ಬೆಂಗಳೂರು, ಅಕ್ಟೋಬರ್ 3: ಬೆಂಗಳೂರಿನ ಒಂದು ಶೆಡ್ನಲ್ಲಿ ಸಿನಿಮಾ ರೀತಿಯಲ್ಲಿ, ವಿಲನ್ನಂತೆ ಗುಂಡು ಹಾರಿಸಿದವನು ಈಗ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ನಿಲ್ಲುವಂತಾಗಿದೆ! ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಪುಂಡಾಟ ಮೆರೆದ ಕಾರಣ ಸೈಯದ್ ಅಲ್ತಫ್ ಅಹಮದ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಶಸ್ತ್ರಾಸ್ತ್ರಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ನಡೆದಿರುವುದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಒಂದು ಶೆಡ್ನಲ್ಲಿ.
ಸೆಪ್ಟೆಂಬರ್ 22 ರ ರಾತ್ರಿ 8.30 ರ ಸಮಯ. ಬನ್ನೇರುಘಟ್ಟ ರಸ್ತೆಯಲ್ಲಿರುವ ಒಂದು ಶೆಡ್ನಲ್ಲಿ ಮೊಯಿನ್ ಖಾನ್ ಎಂಬಾತನ ಹುಟ್ಟುಹಬ್ಬ ಆಚರಿಸಲಾಗಿತ್ತು. ಸಾಕಷ್ಟು ಗೆಳೆಯರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಕೇಕ್ ಕತ್ತರಿಸಿ ಪಟಾಕಿ ಹೊಡೆದು ಸಂಭ್ರಮಿಸಿದ್ದರು. ಇದೇ ಸಂಭ್ರಮಾಚಣೆ ಜೋಶ್ನಲ್ಲಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸೈಯದ್ ಅಲ್ತಫ್ ಮೊಹಮದ್, ತನ್ನ ಬಳಿ ಇದ್ದ ಲೈಸನ್ಸ್ ಪಿಸ್ತೂಲ್ ತೆಗೆದು ಆರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿಬಿಟ್ಟಿದ್ದ.
ಏರ್ ಫೈರ್ ದೃಶ್ಯ ವಿಡಿಯೋ ಮಾಡಿಕೊಂಡಿದ್ದು, ಬಿಲ್ಡಪ್ ಸಾಂಗ್ ಮಿಕ್ಸ್ ಮಾಡಿ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದ. ಜುಬೇರ್ ಖಾನ್ ಲಿಮ್ರಾ ಎಂಬಾತನ ಇನ್ಸ್ಟಾಗ್ರಾಂ ಅಕೌಂಟ್ನ ಸ್ಟೋರಿಯಲ್ಲಿ ಇದನ್ನ ಅಪ್ಲೋಡ್ ಮಾಡಲಾಗಿತ್ತು. ಇದನ್ನು ಗಮನಿಸಿದ್ದ ನಗರ ಪೊಲೀಸ್ ಸೋಷಿಯಲ್ ಮೀಡಿಯಾ ವಿಂಗ್ ಅಪಾರಧ ವಿಭಾಗ ಡಿಸಿಪಿ 2 ಆದ ಶ್ರೀನಿವಾಸ್ ಗೌಡ ಗಮನಕ್ಕೆ ತಂದಿದ್ದರು. ತಕ್ಷಣ ಅಲರ್ಟ್ ಆದ ಸಿಸಿಬಿ ತಂಡ, ಆರೋಪಿ ಅಲ್ತಫ್ ನನ್ನ ಬಂಧಿಸಿ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಆರೋಪಿ ಅಲ್ತಫ್ ಬಳಿ ಇದ್ದುದು ಪರವಾನಗಿ ಹೊಂದಿರುವ ಪಿಸ್ತೂಲ್ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಸದ್ಯ ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಪ್ರಕರಣವನ್ನು ಬನ್ನೇರುಘಟ್ಟ ಪೊಲೀಸರಿಗೆ ವರ್ಗಾಯಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೀತ್ಸೇ ಪ್ರೀತ್ಸೇ ಎಂದು ಯುವಕನ ಬಲಿ ಪಡೆದ ಕನ್ನಡ ಸೀರಿಯಲ್ ನಟಿ
ಪರವಾನಗಿ ಇದ್ದರೂ ಅಜಾಗರೂಕತೆ ಹಾಗೂ ಸಂಭ್ರಮಾಚರಣೆಯಲ್ಲಿ ಮೈ ಮರೆತು ಗುಂಡು ಹಾರಿಸುವುದು ಕೂಡ ಅಪರಾಧ. ಅದರ ಅರಿವೇ ಇಲ್ಲದ ಆಸಾಮಿ ತಪ್ಪು ಮಾಡಿ ಜೈಲು ಸೇರಿದ್ದಾನೆ. ಇದೇ ರೀತಿ ಹುಚ್ಚಾಟ ಮೆರೆಯುವವರಿಗೆ ಈ ಪ್ರಕರಣ ಒಂದು ಪಾಠವಾಗಿದೆ. ತಾವೇನೇ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಬಿಲ್ಡಪ್ ತಗೊಳ್ಳುತ್ತೇವೆ ಎಂಬವರು ಹುಷಾರಾಗಿರಬೇಕಿದೆ. ಯಾಕಂದರೆ ನಗರ ಪೊಲೀಸ್ ಸೋಷಿಯಲ್ ಮೀಡಿಯಾ ವಿಂಗ್ ಇಂತಗ ಅಪರಾಧ ಕೃತ್ಯದ ಮೇಲೆ ಕಣ್ಣಿಟ್ಟಿರುತ್ತೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ