ಬೆಂಗಳೂರು: ಕಳೆದ ಹಲವು ತಿಂಗಳುಗಳಿಂದ ಬರೀ ಕೋಳಿ ಮಾಂಸ ತಿಂದು ಬೇಜಾರಾಗಿದ್ದ ಮೃಗಗಳಿಗೆ ಈಗ ಬೀಫ್ ಭಾಗ್ಯ ಒಲಿದು ಬಂದಿದೆ. ಕೋಳಿ ಮಾಂಸ ಬಿಟ್ಟು ಬೀಫ್ ಸವಿಯುತ್ತಿರುವ ಹುಲಿ ಸಿಂಹಗಳ ಚಲವಲನದಲ್ಲಿ ಅನೇಕ ಬದಲಾವಣೆಗಳು ಕಂಡು ಬಂದಿವೆ. ಮತ್ತೆ ಮೊದಲಿನಂತೆ ಮೃಗಗಳು ಹುಮ್ಮಸ್ಸಿನಿಂದ ಜೀವನ ನಡೆಸುತ್ತಿವೆ. ರಾಜ್ಯದಲ್ಲಿ ಗೋ ಮಸೂದೆ ಜಾರಿಯಾದ ಬಳಿಕ ಬನ್ನೇರುಘಟ್ಟ ಸೇರಿದಂತೆ ರಾಜ್ಯದ ಎಲ್ಲಾ ಝೂ ಹಾಗೂ ಉದ್ಯಾನವನದ ಮೃಗಗಳಿಗೆ ದನದ ಮಾಂಸ ಕೊಡುವುದನ್ನು ನಿಲ್ಲಿಸಲಾಗಿತ್ತು. ಈಗ ಕಳೆದೆರಡು ವಾರಗಳಿಂದ ಮಾಂಸಹಾರಿ ಪ್ರಾಣಿಗಳಿಗೆ ಎಮ್ಮೆ ಮಾಂಸ ಒದಗಿಸಲಾಗುತ್ತಿದೆ.
ಸರಕಾರದ ಆದೇಶದಂತೆ ಗೋವುಗಳನ್ನು ಹೊರತು ಪಡಿಸಿ ಕೇವಲ ಎಮ್ಮೆಯ ಮಾಂಸಕ್ಕಾಗಿ ಟೆಂಡರ್ ಕೊಡಲಾಗಿದೆ. ಆಹಾರ ಬದಲಾವಣೆಯಾದ ನಂತರ ಮಾಂಸಹಾರಿ ಪ್ರಾಣಿಗಳಲ್ಲಿ ಹಲವಾರು ಬದಲಾವಣೆಗಳು ಬಂದಿದೆ. ಮೊದಲು ಉದ್ಯಾನವನದ ಮೂಲೆ ಮೂಲೆ ತಿರುಗಾಡಿ, ತುಂಟಾಟ ಮಾಡುತ್ತಾ ಜಿಗಿಯುತ್ತಿದ್ದ ಹುಲಿ ಸಿಂಹಗಳು, ಕೋಳಿ ಮಾಂಸದ ಸೇವನೆಯಿಂದ ಸ್ವಲ್ಪ ಡಲ್ ಆಗುವುದಕ್ಕೆ ಪ್ರಾರಂಭಿಸಿದ್ದವು ಎಂದು ಕಾರ್ಯನಿರ್ವಾಹಕ ನಿರ್ದೇಶಕರಾದ ವನಶ್ರಿ ವಿಪಿನ್ ಸಿಂಗ್ ಹೇಳಿದ್ದಾರೆ.
ಈ ನಡುವೆ ಹುಲಿ ಹಾಗೂ ಸಿಂಹಗಳ ಕುತ್ತಿಗೆ ಹಾಗೂ ಎದೆ ಭಾಗದಲ್ಲಿ ಬೊಜ್ಜು ಬರಲು ಶುರುವಾಗಿತ್ತು. ಇದನ್ನು ಗಮನಿಸಿದ ಪಶು ವೈದ್ಯರು ಕೂಡಲೇ ಪ್ರಾಣಿಗಳ ಆಹಾರ ಬದಲಾವಣೆ ಮಾಡುವಂತೆ ಪ್ರಸ್ತಾಪ ಮಾಡಿದರು. ಈ ಹಿನ್ನೆಲೆ ಸರಕಾರವೂ ಮೃಗಗಳಿಗೆ ಎಮ್ಮೆ ಮಾಂಸ ನೀಡಲು ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಅದರನ್ವಯ ಈಗ ಬನ್ನೇರುಘಟ್ಟ ಸಿಬ್ಬಂದಿ ಪ್ರಾಣಿಗಳಿಗೆ ಎಮ್ಮೆ ಮಾಂಸ ಒದಗಿಸುತ್ತಿದ್ದಾರೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರಾದ ವನಶ್ರಿ ವಿಪಿನ್ ಸಿಂಗ್ ತಿಳಿಸಿದ್ದಾರೆ.
ನೈಸರ್ಗಿಕವಾಗಿ ಪ್ರಾಣಿಗಳು ಯಾವುದನ್ನು ಆಹಾರ ಕ್ರಮವಾಗಿ ನೆಚ್ಚಿಕೊಂಡಿರುತ್ತವೆಯೋ ಅದನ್ನೇ ನೀಡಬೇಕು ಎನ್ನುವುದು ನೈಸರ್ಗಿಕ ಕಾನೂನು. ಕಾಡಿನಲ್ಲಿ ಸ್ವತಂತ್ರವಾಗಿ ಜೀವನ ನಡೆಸುವ ಪ್ರಾಣಿಗಳನ್ನು ಜನರಿಗಾಗಿ ಒಂದು ಕಡೆ ಕೂಡಿ ಹಾಕಿರುವುದು ಪರಿಸರವಾದಿಗಳಿಗೆ ತಪ್ಪು ಎಂದು ಕಾಣಿಸುತ್ತದೆ. ಹೀಗಿರುವಾಗ ಮೃಗಗಳಿಗೆ ಅವಲಂಬಿತ ಆಹಾರವನ್ನು ನೀಡದೇ ಇರುವುದು ಯಾವ ನ್ಯಾಯ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದೇಳುತ್ತದೆ. ಸದ್ಯ ತಮಗಿಷ್ಟವಾದ ಆಹಾರ ದೊರಕಿದ ನಂತರ ಮಾಂಸಹಾರಿ ಪ್ರಾಣಿಗಳು ತುಂಬಾ ಖುಷಿಯಾಗಿವೆ. ಹೀಗಾಗಿ ಉದ್ಯಾನವನದ ತುಂಬಾ ಹೆಚ್ಚು ಹುಮ್ಮಸ್ಸಿನಿಂದ ಓಡಾಡಿಕೊಂಡಿವೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರಾದ ವನಶ್ರಿ ವಿಪಿನ್ ಸಿಂಗ್ ಮಾಹಿತಿ ನೀಡಿದ್ದಾರೆ.
ವರದಿ: ಸೈಯ್ಯದ್ ನಿಜಾಮುದ್ದೀನ್
ಇದನ್ನೂ ಓದಿ:
Viral Video: ಒಂದು ಜಿಂಕೆಗಾಗಿ 6 ಸಿಂಹಗಳ ಕಿತ್ತಾಟ; ಭಯಾನಕ ವಿಡಿಯೋ ವೈರಲ್
ಬನ್ನೇರುಘಟ್ಟ ಸಫಾರಿಯಲ್ಲಿ ಟಯೋಟಾ ವಾಹನವನ್ನ ಎಳೆದಾಡಿದ ಬೆಂಗಾಲ್ Tiger
Published On - 12:05 pm, Sun, 29 August 21