ಬೆಂಗಳೂರು: ಬೆಂಗಳೂರು ನಿರ್ಮಾತೃ ಕೆಂಪೇಗೌಡರ(Kempe Gowda) 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳಿಸಲು ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ನಗರದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಜೊತೆಗೆ ಬಿಬಿಎಂಪಿಯು ತರಾತುರಿಯಲ್ಲಿ ರಸ್ತೆ ದುರಸ್ತಿಗೆ ಮುಂದಾಗಿದೆ. ಹಲವೆಡೆ ರಸ್ತೆ ಬಂದ್ ಮಾಡಿ ಡಾಂಬರ್ ಹಾಕುವ ಕಾರ್ಯ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಯಾವ ರಸ್ತೆಗೆ ಹೋದ್ರೂ ಗುಂಡಿ ಕಾಣಿಸುತ್ತದೆ. ಯಾವ ದಾರಿಗೆ ಇಳಿದ್ರೂ ಗುಂಡಿ ದರ್ಶನವಾಗುತ್ತೆ. ಬೆಂಗಳೂರಿನ ರೋಡ್ಗಳೆಲ್ಲಾ ಅಧ್ವಾನ ಆಗಿವೆ. ಹೀಗಾಗಿ ಪ್ರಧಾನಿ ಮೋದಿ ಓಡಾಡುವ ಬೆಂಗಳೂರಿನ ರಸ್ತೆಗಳಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿಯು ತರಾತುರಿಯಲ್ಲಿ ರಸ್ತೆ ದುರಸ್ತಿಗೆ ಮುಂದಾಗಿದೆ. ಜೊತೆಗೆ ಬೆಂಗಳೂರಿನ ಎಂಟು ವಲಯಗಳ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ 2,494 ರಸ್ತೆಗುಂಡಿಗಳನ್ನು ನವೆಂಬರ್ 15ರೊಳಗೆ ಮುಚ್ಚಲು ಗಡುವು ನೀಡಿದೆ.
BBMP, ಬೆಂಗಳೂರಿನ ಪ್ರಮುಖ ರಸ್ತೆ ಜಂಕ್ಷನ್ ಬಂದ್ ಮಾಡಿ ದುರಸ್ತಿ ಕಾರ್ಯ ನಡೆಸುತ್ತಿದೆ. ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ಓಕಳಿಪುರಂ, ಆನಂದ್ ರಾವ್ ವೃತ್ತದಲ್ಲಿ ರಸ್ತೆ ದುರಸ್ತಿ ಮಾಡಲಾಗುತ್ತಿದೆ. ರಸ್ತೆ ದುರಸ್ತಿ ಹಿನ್ನೆಲೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ.
ಈ ಹಿಂದೆ ಅಪಹಾಸ್ಯಕ್ಕೆ ಕಾರಣವಾಗಿದ್ದ ಬಿಬಿಎಂಪಿ
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದ ವೇಳೆ 14ಕಿಲೋ ಮೀಟರ್ ರಸ್ತೆಯನ್ನು ಒಟ್ಟು 23ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿ ಮುಚ್ಚಿತ್ತು. ಆದರೆ ಕೆಲವೆಡೆ ಕಳೆಪೆ ಕಾಮಗಾರಿ ಆಗಿದ್ದರಿಂದ ಡಾಂಬರು ಎರಡೇ ದಿನಕ್ಕೆ ಕಿತ್ತು ಬಂದಿತ್ತು. ಇದರಿಂದಾಗಿ ಬೆಂಗಳೂರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬೆನ್ನಲ್ಲೆ ಪ್ರಧಾನಮಂತ್ರಿ ಕಚೇರಿ ರಸ್ತೆ ದುರಸ್ಥಿ ಕಾಮಗಾರಿ ಬಗ್ಗೆ ವರದಿ ಕೇಳಿತ್ತು.
ಎಎಪಿಯಿಂದ ‘ನಮ್ಮಲ್ಲಿಗೂ ಬನ್ನಿ ಮೋದಿ’ ಅಭಿಯಾನ
ಶಾಸಕರು ನಿರಂತರವಾಗಿ ಕೆಲಸ ಮಾಡಬೇಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು ವಾರಕ್ಕೊಮ್ಮೆ ಬೆಂಗಳೂರಿಗೆ ಬರುತ್ತಿರಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಆಗಮನ ಹಿನ್ನೆಲೆ ರಸ್ತೆ ದುರಸ್ತೆ ಕಾರ್ಯ ನಡೆಸಿದ್ದರಿಂದ ಎಎಪಿಯು ‘ನಮ್ಮಲ್ಲಿಗೂ ಬನ್ನಿ ಮೋದಿ’ ಅಭಿಯಾನ ಎಂಬ ಅಭಿಯಾನ ಆರಂಭಿಸಿದೆ.
ಸದಾ ಗೊರಕೆ ಹೊಡೆಯುವ ಇಲ್ಲಿನ ಬಿಜೆಪಿ ಶಾಸಕರು ರಸ್ತೆಗುಂಡಿ ಮುಚ್ಚಿಸುತ್ತಾರೆ. ಸುಣ್ಣಬಣ್ಣ ಹೊಡೆಯುತ್ತಾರೆ. ನನ್ನ ಒಂದೇ ಮನವಿ ಮೋದಿಯವರೇ, ನೀವು ಆಗಾಗ ವಾರಕ್ಕೊಮ್ಮೆ ಬರುತ್ತಿರಿ. ನಿಮ್ಮ ಶಾಸಕರು ಆಗಲಾದರೂ ಕೆಲಸ ಮಾಡುತ್ತಾರೋ ನೋಡೋಣ ಎಂದು ವ್ಯಂಗ್ಯವಾಡಿದ್ದಾರೆ.
Published On - 10:55 am, Thu, 10 November 22