ನಮ್ಮ ಮೆಟ್ರೋ ಹೆಸರು ಬದಲಾವಣೆ: ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಜೋರು, ಬೆಂಗಳೂರಿಗರಿಗೆ ಭಾವನಾತ್ಮಕ ವಿಷಯ ಎಂದ ನೆಟ್ಟಿಗರು

| Updated By: Digi Tech Desk

Updated on: Oct 30, 2023 | 2:18 PM

Namma Metro: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿನಂತೆ ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರನ್ನು ಮರುನಾಮಕರಣ ಮಾಡುವ ಬಗ್ಗೆ ಸಲಹೆಗಳು ಬಂದಿವೆ ಎಂದು ಸಚಿವ ಎಂ.ಬಿ.ಪಾಟೀಲ್ ಅವರು ಪ್ರಸ್ತಾಪಿಸಿದರು. ಇದಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ.

ನಮ್ಮ ಮೆಟ್ರೋ ಹೆಸರು ಬದಲಾವಣೆ: ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಜೋರು, ಬೆಂಗಳೂರಿಗರಿಗೆ ಭಾವನಾತ್ಮಕ ವಿಷಯ ಎಂದ ನೆಟ್ಟಿಗರು
ನಮ್ಮ ಮೆಟ್ರೋ
Follow us on

ಬೆಂಗಳೂರು, ಅ.30: ಸಿಲಿಕಾನ್ ಸಿಟಿಯ ಲಕ್ಷಾಂತರ ಮಂದಿಗೆ ಅನುಕೂಲವಾಗಿರುವ ನಮ್ಮ ಮೆಟ್ರೋ (Namma Metro) ಸಂಪೂರ್ಣ ಜಾಲಕ್ಕೆ 12ನೇ ಶತಮಾನದ ಬಸವೇಶ್ವರರ ಹೆಸರನ್ನು ನಾಮಕರಣ ಮಾಡುವ ಪ್ರಸ್ತಾವನೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಮ್ಮ ಮೆಟ್ರೋ ಕೇವಲ ಹೆಸರಲ್ಲ. ಅದು ಬೆಂಗಳೂರಿನ (Bengaluru) ಜನರಿಗೆ ಭಾವನಾತ್ಮಕ ವಿಷಯ. ಇಂತಹ ವಿಷಯಗಳ ಜತೆ ಆಟವಾಡುವುದನ್ನು ಬಿಟ್ಟುಬಿಡಿ. ಹೆಸರು ಬದಲಾವಣೆ ಮಾಡುವ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ತಲೆ ಕೆಡಿಸಿಕೊಳ್ಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿನಂತೆ ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರನ್ನು ಮರುನಾಮಕರಣ ಮಾಡುವ ಬಗ್ಗೆ ಸಲಹೆಗಳು ಬಂದಿವೆ ಎಂದು ಸಚಿವ ಎಂ.ಬಿ.ಪಾಟೀಲ್ ಅವರು ಪ್ರಸ್ತಾಪಿಸಿದರು. ಇದಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ.

ನಮ್ಮ ಮೆಟ್ರೋ ಎಂಬ ಹೆಸರು ಒಂದು ಐಕಾನಿಕ್ ಆಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರ ಹೃದಯಕ್ಕೆ ಈ ಹೆಸರು ಬೆಸೆದುಕೊಂಡಿದೆ. ಇದು ಪ್ರಯಾಣಿಕರ ದೈನಂದಿನ ಜೀವನದಲ್ಲಿ ಆಳವಾಗಿ ಬೇರೂರಿದೆ. ಡಾ. ಭಾಸ್ಕರ್ ರಾಜಕುಮಾರ್ ಮತ್ತು ಆಶಿಶ್ ಜಿ ಎಂಬುವವರು “ನಮ್ಮ ಮೆಟ್ರೋ” ಬ್ರ್ಯಾಂಡ್‌ನೊಂದಿಗೆ ಬೆಂಗಳೂರಿಗರು ಹೊಂದಿರುವ ಬಲವಾದ ಭಾವನಾತ್ಮಕ ಸಂಪರ್ಕವನ್ನು ಒತ್ತಿ ಹೇಳಿದ್ದಾರೆ. ಮತ್ತು ಮೆಟ್ರೋ ಸೇವೆಯನ್ನು ವಿಸ್ತರಿಸುವ ಹಾಗೂ ಮೂಲ ಸೌಕರ್ಯದ ಬಗ್ಗೆ ಗಮನ ಹರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಪೀಕ್ ಅವರ್ ನಲ್ಲಿ ಮೆಟ್ರೋ ನಿಲ್ದಾಣ ತಲುಪಲು ಪ್ರಯಾಣಿಕರು ಹರಸಾಹಸಪಡುತ್ತಿದ್ದಾರೆ. ಹೊಸ ಮೆಟ್ರೋ ಮಾರ್ಗಗಳನ್ನು ಆದಷ್ಟು ಬೇಗ ಆರಂಭಿಸಿ. ಇಂತಹ ವಿಷಯಗಳಿಗಾಗಿ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Namma Metro: ನಮ್ಮ ಮೆಟ್ರೋಗೆ ಬಸವೇಶ್ವರ ಮೆಟ್ರೋ ಅಂತ ಹೆಸರಿಡಲು‌ ಸಿಎಂ ಬಳಿ‌ ಚರ್ಚಿಸಿ ತೀರ್ಮಾನ; ಎಂಬಿ ಪಾಟೀಲ್​​

ಮೆಟ್ರೋ ನಿಲ್ದಾಣಗಳಿಗೆ ಗಣ್ಯರ ಹೆಸರು

ಹಲವಾರು ಮೆಟ್ರೋ ನಿಲ್ದಾಣಗಳಿಗೆ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಹೆಸರಾಂತ ವ್ಯಕ್ತಿಗಳ ಹೆಸರನ್ನು ಇಡಲಾಗಿದೆ. ಮೆಜೆಸ್ಟಿಕ್ ನಿಲ್ದಾಣಕ್ಕೆ ಕೆಂಪೇಗೌಡ ಹೆಸರು, ಹೊಸಹಳ್ಳಿ ನಿಲ್ದಾಣಕ್ಕೆ ಬಾಲಗಂಗಾಧರ ಸ್ವಾಮೀಜಿ ಹೆಸರು, ವಿಧಾನಸೌಧ ಸ್ಟೇಷನ್ ಗೆ ಅಂಬೇಡ್ಕರ್ ಹೆಸರು, ಸೆಂಟ್ರಲ್ ಕಾಲೇಜು ನಿಲ್ದಾಣಕ್ಕೆ ವಿಶ್ವೇಶ್ವರಯ್ಯ ಹೆಸರು ಇಡಲಾಗಿದೆ.

ಅಲ್ಲದೆ ಬಿಎಂಆರ್ ಸಿಎಲ್ ಮೆಟ್ರೋ ನಿಲ್ದಾಣಗಳ ಅಭಿವೃದ್ಧಿಗಾಗಿ ಖಾಸಗಿ ಕಂಪನಿಗಳ ಸಹಕಾರವನ್ನು ಬಯಸಿದ್ದು ಅದಕ್ಕಾಗಿ ಆಯಾ ಕಂಪನಿಗಳ ಹೆಸರನ್ನು ನಿಲ್ದಾಣಕ್ಕೆ ನಾಮಕರಣ ಮಾಡಲಾಗುತ್ತಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪ ಇನ್ಫೋಸಿಸ್ ಫೌಂಡೇಶನ್ ನಿರ್ಮಿಸಿರುವ ಮೆಟ್ರೋ ನಿಲ್ದಾಣಕ್ಕೆ ಇನ್ಫೋಸಿಸ್ ಫೌಂಡೇಶನ್ ಫೌಂಡೇಶನ್ ಕೋನಪ್ಪನ ಅಗ್ರಹಾರ ಸ್ಟೇಷನ್ ಎಂದು ಹೆಸರಿಡಲಾಗಿದೆ.

ಇನ್ನು ಪ್ರಮುಖ ವ್ಯಕ್ತಿಗಳ ಹೆಸರನ್ನು ಸ್ಟೇಷನ್‌ಗಳಿಗೆ ಇಡಲು ಆಗಾಗ ಹಲವು ಮನವಿಗಳು ಬರುತ್ತವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೆಟ್ರೋ ನಿಲ್ದಾಣಗಳಿಗೆ ಸಾಮಾನ್ಯವಾಗಿ ಸುಲಭವಾಗಿ ಗುರುತಿಸಲು ಸಮೀಪದ ಸ್ಥಳಗಳ ಹೆಸರನ್ನು ನಾಮಕರಣ ಮಾಡಲಾಗುತ್ತದೆ. ನಮ್ಮ ಮೆಟ್ರೋವನ್ನು ಮರುನಾಮಕರಣ ಮಾಡುವುದಕ್ಕೆ ಸಂಬಂಧಿಸಿದಂತೆ, ಯಾವುದೇ ಅಧಿಕೃತ ಪ್ರಸ್ತಾವನೆ ಇಲ್ಲ ಮತ್ತು ಯಾವುದೇ ಬದಲಾವಣೆಗೆ ಕೇಂದ್ರ ಸರ್ಕಾರದ ಅನುಮತಿ ಬೇಕು ಎಂದು ಅಧಿಕಾರಿ ತಿಳಿಸಿದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:48 pm, Mon, 30 October 23