
ಬೆಂಗಳೂರು, ಅಕ್ಟೋಬರ್ 21: ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಸೋಮವಾರ (ಅ.19) ರಾತ್ರಿ ವಕೀಲರೊಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ದೇಶಿ ನಿರ್ಮಿತ ಪಿಸ್ತೂಲ್ ಬಳಕೆಯಾಗಿರುವುದು ನಗರದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಸರಬರಾಜು ಜಾಲದ ಕುರಿತು ಆತಂಕವನ್ನು ಮೂಡಿಸಿದೆ. ಈ ಘಟನೆಯ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸರು ಅಕ್ರಮ ಅಸ್ತ್ರಗಳ ಪೂರೈಕೆ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಕರ್ನಾಟಕದಲ್ಲಿ 1959ರ ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ಸಂಖ್ಯೆ 2025ರಲ್ಲಿ ಶೇ 46ರಷ್ಟು ಹೆಚ್ಚಾಗಿದೆ. 2023ರಲ್ಲಿ 294 ಮತ್ತು 2024ರಲ್ಲಿ 280 ಪ್ರಕರಣಗಳು ದಾಖಲಾಗಿದ್ದರೆ, 2025ರಲ್ಲಿ ಈ ಸಂಖ್ಯೆ 409ಕ್ಕೆ ಏರಿಕೆಯಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿಯ ಮಾಡಿದೆ.
ಅಕ್ರಮ ಶಸ್ತ್ರಾಸ್ತ್ರಗಳ ವ್ಯಾಪಾರದಲ್ಲಿ ತೊಡಗಿರುವವರನ್ನು ಪತ್ತೆ ಹಚ್ಚಲು ಪರಿಶೀಲನೆ ಹಾಗೂ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಹೆಚ್ಚಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಬಾಡಿಗೆದಾರರ ಪರಿಶೀಲನೆಯನ್ನು ತೀವ್ರಗೊಳಿಸಲಾಗುವುದು ಹಾಗೂ ಅಕ್ರಮ ಅಸ್ತ್ರಗಳ ಮೂಲವನ್ನು ಪತ್ತೆಹಚ್ಚಿ ಅವುಗಳ ಸರಬರಾಜು ಜಾಲವನ್ನು ಧ್ವಂಸಗೊಳಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ ಬೆಂಗಳೂರು: ವೈಟ್ಫೀಲ್ಡ್ನಲ್ಲಿ ತಡರಾತ್ರಿ ವಕೀಲನ ಕೊಲೆ! ಮನೆಗೆ ನುಗ್ಗಿ ಹಣೆಗೆ ಗುಂಡಿಟ್ಟು ಹತ್ಯೆ
ವೃತ್ತಿಯಲ್ಲಿ ವಕೀಲರಾಗಿದ್ದ ಮಂಜುನಾಥ್, ಕೋಟಿಗಟ್ಟಲೆ ಮೌಲ್ಯದ ಆಸ್ತಿ ಹಾಗೂ ವೈಟ್ಫೀಲ್ಡ್ ಭಾಗದಲ್ಲಿ ಹತ್ತಾರು ಎಕರೆ ಜಮೀನು ಹೊಂದಿದ್ದರು. ತಮ್ಮ ಜಮೀನಿನಲ್ಲಿದ್ದ ಶೆಡ್ಗಳನ್ನು ಅವರು ಬಾಡಿಗೆಗೆ ನೀಡಿದ್ದರು ಎಂದು ಹೇಳಲಾಗಿದೆ. ಕೊಲೆಗೂ ಒಂದು ಗಂಟೆ ಮುಂಚೆ ಶೆಡ್ಗಳ ಬಾಡಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಹಾಗೂ ಬಾಡಿಗೆದಾರರ ನಡುವೆ ತೀವ್ರ ಗಲಾಟೆ ನಡೆದಿತ್ತು. ಈ ಗಲಾಟೆಯ ಬೆನ್ನಲ್ಲೇ ತಡರಾತ್ರಿ 11:30 ರ ಸುಮಾರಿಗೆ ಇಬ್ಬರು ಯುವಕರು ಮಂಜುನಾಥ್ ಅವರ ಮನೆ ಬಳಿ ಬಂದಿದ್ದಾರೆ. ಮನೆ ಬಾಗಿಲು ಬಡಿದು ಮಂಜುನಾಥ್ ಅವರನ್ನು ಹೊರಗೆ ಕರೆದಿದ್ದಾರೆ. ಮಂಜುನಾಥ್ ಬಾಗಿಲು ತೆರೆಯುತ್ತಿದ್ದಂತೆ, ದುಷ್ಕರ್ಮಿಗಳು ಏಕಾಏಕಿ ಅವರ ಹಣೆಗೆ ನೇರವಾಗಿ ಒಂದು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಂಜುನಾಥ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ