ಬೆಂಗಳೂರು, ಆಗಸ್ಟ್ 19: ಕರ್ನಾಟಕ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಾರ್ಡ್‌ಗಳ ಸಂಖ್ಯೆಯನ್ನು 243 ರಿಂದ 225 ಕ್ಕೆ ಇಳಿಸಿದ ಕೆಲವು ದಿನಗಳ ನಂತರ, ನಗರಾಭಿವೃದ್ಧಿ ಇಲಾಖೆ (Urban Development Department / UDD) ಈ ವಾರ್ಡ್‌ಗಳ ಕರಡು ವಿಂಗಡಣೆ ಬಗ್ಗೆ ಅಧಿಸೂಚನೆ ಸೂಚಿಸಿದೆ. ಶುಕ್ರವಾರ ರಾತ್ರಿ ಇಲಾಖೆಯು ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, 15 ದಿನಗಳಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸಾರ್ವಜನಿಕರನ್ನು ಕೋರಿದೆ. 2011 ರ ಜನಗಣತಿ ಆಧಾರದ ಮೇಲೆ ಎಲ್ಲಾ 225 ವಾರ್ಡ್‌ಗಳ ಗಡಿಯನ್ನು ನಿಗದಿಪಡಿಸಲಾಗಿದೆ.
ಆಕ್ಷೇಪಣೆಗಳನ್ನು ಅಂಚೆ ಮೂಲಕ ಮಾತ್ರ ಸ್ವೀಕರಿಸಲಾಗುವುದು ಎಂದು ವಿಕಾಸ ಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬರೆದ ಲಕೋಟೆಯಲ್ಲಿ ಇಲಾಖೆ ತಿಳಿಸಿದೆ.
ಹಿಂದಿನ ಆವೃತ್ತಿಯಲ್ಲಿ ಲೋಪದೋಷಗಳಿವೆ ಎಂದು ಕಾಂಗ್ರೆಸ್ ನೇತೃತ್ವದ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದ ನಂತರ ಹೊಸದಾಗಿ ವಾರ್ಡ್ ಪುನರ್ ವಿಂಗಡಣೆ ಕಸರತ್ತು ನಡೆಸಲಾಯಿತು. ಜೂನ್ 19 ರಂದು ನ್ಯಾಯಾಲಯವು ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ 12 ವಾರಗಳ ಕಾಲಾವಕಾಶವನ್ನು ನೀಡಿತು. ಆ ನಂತರದ ಬೆಳವಣಿಗೆಯಲ್ಲಿ ಕರ್ನಾಟಕ ಸರ್ಕಾರವು ಆಗಸ್ಟ್ 5 ರ ಆದೇಶದಲ್ಲಿ ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು 243 ರಿಂದ 225 ಕ್ಕೆ ಇಳಿಸಿದೆ.
ಇದನ್ನೂ ಓದಿ: ಬೆಂಗಳೂರು: ಉದ್ಯಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ; ತಪ್ಪಿದ ಭಾರಿ ದುರಂತ
ವಾರ್ಡ್ ಪುನರ್ ವಿಂಗಡಣೆ ಕಸರತ್ತು ಪೂರ್ಣಗೊಂಡ ಬಳಿಕ ವಾರ್ಡ್ ಮೀಸಲು ಪ್ರಕಟವಾಗಲಿದ್ದು, ಬಿಬಿಎಂಪಿ ಚುನಾವಣೆಗೆ ನಾಂದಿ ಹಾಡಲಿದೆ.
ಹಿಂದಿನ ಬಿಜೆಪಿ ಸರ್ಕಾರದ ವಿಂಗಡಣೆಗೆ ಹಲವಾರು ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಹೈಕೋರ್ಟ್ ವಾರ್ಡ್ ಮೀಸಲಾತಿಯನ್ನು ಪುನರ್ ವಿಂಗಡಣೆ ಮಾಡಲು ಸರ್ಕಾರಕ್ಕೆ ಆದೇಶ ನೀಡಿತ್ತು. ಈ ಮಧ್ಯೆ, ಈ ವರ್ಷ ಡಿಸೆಂಬರ್‌ನಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ