ಬೆಂಗಳೂರು, ಜುಲೈ 26: ಪಂಚೆ ಹಾಕಿ ಬಂದಿದ್ದರು ಎಂಬ ಕಾರಣಕ್ಕೆ ರೈತನಿಗೆ ಅವಮಾನಿಸಿದ್ದ ಜಿಟಿ ಮಾಲ್ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಪಂಚೆ ಧರಿಸಿದ್ದ ವ್ಯಕ್ತಿಯನ್ನ ಒಳಗೆ ಬಿಡಲು ನಿರಾಕರಿಸಿದ್ದಕ್ಕಾಗಿ ಮಾಲ್ ಮಾಲೀಕರು ರೈತರ ಬಳಿ ಕ್ಷಮೆ ಕೂಡ ಕೇಳಿದ್ದರು. ಇದೀಗ ಈ ಘಟನೆ ಬಳಿಕ ಎಚ್ಚೆತ್ತ ಪಾಲಿಕೆ, ಬೆಂಗಳೂರಿನ ಮಾಲ್ಗಳಿಗೆ ಹೊಸ ನಿಯಮ ರೂಪಿಸಲು ಹೊರಟಿದೆ. ಡಿಸಿಎಂ ಡಿಕೆ ಶಿವಕುಮಾರ್ ಸೂಚನೆಯಂತೆ ಒಂದಷ್ಟು ನಿಯಮಗಳನ್ನ ರೆಡಿಮಾಡುತ್ತಿರುವ ಬಿಬಿಎಂಪಿ, ಇನ್ಮುಂದೆ ಮಾಲ್ಗಳಲ್ಲಿ ಬಟ್ಟೆ, ಜಾತಿ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಿದರೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಸದ್ಯ ಬೆಂಗಳೂರಿನ ಬಹುತೇಕ ಮಾಲ್ಗಳಲ್ಲಿ ಉಡುಗೆ-ತೊಡುಗೆ ನೋಡಿ ಸಿಬ್ಬಂದಿ ವರ್ತನೆ ಬದಲಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿದ್ದವು. ಜೊತೆಗೆ ಜಿಟಿ ಮಾಲ್ನಲ್ಲಿ ನಡೆದ ಘಟನೆ ಮಾಲ್ಗಳ ಸಂಸ್ಕೃತಿಯನ್ನು ಅನಾವರಣ ಮಾಡಿತ್ತು. ಇದೆಲ್ಲದರಿಂದ ಅಲರ್ಟ್ ಆದ ಪಾಲಿಕೆ, ಈಗ ಹೊಸ ನಿಯಮ ರೂಪಿಸಲು ಹೊರಟಿದೆ. ಇನ್ಮುಂದೆ ತಾರತಮ್ಯ ಮಾಡಿದರೆ ಆ ಮಾಲ್ಗಳಲ್ಲಿರುವ ಎಲ್ಲಾ ಅಂಗಡಿಗಳ ಟ್ರೇಡ್ ಲೈಸೆನ್ಸ್ ರದ್ದು ಮಾಡಲು ಸಜ್ಜಾಗಿರುವ ಪಾಲಿಕೆ, ಶೀಘ್ರದಲ್ಲೇ ಆದೇಶ ಹೊರಡಿಸಲು ತಯಾರಿ ನಡೆಸಿದೆ.
ಮಾಲ್ಗಳಿಗೆ ಹೊಸ ನಿಯಮ ರೂಪಿಸುವ ಬಗ್ಗೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಮಾಹಿತಿ ನೀಡಿದ್ದಾರೆ.
ಸದ್ಯ ಪಾಲಿಕೆ ಜಾರಿಗೆ ತರಲು ಹೊರಟಿರುವ ನಿಯಮಾವಳಿಗಳಲ್ಲಿ ಯಾವುದೇ ವ್ಯಕ್ತಿಯ ಮಾಲ್ ಪ್ರವೇಶಕ್ಕೆ ಅವಕಾಶ ಕೊಡಬೇಕು, ಕಾಲ ಕಾಲಕ್ಕೆ ಆಸ್ತಿ ತೆರಿಗೆ ಪಾವತಿಸಬೇಕು. ಜೊತೆಗೆ ಯಾರೇ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರಬಾರದು ಎಂಬ ವಿಚಾರಗಳನ್ನು ಅಳವಡಿಸಲಾಗುತ್ತಿದೆ. ಈ ನಿಯಮ ಮೀರಿದರೆ ಅಂತಹ ಮಾಲ್ಗಳ ವ್ಯಾಪಾರ-ವಹಿವಾಟಿಗೆ ಬ್ರೇಕ್ ಹಾಕಿ ಬಿಸಿ ಮುಟ್ಟಿಸಲು ಯೋಜನೆ ರೂಪಿಸಲಾಗುತ್ತಿದೆ.
ಇದನ್ನೂ ಓದಿ: ಪಂಚೆ ಪ್ರಕರಣದ ಬೆನ್ನಲ್ಲೇ ಮಾಲ್, ಪಬ್, ಶಾಪಿಂಗ್ ಕಾಂಪ್ಲೆಕ್ಸ್ಗಳಿಗೆ ಕಠಿಣ ನಿಯಮ ರೂಪಿಸಲು ಸಿದ್ಧತೆ
ಒಟ್ಟಿನಲ್ಲಿ ಆಧುನಿಕತೆ, ಶ್ರೀಮಂತಿಕೆ ಹೆಸರಲ್ಲಿ ಮಾಲ್ಗಳಿಗೆ ಬರುವ ಗ್ರಾಹಕರಲ್ಲಿ ತಾರತಮ್ಯ ಮಾಡುವ ಕೆಲ ಮಾಲ್ಗಳಿಗೆ, ಚಾಟಿ ಬೀಸಲು ಪಾಲಿಕೆ ಹೊರಟಿದೆ. ಸದ್ಯ ರಾಜಧಾನಿಯ ಮಾಲ್ಗಳು ಪಾಲಿಕೆಯ ಸೂಚನೆಯನ್ನು ಎಷ್ಟರಮಟ್ಟಿಗೆ ಪಾಲಿಸುತ್ತವೆ ಎಂಬುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ