
ಬೆಂಗಳೂರು, ಸೆಪ್ಟೆಂಬರ್ 26: ನಗರದ ತಾಜ್ ವೆಸ್ಟೆಂಡ್ ಹೋಟೆಲ್‌ಗೆ ಅಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಂಧಿತ 41 ಕರವೇ (Karnataka rakshana vedike) ಕಾರ್ಯಕರ್ತರಿಗೆ 14 ದಿನ ನ್ಯಾಯಾಂಗ ಬಂಧನ (arrest) ವಿಧಿಸಲಾಗಿದೆ. ಕಾರ್ಯಕರ್ತರ ಬಂಧನಕ್ಕೆ ಕರವೇ ಅಧ್ಯಕ್ಷ ನಾರಾಯಣಗೌಡ ಖಂಡಿಸಿದ್ದು, ರಾಜ್ಯದ ರಾಜಕಾರಣಿಗಳ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಕೇಂದ್ರ ಸಂಸದೀಯ ರಾಜಭಾಷಾ ಸಮಿತಿ ನಗರದ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಕಳೆದ ಮೂರು ದಿನಗಳಿಂದ ಕಾರ್ಯಕ್ರಮ ನಡೆದಿತ್ತು. ಇದು ಹಿಂದಿ ಹೇರಿಕೆಯ ಕಾರ್ಯಕ್ರಮ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಕಾರ್ಯಕರ್ತರು ಹೋಟೆಲ್‌ಗೆ ನುಗ್ಗಿ ಪ್ರತಿಭಟಿಸಿದ್ದರು. ಈ ವೇಳೆ 41 ಕರವೇ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಈ ವಿಚಾರವಾಗಿ ನಗರದಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿಕೆ ನೀಡಿದ್ದು, 41 ಜನ ಜೈಲಿಗೆ ಹೋಗಿದ್ದಾರೆ ಆ ಕುಟುಂಬದ ಸದಸ್ಯರು ಭಯಪಡಬೇಕಿಲ್ಲ. ಸರ್ಕಾರದ ಹಣ ಲೂಟಿ ಮಾಡುವ ರಾಜಕಾರಣಿಗಳಿಗೇ ಭಯವಿಲ್ಲ. ನಮ್ಮ ಭಾಷೆ, ನಾಡಿಗಾಗಿ ಜೈಲಿಗೆ ಹೋದವರು ಅಂಜಬಾರದು ಎಂದಿದ್ದಾರೆ.
ಇದನ್ನೂ ಓದಿ: ಹಿಂದಿ ಹೇರಿಕೆ ವಿರೋಧಿಸಿ ಉತ್ತರ ಭಾರತದ ಸಂಸದರಿದ್ದ ಬೆಂಗಳೂರಿನ ಹೋಟೆಲ್‌ಗೆ ಕರವೇ ಮುತ್ತಿಗೆ
ಹಿಂದಿ ಹೇರಿಕೆ ಸಂಬಂಧ ಹೋಟೆಲ್ನಲ್ಲಿ 6 ಸಂಸದರು ಸಭೆ ನಡೆಸಿದ್ದಾರೆ. ವಿಷಯ ತಿಳಿದು ತಾಜ್ ವೆಸ್ಟೆಂಡ್ ಹೋಟೆಲ್ ಮೇಲೆ ಕರವೇ ಮುತ್ತಿಗೆ ಹಾಕಿದೆ. ಗೃಹ ಸಚಿವರು ಅಮಿತ್ ಶಾ ಇಲ್ಲಿನವರಿಗೆ ಕರೆ ಮಾಡಿ ವಿಷಯ ತಿಳಿಸ್ತಾರೆ. ಇಲ್ಲಿನ ರಾಜಕಾರಣಿಗಳು, ಡಿಜಿಗೆ ಫೋನ್ ಮಾಡಿ ವಿಷಯ ತಿಳಿಸ್ತಾರೆ. ಹಲ್ಲೆ ಮಾಡಿದ್ರು, ವಸ್ತು ಧ್ವಂಸ ಮಾಡಿದ್ರು ಅಂತ ಸುಳ್ಳು ಕೇಸ್ ಹಾಕಿದರು. ಹೋರಾಟ ಸರಿ ಇದೆ ಅಂತ ಹೇಳಬೇಕಾದ ಸಿಎಂ ಮೌನವಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ನೀವು ನೂರು ಕೇಸ್ ಹಾಕಿದರು ಕನ್ನಡ ಹೋರಾಟಗಾರರು ಅಂಜುವುದಿಲ್ಲ. ಅರೆಸ್ಟ್ ಆಗಿರೋ 41 ಜನರ ಪೈಕಿ 13 ಮಹಿಳೆಯರೂ ಕೂಡಾ ಇದ್ದಾರೆ. 6 ತಿಂಗಳ ಮಗು ಬಿಟ್ಟು ಬಂದು ಹೋರಾಟಕ್ಕೆ ಬಂದವರು ಅರೆಸ್ಟ್ ಆಗಿದ್ದಾರೆ. ಕರ್ನಾಟಕದ ರಾಜಕಾರಣಿಗಳು ರಣಹೇಡಿಗಳ ರೀತಿ ಕುಳಿತುಕೊಂಡಿದ್ದೀರಿ. ತಮಿಳುನಾಡಿನಲ್ಲಿ ಭೇದಭಾವ ಮರೆತು ಮಾತೃಭಾಷೆಯ ಪರ ನಿಲ್ಲುತ್ತಾರೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.
ಹಲವು ರಾಜ್ಯಗಳಲ್ಲಿ ಬಲವಂತದ ಹಿಂದಿ ಹೇರಿಕೆಯನ್ನು ಖಂಡಿಸಲಾಗುತ್ತಿದೆ. ಹಿಂದಿ ಹೇರಿಕೆ ಖಂಡಿಸಿ ಕೋಲ್ಕತ್ತಾದಲ್ಲಿ ದೊಡ್ಡ ರ್ಯಾಲಿ ನಡೆಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ 26 ವರ್ಷಗಳಿಂದ ಹೋರಾಟ ಮಾಡುತ್ತಿದೆ. ಒಳಸಂಚುಗಳ ಮೂಲಕ ಹಿಂದಿ ಹೇರಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಹೇಗೆ ಹಿಂದಿ ಹೇರಿಕೆ ಮಾಡಬೇಕು, ಅದಕ್ಕಾಗಿ ಹೇಗೆ ಕೆಲಸ ಮಾಡ್ಬೇಕು ಅಂತ ಹೋಟೆಲ್ನಲ್ಲಿ 6 ಸಂಸದರು ಸಭೆ ಮಾಡಿದ್ದಾರೆ.
ಇದನ್ನೂ ಓದಿ: ‘ಹಿಂದಿ ಈಸ್ ಎ ಅಫಿಷಿಯಲ್ ಲಾಂಗ್ವೇಜ್’: ಬೆಂಗಳೂರು ಹೋಟೆಲ್ನಲ್ಲಿ ಡಿಜಿಟಲ್ ಬೋರ್ಡ್, ವಿಡಿಯೋ ವೈರಲ್
ಕೇಂದ್ರ ಸರ್ಕಾರದ ಅಧಿಕಾರಿಗಳ ಮೂಲಕ ಹಿಂದಿ ಹೇರಿಕೆ ಬಗ್ಗೆ ಚರ್ಚೆ ಮಾಡಿರುವುದಾಗಿ ನಮಗೆ ಕೇಂದ್ರ ಸರ್ಕಾರ ಕಚೇರಿ ಅಧಿಕಾರಿಗಳಿಂದ ಮಾಹಿತಿ ಬಂತು. ಹಿಂದಿ ಭಾಷಾ ನೀತಿ ಪರಿಷತ್ ಹೆಸರಲ್ಲಿ ವಿಚಾರ ಸಂಕೀರ್ಣ ನಡೆಯುತ್ತಿತ್ತು. ಈ ಕಾರ್ಯಕ್ರಮದ ಬಗ್ಗೆ ಪೊಲೀಸರು, ಮಾಧ್ಯಮದವರಿಗೆ ಮಾಹಿತಿ ಇಲ್ಲ. ಹೀಗಾಗಿ ನಮ್ಮ ಮೇಲೆ ಹಿಂದಿ ಹೇರಿಕೆ ಆಗುತ್ತಿದೆ ಎಂದಾಗ ಪ್ರತಿಭಟಿಸಬೇಕು. ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡಿ ಏನು ಮಾಡಲು ಹೊರಟಿದ್ದೀರಿ, ನಮ್ಮ ತೆರಿಗೆ ಹಣವನ್ನ ಹಿಂದಿ ಭಾಷೆ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ. ಇದಕ್ಕೆ ನಾವ್ಯಾಕೆ ತೆರಿಗೆ ಕಟ್ಟಬೇಕು ಎಂದು ಪ್ರಶ್ನೆ ನಮಗೆ ಬರುತ್ತದೆ. ಭಾರತದ ಒಳಗೆ ಕನ್ನಡಿಗರ ಪಾತ್ರ ಏನು ಎಂಬ ಪ್ರಶ್ನೆ ಬರುತ್ತೆ. ಅದೇ ರೀತಿ ತಮಿಳು, ತೆಲುಗಿನ ಪಾತ್ರ ಏನು ಎಂಬ ಪ್ರಶ್ನೆ ಬರುತ್ತೆ ಎಂದಿದ್ದಾರೆ.
ವರದಿ: ವಿಕಾಸ್ ಟಿವಿ9
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.