ಪ್ರೀತ್ಸೇ ಪ್ರೀತ್ಸೇ ಎಂದು ಯುವಕನ ಬಲಿ ಪಡೆದ ಕನ್ನಡ ಸೀರಿಯಲ್ ನಟಿ
ಬೆಂಗಳೂರಿನಲ್ಲಿ ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವಕನ ತಾಯಿ ದೂರಿನ ಮೇರೆಗೆ ಹುಳಿಮಾವು ಠಾಣೆಯಲ್ಲಿ ಕಿರುತೆರೆ ನಟಿ ವೀಣಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆಕೆಯ ಕಾಟಕ್ಕೆ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಸದ್ಯ ಹುಳಿಮಾವು ಠಾಣೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.
ಬೆಂಗಳೂರು, ಅಕ್ಟೋಬರ್ 02: ಆಕೆ ಸೀರಿಯಲ್ ನಟಿ (serial actress). ಸಣ್ಣ ಪುಟ್ಟ ಜಾಹೀರಾತುಗಳಲ್ಲಿ ನಟನೆ ಮಾಡುತ್ತಿದ್ದಳು. ಬೆಂಗಳೂರಿಗೆ ಬಂದಿದ್ದ ಆಕೆ ಒಂಟಿಯಾಗಿ ಬದುಕು ಕಟ್ಟಿಕೊಂಡಿದ್ದಳು. ಆದರೆ ಆಕೆಯ ಮನೆಯಲ್ಲಿ ಪತ್ತೆಯಾದ ಯುವಕನ ಮೃತದೇಹ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಆಕೆಯ ಕಾಟಕ್ಕೆ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಸದ್ಯ ಮೃತ ಯುವಕನ ತಾಯಿ ದೂರಿನ ಮೇರೆಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ನಟಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.
ಸೀರಿಯಲ್ ನಟಿ ಮೋಹಕ್ಕೆ ಯುವಕ ಆತ್ಮಹತ್ಯೆ
ಪಿಳ್ಳಹಾನಹಳ್ಳಿ ನಿವಾಸಿ ಮದನ್ (25) ಎಂಬಾತ ಇವೆಂಟ್ ಮ್ಯಾನೆಜ್ಮೆಂಟ್ ಕೆಲಸ ಮಾಡಿಕೊಂಡಿದ್ದ. ಇನ್ನೂ ರೀಲ್ಸ್ನಲ್ಲಿ ಸೊಂಟ ಬಳಕಿಸುತ್ತಿದ್ದವಳು ವೀಣಾ. 24 ವರ್ಷ ವಯಸ್ಸಿನಲ್ಲಿ ಕಿರುತೆರೆ ನಟಿಯಾಗಿರುವ ವೀಣಾ, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಜನನಿ’ ಎಂಬ ಧಾರವಾಹಿ ಸೇರಿದಂತೆ ಬೇರೆ ಬೇರೆ ಸೀರಿಯಲ್ನಲ್ಲಿ ನಟಿಸಿದ್ದಳು.
ಇದನ್ನೂ ಓದಿ: ಹಿಂದೂ ಹೆಸರಿಟ್ಟುಕೊಂಡು ದಾವಣಗೆರೆಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳು ಬೆಂಗಳೂರಲ್ಲಿ ಬಂಧನ
ಬೆಂಗಳೂರಿನ ಸಿ.ಕೆ ಪಾಳ್ಯ ರಸ್ತೆಯಲ್ಲಿರುವ ಸಾಯಿ ಸಮೃದ್ಧಿ ಲೇಔಟ್ನಲ್ಲಿರುವ ಮನೆಯಲ್ಲಿ ವೀಣಾ ಒಂಟಿಯಾಗಿ ವಾಸವಿದ್ದಳು. ಹೀಗಿದ್ದವಳಿಗೆ ಒಂದು ವರ್ಷದ ಹಿಂದೆ ಅದ್ಹೇಗೊ ಈ ಮದನ್ ಪರಿಚಯವಾಗಿದೆ. ಅದೇ ಪರಿಚಯ ಸ್ನೇಹವಾಗಿ ಬೆಳೆದಿದ್ದು, ವೀಣಾ, ಮದನ್ನನ್ನ ಪ್ರೀತಿಸುವಂತೆ ಕಿರುಕುಳ ಕೊಟ್ಟು ಆಗಾಗ ಮನೆಗೆ ಬರುವಂತೆ ಒತ್ತಾಯ ಮಾಡುತ್ತಿದ್ದಳಂತೆ. ವೀಣಾ ಎಷ್ಟೇ ಒತ್ತಾಯಿಸಿದ್ರೂ ಮದನ್ ಇಷ್ಟವಿಲ್ಲ ಎಂದು ಹೇಳಿದ್ದ. ಹಾಗಾಗಿ ಮಾನ ಹರಾಜು ಹಾಕ್ತೀನಿ ಎಂದು ವೀಣಾ ಬೆದರಿಕೆ ಹಾಕುತ್ತಿದ್ದಳು. ಮನೆ ಬಳಿ ಬಂದು ರಂಪಾಟ ಮಾಡುತ್ತಿದ್ದಳಂತೆ. ಜೊತೆಗೆ ಬ್ಲೇಡ್ನಿಂದ ಕೈ ಕೊಯ್ದುಕೊಳ್ಳುತ್ತಿದ್ದಳಂತೆ.
ಹೀಗಿರಬೇಕಾದರೆ ನಿನ್ನೆ ಸಂಜೆ ಅಂದರೆ ಅಕ್ಟೋಬರ್ 1 ರಂದು ನಾಲ್ಕು ಗಂಟೆಗೆ ವೀಣಾ, ಮದನ್ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಕುಡಿದು ಮಾನಸಿಕವಾಗಿ ಕಿರುಕುಳ ನೀಡಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಅದೇ ಕಿರುಕುಳಕ್ಕೆ ಬೇಸತ್ತ ಮದನ್ ರೂಮ್ನಲ್ಲಿರುವ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಜಾಸ್ತಿ ಬಾಡಿಗೆ ಹಣ ಕೊಡಲು ನಿರಾಕರಿಸಿದಕ್ಕೆ ಯುವತಿಗೆ ಆಟೋ ಚಾಲಕನಿಂದ ಅವಾಚ್ಯವಾಗಿ ನಿಂದನೆ
ಸ್ಥಳಕ್ಕೆ ಭೇಟಿ ನೀಡಿದ ಹುಳಿಮಾವು ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು, ಬಿಳೇಕಹಳ್ಳಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸದ್ಯ ಮದನ್ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ತನಿಖೆ ಬಳಿಕ ಮದನ್ ಸಾವಿನ ಅಸಲಿ ಕಾರಣ ಗೊತ್ತಾಗಲಿದೆ.
ಮದನ್ ತಾಯಿ ದೂರಿನ ಮೇಲೆ ಎಫ್ಐಆರ್ ದಾಖಲಾಗಿದ್ದರೆ, ಜೊತೆಗೆ ವೀಣಾ ಮೇಲೆ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿದೆ. ಮದನ್ ಎಸ್ಸಿ ಸಮುದಾಯಕ್ಕೆ ಸೇರಿದ್ದು, ವೀಣಾ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾಳೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:04 pm, Wed, 2 October 24