BBMP: ಆಸ್ತಿ ತೆರಿಗೆ ಬಾಕಿದಾರರಿಗೆ ಒಟಿಎಸ್ ಜಾರಿ, ಏನಿದು? ಯಾರಿಗೆ ಲಾಭ? ಇಲ್ಲಿದೆ ವಿವರ

| Updated By: Rakesh Nayak Manchi

Updated on: Feb 23, 2024 | 5:45 PM

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಕೊಂಡವರಿಗೆ ಅಥವಾ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿ ಕಡಿಮೆ ತೆರಿಗೆ ಪಾವತಿಸಿದ ಮಾಲೀಕರಿಗೆ ಎರಡು ಪಟ್ಟು ದಂಡ ವಿಧಿಸಲಾಗುತ್ತಿತ್ತು. ಇದೀಗ, ಜಾರಿ ಮಾಡಲಾದ ಒನ್‌ ಟೈಮ್ ಸೆಟ್ಲ್‌ಮೆಂಟ್‌ (OTS) ಮೂಲಕ ಮಾಲೀಕರು ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ಮಾತ್ರ ಪಾವತಿಸಬಹುದು. ಈ ಯೋಜನೆಯು ಸುಮಾರು 15 ಲಕ್ಷ ಜನರಿಗೆ ಅನುಕೂಲವಾಗಲಿದೆ.

BBMP: ಆಸ್ತಿ ತೆರಿಗೆ ಬಾಕಿದಾರರಿಗೆ ಒಟಿಎಸ್ ಜಾರಿ, ಏನಿದು? ಯಾರಿಗೆ ಲಾಭ? ಇಲ್ಲಿದೆ ವಿವರ
BBMP ಆಸ್ತಿ ತೆರಿಗೆ ಬಾಕಿದಾರರಿಗೆ ಒಟಿಎಸ್ ಜಾರಿ, ಏನಿದು? ಯಾರಿಗೆ ಲಾಭ? ಇಲ್ಲಿದೆ ವಿವರ
Follow us on

ಬೆಂಗಳೂರು, ಫೆ.23: ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ (Property Tax) ಬಾಕಿ ಉಳಿಕೊಂಡವರಿಗೆ ಅಥವಾ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿ ಕಡಿಮೆ ತೆರಿಗೆ ಪಾವತಿಸಿದ ಮಾಲೀಕರಿಗೆ ವಿಧಿಸಲಾಗುತ್ತಿದ್ದ ಎರಡು ಪಟ್ಟು ದಂಡದ ಮೊತ್ತವನ್ನು ಶೇ.50ಕ್ಕೆ ಇಳಿಕೆ ಮಾಡಲಾಗಿದ್ದು, ಪಾವತಿಗಾಗಿ ಒನ್​ ಟೈಮ್ ಸೆಟ್ಲ್​ಮೆಂಟ್ (OTS) ಜಾರಿ ಮಾಡಿ​ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇತ್ತೀಚೆಗೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಮೇಲಿನ ದಂಡದ ಪ್ರಮಾಣ ಶೇಕಡ 50 ರಷ್ಟು ಕಡಿತ ಸೇರಿದಂತೆ ತೆರಿಗೆದಾರರ ಸ್ನೇಹಿ ಬಿಬಿಎಂಪಿ (ತಿದ್ದುಪಡಿ) ವಿಧೇಯಕ 2024 (BBMP Amendment Bill 2024) ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಒಟಿಎಸ್ ಜಾರಿ ಮಾಡಿ ಅಧಿಸೂಚನೆ ಹೊರಡಿಸಿದೆ.

ಈ ಯೋಜನೆಯು ತೆರಿಗೆ ಬಾಕಿದಾರರು ಹಾಗೂ ತೆರಿಗೆ ವ್ಯಾಪ್ತಿಗೆ ಒಳಪಡದವರು ಸೇರಿದಂತೆ ಸುಮಾರು 15 ಲಕ್ಷ ಜನರಿಗೆ ಅನುಕೂಲವಾಗಲಿದೆ. ಈ ಹಿಂದೆ, ತಪ್ಪು ಮಾಹಿತಿ ನೀಡಿ ಕಡಿಮೆ ತೆರಿಗೆ ಪಾವತಿಸಿದ ವಸತಿ ಮತ್ತು ವಾಣಿಜ್ಯ ಸೇರಿದಂತೆ ಎಲ್ಲಾ ಮಾದರಿಯ ಆಸ್ತಿ ಮಾಲೀಕರಿಗೆ ಎರಡು ಪಟ್ಟು ದಂಡ ವಿಧಿಸಲಾಗುತ್ತಿತ್ತು. ಇದೀಗ ಈ ದಂಡದ ಮೊತ್ತವನ್ನು ಅರ್ಧದಷ್ಟು ಅಂದರೆ, ಶೇಕಡಾ 50 ರಷ್ಟು ಇಳಿಕೆ ಮಾಡಲಾಗಿದೆ. ಆದರೆ, ಸ್ವಂತಕ್ಕೆ ಬಳಕೆ ಮಾಡುವ 1000 ಚದರ ಅಡಿಗಿಂತ ಕಡಿಮೆ ಇರುವ ಅಥವಾ ಕೇವಲ ನೆಲ ಮಹಡಿ ಹೊಂದಿರುವ, ಆರ್​ಸಿಸಿ ಇಲ್ಲದ ಆಸ್ತಿಗಳಿಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತದಲ್ಲಿ ಶೇಕಡಾ 75 ರಷ್ಟು ಕಡಿತಗೊಳಿಸಲಾಗಿದೆ. ಅಂದರೆ, ಶೇ.25 ರಷ್ಟು ದಂಡದ ಮೊತ್ತವನ್ನು ಪಾವತಿಸಲು ಸೂಚಿಸಲಾಗಿದೆ.

ತೆರಿಗೆ ವಿಳಂಬ ಪಾವತಿಗೆ ಬಡ್ಡಿ ಮನ್ನಾ, ಮಿತಿ

ಆಸ್ತಿ ತೆರಿಗೆಯನ್ನು ವಿಳಂಬವಾಗಿ ಪಾವತಿ ಮಾಡಿದ, ತಪ್ಪು ಮಾಹಿತಿ ನೀಡಿ ತೆರಿಗೆ ಪಾವತಿಸಿದ ಮೇಲಿನ ದಂಡ ಮತ್ತು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದ ಆಸ್ತಿಗೆ ವಿಧಿಸುವ ಬಡ್ಡಿ ಮೊತ್ತವನ್ನು ಮನ್ನಾ ಮಾಡಲಾಗಿದೆ. ಅಲ್ಲದೆ, ಒಂದೇ ಆಸ್ತಿ ಗುರುತಿನ ಸಂಖ್ಯೆಯಲ್ಲಿ ಭಾಗಶಃ ವಸತಿ ಮತ್ತು ಭಾಗಶಃ ವಸತಿಯೇತರ ಉದ್ದೇಶಕ್ಕಾಗಿ ಬಳಸುವ ಆಸ್ತಿಗಳಿಗೆ ಬಾಕಿ ಪಾವತಿ, ಪಾವತಿಸಬೇಕಾದ ಬಡ್ಡಿ ಮತ್ತು ಅದರ ಮೇಲಿನ ಬಡ್ಡಿಯನ್ನು ಗರಿಷ್ಠ ಐದು ವರ್ಷಗಳಿಗೆ ಮಿತಿಗೊಳಿಸಲಾಗಿದೆ. ಈ ಹಿಂದೆ ಇಂತಹ ಪ್ರಕರಣಗಳಿಗೆ ಇಷ್ಟು ವರ್ಷಗಳು ಎಂಬ ಮಿತಿ ಇರಲಿಲ್ಲ. ಬದಲಾಗಿ, ಬಿಬಿಎಂಪಿ ರಚನೆಯಾದಾಗಿನಿಂದ ವಂಚಿಸಿದ ಮೊತ್ತಕ್ಕೆ ಬಡ್ಡಿ ವಿಧಿಸಲಾಗುತ್ತಿತ್ತು.

ಇದನ್ನೂ ಓದಿ: ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕ ಅಂಗೀಕಾರ: ತೆರಿಗೆ ಬಾಕಿ ಮೇಲಿನ ದಂಡ ಶೇ.50ರಷ್ಟು ಇಳಿಕೆ

ನೋಟಿಸ್‌ ನೋಡಿದವರಿಗೆ ಹಾಗೂ ಸಂಪೂರ್ಣವಾಗಿ ಆಸ್ತಿ ತೆರಿಗೆ ಪಾವತಿ ಮಾಡದವರಿಗೆ ಈ ವಿನಾಯಿತಿ ದೊರೆಯಲಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ, ಈ ನಿಯಮ ಉದ್ಯಮಿಗಳಿಗೆ ಹಾಗೂ ಕೈಗಾರಿಕೆಗಳಿಗೆ ಅನ್ವಯ ಆಗುವುದಿಲ್ಲ.

ಯಾರಿಗೆ ದಂಡದ ವಿನಾಯಿತಿ?

ಬಿಬಿಎಂಪಿ ವ್ಯಾಪ್ತಿಗೆ ಬರುವ ಗುಡಿಸಲು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಥವಾ ಬಿಬಿಎಂಪಿ ಕೊಳಗೇರಿ ಎಂದು ಘೋಷಿಸಲಾದ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರಿಗೆ ಅಥವಾ ಸ್ವಂತ ಉಪಯೋಗಕ್ಕೆ ಬಳಕೆ ಮಾಡುತ್ತಿರುವ 300 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣ ಇರುವ ಮನೆಗಳಿಗೆ ದಂಡದ ಮೊತ್ತದಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ಪಾವತಿ ಹೇಗೆ?

ತೆರಿಗೆ ವಂಚನೆ ಅಥವಾ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರು ಲೆಕ್ಕ ಚುಪ್ತಾ ಮಾಡಲು ಒನ್ ಟೈಮ್ ಸೆಟ್ಲ್​ಮೆಂಟ್ ಜಾರಿ ಮಾಡಲಾಗಿದ್ದು, ಪಾವತಿಗೆ ಜುಲೈ 31ರ ಗಡುವು ನೀಡಲಾಗಿದೆ. ಅಲ್ಲದೆ, ಈ ಮೊತ್ತವನ್ನು ಪಾವತಿಸಲು https://bbmptax.karnataka.gov.in ವೆಬ್​ಸೈಟ್​ಗೆ ಭೇಟಿ ನೀಡಿ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಮೌನೀಶ್ ಮೌದ್ಗಿಲ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ