ಬೆಂಗಳೂರು: ಪ್ರತಿವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು (World Environment Day) ಆಚರಿಸಲಾಗುತ್ತದೆ. ಈ ವರ್ಷದ ಪರಿಸರ ದಿನದ ಥೀಮ್ “ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು”. ಪ್ಲಾಸ್ಟಿಕ್ ಕಡಿಮೆ ಬಳಕೆ ಮಾಡುವಂತೆ ಉತ್ತೇಜಿಸುವ ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮೇ 20 ರಿಂದ ಜೂನ್ 5 ರವರೆಗೆ ಆರ್.ಆರ್.ಆರ್ (Reduce, Reuse, Recycle) ಡ್ರೈವ್ ಅನ್ನು ನಡೆಸಿತು. ಈ ವೇಳೆ ಒಟ್ಟು 533 ಕೆಜಿ ಪ್ಲಾಸ್ಟಿಕ್, 3,273 ಪುಸ್ತಕಗಳು, 1,910 ಕೆಜಿ ಬಟ್ಟೆ, ಮತ್ತು ನಗರದ 49 ಕೇಂದ್ರಗಳಿಂದ 468 ಜೋಡಿ ಪಾದರಕ್ಷೆಗಳನ್ನು ಸಂಗ್ರಹಿಸಲಾಗಿದೆ.
ಹಸಿರು ದಳ, ಅನುಭೂತಿ ವೆಲ್ಫೇರ್ ಫೌಂಡೇಶನ್, ಸಮರ್ಥನಂ ಸೇರಿದಂತೆ ಏಳು ಸಂಪನ್ಮೂಲ ಸಂಸ್ಥೆಗಳ ಸಹಯೋಗದಲ್ಲಿ ಚಾಲನೆ ನೀಡಲಾಯಿತು. ಉತ್ತಮ ಸ್ಥಿತಿಯಲ್ಲಿರುವ ವಸ್ತುಗಳನ್ನು ಮರುಬಳಕೆ ಅಥವಾ ಮಾರಾಟ ಮಾಡಿದರೆ, ಇತರವುಗಳನ್ನು ಮರುಬಳಕೆಗಾಗಿ ಕಳುಹಿಸಲಾಗಿದೆ ಎಂದು ಹಸಿರು ದಳದ ಡಿಡಬ್ಲ್ಯೂಸಿಸಿ ವ್ಯವಸ್ಥಾಪಕ ಮತ್ತು ಸಂಯೋಜಕ ಚಿನ್ನಯ್ಯ ತಿಳಿಸಿದರು.
ಚೆನ್ನಾಗಿರುವ ಪುಸ್ತಕಗಳನ್ನು ಬನಶಂಕರಿಯಲ್ಲಿರುವ ಹಸಿರು ದಳದ ಸಂಸ್ಥೆ ನಿರ್ವಹಿಸುವ ಗ್ರಂಥಾಲಯಕ್ಕೆ ತೆಗೆದುಕೊಂಡು ಹೋಗಲಾಗಿದೆ. ಹರಿದ ಪುಸ್ತಕಗಳನ್ನು ಮರುಬಳಕೆಗೆ ಕಳುಹಿಸಲಾಗಿದೆ. ಉಪಯೋಗಿಸಬಹುದಾದ ಬಟ್ಟೆಗಳನ್ನು ಸೆಕೆಂಡ್ ಹ್ಯಾಂಡ್ ಸ್ಟೋರ್‌ಗಳಿಗೆ ನೀಡಲಾಯಿತು. ಅದೇ ರೀತಿ ಸಂಗ್ರಹಿಸಿದ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಇ-ತ್ಯಾಜ್ಯ ಮಾರಾಟಗಾರರಿಗೆ ನೀಡಲಾಯಿತು ಎಂದು ಹೇಳಿದರು.
ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ರಾಷ್ಟ್ರವ್ಯಾಪಿ ಸ್ವಚ್ಛತಾ ಕಾರ್ಯಕ್ರಮವನ್ನು ಜಾರಿಗೆ ತರಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಿರ್ದೇಶನದೊಂದಿಗೆ “ಮೈ ಲೈಫ್, ಮೈ ಕ್ಲೀನ್ ಸಿಟಿ” ಅಭಿಯಾನದ ಭಾಗವಾಗಿ ಬಿಬಿಎಂಪಿ ಈ ಕಾರ್ಯಕ್ರಮವನ್ನು ಪರಿಚಯಿಸಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಮತ್ತು ಸುಸ್ಥಿರ, ತ್ಯಾಜ್ಯ-ಮುಕ್ತ ಜೀವನಶೈಲಿಯನ್ನು ಉತ್ತೇಜಿಸಲು ಈ ಉಪಕ್ರಮವು ಗುರಿಯನ್ನು ಹೊಂದಿದೆ.
ನಾಗರಿಕರು, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ವೃತ್ತಿಪರರನ್ನು ಆರು ವರ್ಗಗಳಾಗಿ ವಿಂಗಡಿಸಲಾಗಿದೆ. ಇವರು ಈ ಅಭಿಯಾನದಲ್ಲಿ ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ