Kannada News Karnataka Bengaluru Bengaluru after being overcharged by 40 paise Bangalore man sues restaurant and fined Rs 4000 by court
Bengaluru: 40 ಪೈಸೆ ಹೆಚ್ಚು ಬಿಲ್ ನೀಡಿದ್ದನ್ನು ಪ್ರಶ್ನಿಸಿದ್ದಕ್ಕೆ 4,000 ರೂ. ದಂಡ ತೆತ್ತ ಬೆಂಗಳೂರಿನ ಗ್ರಾಹಕ!
ಮೂರ್ತಿ ಎಂಬ ಹಿರಿಯ ನಾಗರಿಕರೊಬ್ಬರು ಕಳೆದ ವರ್ಷ ಮೇ ತಿಂಗಳಲ್ಲಿ ಬೆಂಗಳೂರಿನ ಸೆಂಟ್ರಲ್ ಸ್ಟ್ರೀಟ್‌ನಲ್ಲಿರುವ ಹೋಟೆಲ್ ಎಂಪೈರ್‌ಗೆ ಭೇಟಿ ನೀಡಿದ್ದರು. ಆ ರೆಸ್ಟೋರೆಂಟ್ ಸಿಬ್ಬಂದಿ 265 ರೂ. ಬಿಲ್ ಕೊಟ್ಟಿದ್ದರು. ಆದರೆ, ಊಟದ ಬಿಲ್ ಒಟ್ಟು 264.60 ರೂ. ಆಗಿತ್ತು.
ಬೆಂಗಳೂರು: ಬೆಂಗಳೂರಿನ ರೆಸ್ಟೋರೆಂಟ್ ಒಂದು ತನ್ನ ಗ್ರಾಹಕರೊಬ್ಬರಿಗೆ 40 ಪೈಸೆ ಹೆಚ್ಚು ಶುಲ್ಕ ವಿಧಿಸಿದ್ದಕ್ಕಾಗಿ ಆ ಗ್ರಾಹಕ ಮೊಕದ್ದಮೆ ಹೂಡಿದ್ದರು. ಆದರೆ, ಆ ಗ್ರಾಹಕನ ಪ್ಲಾನ್ ಉಲ್ಟಾ ಹೊಡೆದಿದ್ದು, ಗ್ರಾಹಕ ನ್ಯಾಯಾಲಯವು 50 ಪೈಸೆಗಿಂತ ಹೆಚ್ಚಿನ ಮೊತ್ತವನ್ನು ಒಂದು ರೂಪಾಯಿ ಎಂದು ಪರಿಗಣಿಸಬಹುದು ಎಂದು ತೀರ್ಪು ನೀಡಿದೆ. ಅಲ್ಲದೆ, ಹೋಟೆಲ್ ಬಿಲ್ಗಿಂತ 40 ಪೈಸೆ ಎಚ್ಚು ಹಣ ಪಡೆದಿದ್ದಕ್ಕಾಗಿ ಮೊಕದ್ದಮೆ ಹೂಡುವ ಮೂಲಕ ಪ್ರಚಾರಕ್ಕಾಗಿ ನ್ಯಾಯಾಲಯ ಹಾಗೂ ರೆಸ್ಟೋರೆಂಟ್ನ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಆ ಗ್ರಾಹಕನನ್ನು ಖಂಡಿಸಿದ ನ್ಯಾಯಾಲಯವು ಆ ಗ್ರಾಹಕನೇ ರೆಸ್ಟೋರೆಂಟ್‌ಗೆ 4,000 ರೂ. ಪರಿಹಾರ ಧನ ನೀಡಬೇಕೆಂದು ತೀರ್ಪು ನೀಡಿದೆ. ಈ ಮೂಲಕ 40 ಪೈಸೆ ಉಳಿಸಲು ಕೋರ್ಟ್ ಮೊರೆ ಹೋಗಿದ್ದ ಗ್ರಾಹಕ ಇದೀಗ 4,000 ರೂ. ದಂಡ ತೆರಬೇಕಾದ ಅನಿವಾರ್ಯತೆ ಎದುರಾಗಿದೆ.
ಏನಿದು ಘಟನೆ?:
ಮೂರ್ತಿ ಎಂಬ ಹಿರಿಯ ನಾಗರಿಕರೊಬ್ಬರು ಕಳೆದ ವರ್ಷ ಮೇ ತಿಂಗಳಲ್ಲಿ ಬೆಂಗಳೂರಿನ ಸೆಂಟ್ರಲ್ ಸ್ಟ್ರೀಟ್‌ನಲ್ಲಿರುವ ಹೋಟೆಲ್ ಎಂಪೈರ್‌ಗೆ ಭೇಟಿ ನೀಡಿದ್ದರು. ಆ ರೆಸ್ಟೋರೆಂಟ್ನಲ್ಲಿ ಆಹಾರವನ್ನು ಪಾರ್ಸಲ್ಗೆ ಆರ್ಡರ್ ಮಾಡಿದ್ದರು. ಆ ರೆಸ್ಟೋರೆಂಟ್ ಸಿಬ್ಬಂದಿ 265 ರೂ. ಬಿಲ್ ಕೊಟ್ಟಿದ್ದರು. ಆದರೆ, ಊಟದ ಬಿಲ್ ಒಟ್ಟು 264.60 ರೂ. ಆಗಿತ್ತು. ರೆಸ್ಟೋರೆಂಟ್ ಸಿಬ್ಬಂದಿ 264.60 ರೂ. ಬದಲಾಗಿ 265 ರೂ. ಬಿಲ್ ಮಾಡಿರುವುದನ್ನು ಖಂಡಿಸಿದ ಮೂರ್ತಿ ವಿನಾಕಾರಣ ತಮ್ಮಿಂದ 40 ಪೈಸೆ ಹೆಚ್ಚುವರಿ ವಸೂಲಿ ಮಾಡಲಾಗುತ್ತಿದೆ ಎಂದು ಗಲಾಟೆ ಮಾಡಿದ್ದರು.
ರೆಸ್ಟೋರೆಂಟ್ ಸಿಬ್ಬಂದಿ ಮೂರ್ತಿ ಅವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಅವರ ಉತ್ತರದಿಂದ ತೃಪ್ತರಾಗದ ಮೂರ್ತಿ ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸಲು ನಿರ್ಧರಿಸಿದ್ದರು. ಈ ಘಟನೆಯು ನನಗೆ ಮಾನಸಿಕ ಆಘಾತ ಮತ್ತು ಸಂಕಟವನ್ನು ಉಂಟು ಮಾಡಿದೆ ಎಂದು ಮೂರ್ತಿ ರೆಸ್ಟೋರೆಂಟ್‌ನಿಂದ ಪರಿಹಾರವಾಗಿ 1 ರೂ. ಹಣವನ್ನು ಕೇಳಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆ ಗ್ರಾಹಕ ಖರೀದಿಸಿದ ಆಹಾರಕ್ಕಾಗಿ ಅಲ್ಲ, ಬಿಲ್‌ನಲ್ಲಿ ಹೆಚ್ಚುವರಿ 40 ಪೈಸೆಯನ್ನು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ 2017ರ ಸೆಕ್ಷನ್ 170ರ ಅಡಿಯಲ್ಲಿ ತೆರಿಗೆಯಾಗಿ ವಿಧಿಸಿದ್ದಾರೆ ಎಂದು ರೆಸ್ಟೋರೆಂಟ್ ಅನ್ನು ಪ್ರತಿನಿಧಿಸುವ ವಕೀಲರು ವಾದಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ 50 ಪೈಸೆಯವರೆಗಿನ ಹಿಂತೆಗೆದುಕೊಳ್ಳುವಿಕೆ ಮತ್ತು 50 ಪೈಸೆಗಿಂತ ಕಡಿಮೆಯಿರುವ ಯಾವುದೇ ಮೊತ್ತವನ್ನು ನಿರ್ಲಕ್ಷಿಸಬೇಕೆಂದು ಮತ್ತು 50 ಪೈಸೆಗಿಂತ ಹೆಚ್ಚಿನ ಮೊತ್ತವನ್ನು ಹತ್ತಿರದ ರೂಪಾಯಿಗೆ ರೌಂಡ್ ಫಿಗರ್ ಮಾಡುವಂತೆ ಈಗಾಗಲೇ ಭಾರತ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ. ಅದರ ಅನುಸಾರ ರೆಸ್ಟೋರೆಂಟ್ 40 ಪೈಸೆ ಹೆಚ್ಚು ಹಣವನ್ನು ವಸೂಲಿ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದೆ.
ದೂರುದಾರರು ವೈಯಕ್ತಿಕ ಪ್ರಚಾರಕ್ಕಾಗಿ ಈ ಪ್ರಕರಣವನ್ನು ಬಳಸಿಕೊಂಡಿರುವುದರಿಂದ ಮತ್ತು ನ್ಯಾಯಾಲಯ, ರೆಸ್ಟೋರೆಂಟ್ ಮತ್ತು ಅದರ ಪ್ರತಿನಿಧಿಗಳ ಸಮಯವನ್ನು ವ್ಯರ್ಥ ಮಾಡಿರುವುದರಿಂದ ಅವರಿಗೆ ರೆಸ್ಟೋರೆಂಟ್‌ನಿಂದ ಯಾವುದೇ ಪರಿಹಾರ ಧನ ಸಿಗುವುದಿಲ್ಲ. ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಮೂರ್ತಿಯವರೇ ರೆಸ್ಟೋರೆಂಟ್‌ಗೆ 2,000 ರೂ. ಪರಿಹಾರ ಹಣ ಮತ್ತು ಕೋರ್ಟ್ನ ವೆಚ್ಚಕ್ಕೆ 2,000 ರೂ. ಸೇರಿದಂತೆ ಒಟ್ಟು 4,000 ರೂ. ನೀಡಬೇಕೆಂದು ಕೋರ್ಟ್ ತೀರ್ಪು ನೀಡಿದೆ.