ಬೆಂಗಳೂರಿನ ಉತ್ತರಕ್ಕಿರುವ ಯಲಹಂಕ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿವೆ. ಕೃಷಿ ಭೂಮಿ ಹಾಗೂ ಹಸಿರುವ ವಲಯಗಳಲ್ಲಿಯೂ ಕಟ್ಟಡಗಳು ನಿರ್ಮಾಣಗೊಂಡಿವೆ. ಹಿಂದೂಪುರ ಮತ್ತು ಹೈದರಾಬಾದ್ಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಯಲಹಂಕದಲ್ಲಿ ಸಂಧಿಸುತ್ತವೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಆದರೆ ಒಂದು ಸಣ್ಣ ಮಳೆ ಬಂದರೂ ರಸ್ತೆಯ ಮೇಲೆ ನೀರು ಹರಿಯುವುದು, ಬಡಾವಣೆಗಳಿಗೆ ನೀರು ನುಗ್ಗುವುದು ಸಾಮಾನ್ಯ ಸಂಗತಿ ಎನಿಸಿದೆ. ಅಂಥ ಸಂದರ್ಭದಲ್ಲಿ ಮಾತ್ರ ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಕಣ್ಣೊರೆಸುವ ಮಾತನಾಡುತ್ತಿದ್ದರು.
ಯಲಹಂಕ ವಲಯದ ಯಲಹಂಕ, ಜಕ್ಕೂರು, ಅಲ್ಲಾಳಸಂದ್ರ, ಕೋಗಿಲು, ಅಟ್ಟೂರು, ಸಿಂಗಾಪುರ, ದೊಡ್ಡಬೊಮ್ಮಸಂದ್ರ, ಹೆಬ್ಬಾಳ, ನವನಗರ, ರಾಚೇನಹಳ್ಳಿ ಸೇರಿದಂತೆ ಸುಮಾರು 30 ಕೆರೆಗಳು ಒತ್ತುವರಿಯಾಗಿವೆ. ರಾಜಕಾಲುವೆಗಳು ಸಂಪೂರ್ಣ ಮಾಯವಾಗಿವೆ. ರಿಯಲ್ ಎಸ್ಟೇಟ್ ಕುಳಗಳೊಂದಿಗೆ ರಾಜಕಾರಿಣಿಗಳು ಶಾಮೀಲಾಗಿ ಕೆರೆ ನುಂಗಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಇದೀಗ ಬಿಬಿಎಂಪಿ ಯಲಹಂಕ ವಲಯದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲು ಮುಂದಾಗಿರುವುದು ಜನರಲ್ಲಿ ಹೊಸ ಭರವಸೆ ಮೂಡಿಸಿದೆ.