ್ತಿ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದರೆ ಆ ವಿದ್ಯಾರ್ಥಿಗಳ ಶೇಕಡ 100 ರಷ್ಟು ಟ್ಯೂಶನ್ ಫೀಯನ್ನು ಮನ್ನಾ ಮಾಡಿ ಮಾನವೀಯತೆಯನ್ನು ಪ್ರದರ್ಶಿಸಿದ್ದ ರೇವಾ ಯೂನಿವರ್ಸಿಟಿ ಅಷ್ಟು ದೊಡ್ಡ ಮೊತ್ತದ ತೆರಿಗೆ ಪಾವತಿಸದಿರುವುದು ಆಶ್ಚರ್ಯ ಹುಟ್ಟಿಸುತ್ತದೆ.
ಕೋವಿಡ್ ಪೀಡೆಗೆ ಬಲಿಯಾದ ಪೋಷಕರ ಮಕ್ಕಳು (ಹೊಸದಾಗಿ) ಯೂನಿವರ್ಸಿಟಿಯಲ್ಲಿ ಲಭ್ಯವಿರುವ 50 ಕ್ಕೂ ಹೆಚ್ಚು ಕೋರ್ಸ್ಗಳಿಗೆ ಅರ್ಜಿ ಗುಜರಾಯಿಸಿದ್ದರೆ ಅವರಿಂದಲೂ ಟ್ಯೂಶನ್ ಫೀ ತೆಗೆದುಕೊಳ್ಳುವುದಿಲ್ಲ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹೇಳಿತ್ತು. ಇಂಥ ಶ್ಲಾಘನೀಯ ಕೀರ್ತಿ ಹೊಂದಿರುವ ಈ ಶೈಕ್ಷಣಿಕ ಸಂಸ್ಥೆಗೆ ಹಣದ ಕೊರತೆಯಾಗಿದೆಯೇ?
ಇದೇ ಹಿನ್ನೆಲೆಯಲ್ಲಿ ಟಿವಿ9 ಚ್ಯಾನೆಲ್ ನ ಬೆಂಗಳೂರು ವರದಿಗಾರೊಬ್ಬರು ರೇವಾ ವಿಶ್ವವಿದ್ಯಾಯಲದ ಉಪಕುಲಪತಿ ಡಾ ಎಮ್ ಧನಂಜಯ ಅವರನ್ನು ಸಂಪರ್ಕಿಸಿ ಮಾತಾಡಿದರು.
‘ನಾವು ತೆರಿಗೆ ಬಾಕಿ ಉಳಿಸಿಕೊಂಡಿರುವುದು ಸತ್ಯ ಮತ್ತು ಅದನ್ನು ಪಾವತಿ ಮಾಡದಿರಲು ನಾವೇನೂ ಹಟ ತೊಟ್ಟಿಲ್ಲ. ಆದರೆ, ಬಾಕಿಯಿರುವ ಮೊತ್ತದಲ್ಲಿ ಸ್ವಲ್ಪ ರಿಯಾಯಿತಿ ಕೇಳಿದ್ದೆವು. ಆ ಬಗ್ಗೆ ಬಿ ಬಿ ಎಮ್ ಪಿ ಯಿಂದ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದ ನಮಗೆ ಆದರ ಅಧಿಕಾರಿಗಳು ಬಂದು ನಮ್ಮ ಯೂನಿವರ್ಸಿಟಿ ಕ್ಯಾಂಪಸ್ ಗೆ ಬೀಗ ಹಾಕಿ ಹೋಗಿರುವುದು ದಿಗ್ಭ್ರಮೆ ಮತ್ತು ಆಘಾತ ಮೂಡಿಸಿದೆ. ಬಾಕಿಯಿರುವ ತೆರಿಗೆ ಪಾವತಿಸುವುದಿಲ್ಲ ಅಂತ ನಾವು ಯಾವತ್ತೂ ಹೇಳಿಲ್ಲ. ಸ್ವಲ್ಪ ರಿಯಾಯಿತಿ ನೀಡಿ ಅಂತಷ್ಟೇ ನಾವು ಹೇಳಿದ್ದು,’ ಎಂದು ಡಾ ಎಮ್ ಧನಂಜಯ ಹೇಳಿದ್ದಾರೆ.
ಇದನ್ನೂ ಓದಿ: BBMPಗೆ ಆಸ್ತಿ ತೆರಿಗೆ ವಂಚನೆ: ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್ಗೆ ಬೀಗ ಹಾಕಿದ ಬಿಬಿಎಂಪಿ ಅಧಿಕಾರಿಗಳು