BBMP Budget 2024: ಮಾರ್ಚ್ ಮೊದಲ ವಾರ ಬಿಬಿಎಂಪಿ ಬಜೆಟ್: ನಿರೀಕ್ಷೆಗಳು ಏನೆಲ್ಲ? ಇಲ್ಲಿದೆ ವಿವರ
ಬಿಬಿಎಂಪಿ ಬಜೆಟ್ 2024: ರಾಜ್ಯ ಸರ್ಕಾರವು 2024-25ನೇ ಸಾಲಿನಲ್ಲಿ 6,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ಹೊಂದಿದೆ. ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹಿಸಲು ಬೆಂಗಳೂರಿನ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಆದಾಯವನ್ನು ಹೆಚ್ಚಿಸಲು ಬಿಬಿಎಂಪಿ ಕೂಡ ಯೋಜಿಸುತ್ತಿದೆ. ಈ ಬಾರಿಯ ಬಿಬಿಎಂಪಿ ಬಜೆಟ್‌ನಲ್ಲಿ ಈ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಇದೆ.
ಬೆಂಗಳೂರು, ಫೆಬ್ರವರಿ 20: ರಾಜ್ಯ ಬಜೆಟ್ ಬೆನ್ನಲ್ಲೇ ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಾರ್ಚ್ ಮೊದಲ ವಾರದಲ್ಲಿ ಬಜೆಟ್ (BBMP Budget) ಮಂಡಿಸಲಿದೆ. 6,000 ಕೋಟಿ ತೆರಿಗೆ ಗುರಿಯನ್ನು ಸಾಧಿಸಲು ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಬಗ್ಗೆ ಬಜೆಟ್‌ನಲ್ಲಿ ಗಮನಹರಿಸುವ ಸಾಧ್ಯತೆಯಿದೆ. ಚುನಾಯಿತ ಮಂಡಳಿಯ ಅನುಪಸ್ಥಿತಿಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಮಂಡಿಸುತ್ತಿರುವ ನಾಲ್ಕನೇ ಬಿಬಿಎಂಪಿ ಬಜೆಟ್ ಇದಾಗಲಿದೆ. ಬಿಬಿಎಂಪಿಯ ಆಡಳಿತ ಮಂಡಳಿ ಅವಧಿಯು 2020 ರ ಸೆಪ್ಟೆಂಬರ್ನಲ್ಲಿ ಕೊನೆಗೊಂಡಿತ್ತು. ನಂತರ ವಿವಿಧ ಕಾರಣಗಳಿಂದ ಚುನಾವಣೆಯನ್ನು ಮುಂದೂಡುತ್ತಾ ಬರಲಾಗಿದೆ.
ಬ್ರ್ಯಾಂಡ್ ಬೆಂಗಳೂರಿಗೆ ಹೆಚ್ಚಿನ ಒತ್ತು ನಿರೀಕ್ಷೆ
ಬ್ರ್ಯಾಂಡ್ ಬೆಂಗಳೂರಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ಇದೆ. ಜತೆಗೆ ನಗರದ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ. 70,000 ಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಲಾಗಿದೆ ಮತ್ತು ಅವುಗಳಲ್ಲಿ ಕೆಲವು ಬಜೆಟ್‌ನಲ್ಲಿ ಉಲ್ಲೇಖವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಹೆಬ್ಬಾಳ ಜಂಕ್ಷನ್‌ನಲ್ಲಿ ಪ್ರಾಯೋಗಿಕ ಸುರಂಗ ಮಾರ್ಗವನ್ನು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು ಬಿಬಿಎಂಪಿ ಅದಕ್ಕೆ ಅನುದಾನ ನೀಡುವ ನಿರೀಕ್ಷೆಯಿದೆ.
ನಗರದ ವಿವಿಧ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು 400 ಕೋಟಿ ರೂ.ಗಳನ್ನು ಮೀಸಲಿಡುವ ಸಾಧ್ಯತೆ ಇದೆ. ರಸ್ತೆ ಅಭಿವೃದ್ಧಿಯ ಹೊರತಾಗಿ ಪ್ರವಾಹ ತಡೆಗೆ ಕೈಗೊಂಡಿರುವ ಕ್ರಮಗಳನ್ನು ಬಜೆಟ್‌ನಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಆಸ್ತಿಗಳ ಡಿಜಿಟಲೀಕರಣ
ರಾಜ್ಯ ಸರ್ಕಾರವು 2024-25ರಲ್ಲಿ 6000 ಕೋಟಿ ರೂ. ಹೆಚ್ಚಿನ ತೆರಿಗೆಯನ್ನು ಸಂಗ್ರಹಿಸಲು ಪ್ರಸ್ತಾಪಿಸಿದ ಕ್ರಮಗಳಲ್ಲಿ ಒಂದಾದ ಆಸ್ತಿಗಳ ಡಿಜಿಟಲೀಕರಣವನ್ನು ಬಿಬಿಎಂಪಿ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ಬಿಬಿಎಂಪಿಯು ಸುಸ್ತಿದಾರರಿಂದ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಮುಂದಾಗಬಹುದು.
ಈ ವಿತ್ತೀಯ ವರ್ಷದಲ್ಲಿ ಬಿಬಿಎಂಪಿ ಆದಾಯ 4,790 ಕೋಟಿ ರೂ.ಗಳಾಗಿದ್ದು, ಹಿಂದಿನ ವರ್ಷಕ್ಕಿಂತ 1,000 ಕೋಟಿ ರೂ. ಹೆಚ್ಚಾಗಿದೆ. ಪರಿಷ್ಕೃತ ಜಾಹೀರಾತು ನೀತಿಯ ಮೂಲಕ ಹೆಚ್ಚುವರಿಯಾಗಿ 2,000 ಕೋಟಿ ರೂ. ತೆರಿಗೆಯೇತರ ಆದಾಯವನ್ನು ಕ್ರೋಢೀಕರಿಸಲು ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು.
ಇದನ್ನೂ ಓದಿ: ತಾಂತ್ರಿಕ ದೋಷ, ನೇರಳೆ ಮಾರ್ಗದ ನಮ್ಮ ಮೆಟ್ರೋ ಸಂಚಾರ ವ್ಯತ್ಯಯ, ಪ್ರಯಾಣಿಕರ ಪರದಾಟ
ಕಳೆದ ಶುಕ್ರವಾರವಷ್ಟೇ ಸಿಎಂ ಸಿದ್ದರಾಮಯ್ಯ ಕರ್ನಾಟಕ ಬಜೆಟ್ ಮಂಡನೆ ಮಾಡಿದ್ದು, ಬೆಂಗಳೂರಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡಿದ್ದರು. ಇದೀಗ ಬಿಬಿಎಂಪಿ ಕೂಡ ಮೂಲಸೌಕರ್ಯ ಯೋಜನೆಗಳನ್ನು ಘೋಷಿಸುವ, ಅವುಗಳಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡುವ ನಿರೀಕ್ಷೆ ಇದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ