ಬೆಂಗಳೂರು, ಫೆಬ್ರವರಿ 6: ರಾಜಧಾನಿ ಬೆಂಗಳೂರಿನ ರಸ್ತೆಗಳನ್ನು ಸ್ವಚ್ಛಗೊಳಿಸಲು ಹೊಸದೊಂದು ಯೋಜನೆಗೆ ಮುಂದಾಗಿರುವ ಬಿಬಿಎಂಪಿ, ‘ಕ್ಲೀನ್ ಸಿಟಿ’ ಹೆಸರಲ್ಲಿ ಕೋಟ್ಯಂತರ ರೂಪಾಯಿ ಹಣ ಖರ್ಚುಮಾಡಿ ಸ್ವೀಪಿಂಗ್ ಮಷಿನ್ಗಳನ್ನು (ಕಸಗುಡಿಸುವ ಯಂತ್ರಗಳು) ಬಳಸಿಕೊಳ್ಳಲು ಮುಂದಾಗಿದೆ. ಮುಂದಿನ ಏಳು ವರ್ಷಗಳಲ್ಲಿ ರಾಜಧಾನಿಯನ್ನು ಧೂಳುಮುಕ್ತ ನಗರ ಮಾಡುವ ಉದ್ದೇಶದೊಂದಿಗೆ 764 ಕೋಟಿ ರೂಪಾಯಿ ವೆಚ್ಚದಲ್ಲಿ 20 ಸ್ವೀಪಿಂಗ್ ಮಷಿನ್ಗಳನ್ನು ಆಮದು ಮಾಡಿಕೊಳ್ಳಲು ಯೋಜನೆ ರೂಪಿಸುತ್ತಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.
2024-25ರ ಬಜೆಟ್‌ನಲ್ಲಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿಯಲ್ಲಿ ಕಸ ಗುಡಿಸುವ ಯಂತ್ರಗಳಿಗಾಗಿ 30 ಕೋಟಿ ರೂಪಾಯಿ ಹಣ ಮೀಸಲಿಡಲಾಗಿದೆ. ಮುಂದಿನ ವರ್ಷಗಳಲ್ಲಿ ಈ ಹಣದ ಪ್ರಮಾಣ 30 ರಿಂದ 60 ಕೋಟಿ ರೂಪಾಯಿಗಳಷ್ಟು ಅಧಿಕವಾಗಲಿದೆ ಅಂತಾ ಅಂದಾಜಿಸಲಾಗಿದೆ.
ಸದ್ಯ 2017-18ನೇ ಸಾಲಿನಲ್ಲಿ 26 ಯಂತ್ರಗಳನ್ನು ಖರೀದಿಸಿದ್ದ ಪಾಲಿಕೆ, ಇದೀಗ ವಿದೇಶಿ ಯಂತ್ರಗಳನ್ನು ಬಾಡಿಗೆಗೆ ಪಡೆಯಲು ಹೊರಟಿದೆ. ಇದಕ್ಕೆ ನಗರವಾಸಿಗಳ ವಿರೋಧವೂ ವ್ಯಕ್ತವಾಗಿದೆ. ಈಗಾಗಲೇ ಇರುವ ಕಸ ಗುಡಿಸುವ ಯಂತ್ರಗಳನ್ನು ಸಮರ್ಪಕವಾಗಿ ಬಳಸುವಲ್ಲಿ ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿರುವ ಸಾರ್ವಜನಿಕರು, ಇದು ಹಣ ದೋಚುವ ತಂತ್ರವಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಟಿಕೆಟ್ ರೋಲ್ ಕದ್ದು ತರಕಾರಿ ಅಂಗಡಿಗೆ ಮಾರಿರುವ ಕಿಲಾಡಿಗಳು: ತರಕಾರಿ ಬಿಲ್ ನೀಡಲು ಬಳಕೆ!
ಸದ್ಯ ರಸ್ತೆಗಳ ಕಸ ಗುಡಿಸಲು ಬಿಬಿಎಂಪಿಯಲ್ಲಿ 17,000 ಪೌರಕಾರ್ಮಿಕರಿದ್ದಾರೆ. ಆದರೆ, ಇದೀಗ ವಿದೇಶಿ ಯಂತ್ರಗಳನ್ನು ಬಾಡಿಗೆಗೆ ಪಡೆಯುವುದರಿಂದ ನಗರವು ಎಷ್ಟರ ಮಟ್ಟಿಗೆ ಸ್ವಚ್ಛವಾಗಿರಲಿದೆ ಎಂಬುದನ್ನು ಪಾಲಿಕೆ ಪ್ರಯೋಗ ನಡೆಸಬೇಕಿದೆ. ಆದರೆ ಫಾರಿನ್ ಮಷಿನ್ಗಳು ರಾಜಧಾನಿಯ ರಸ್ತೆಗಳಿಗೆ ಹೊಂದುಕೊಳ್ಳುತ್ತದೆಯೋ ಇಲ್ಲವೇ ಎಂಬುದನ್ನು ಪರಾಮರ್ಶೆ ಮಾಡದೇ ಕೋಟಿ ಕೋಟಿ ಹಣ ಸುರಿಯಲು ಪಾಲಿಕೆ ಸಜ್ಜಾಗಿರುವುದಂತೂ ನಿಜ. ಬಿಬಿಎಂಪಿಯ ಈ ಹೊಸ ಪ್ಲಾನ್ ರಾಜಧಾನಿಯನ್ನು ಎಷ್ಟರಮಟ್ಟಿಗೆ ಸ್ವಚ್ಛ ನಗರವಾಗಿ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ