Bengaluru Airport: ಜುಲೈನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ನಲ್ಲೂ ಪ್ರಯಾಣಿಸಬಹುದು!
ಇನ್ನುಮುಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಬಸ್, ಟ್ಯಾಕ್ಸಿ, ಕ್ಯಾಬ್ ಮಾತ್ರವಲ್ಲದೆ ಹೆಲಿಕಾಪ್ಟರ್ ಮೂಲಕವೂ ಹೋಗಬಹುದು. ಈ ಹೆಲಿಕಾಪ್ಟರ್ ಪ್ರಯಾಣಕ್ಕೆ ಒಂದು ಸೈಡ್ಗೆ 4,000 ರೂ. ದರವನ್ನು ನಿಗದಿ ಮಾಡಲಾಗಿದೆ.
ಬೆಂಗಳೂರು: ಇನ್ನುಮುಂದೆ ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಪ್ರಯಾಣಿಸಲು ಹೆಚ್ಚು ಸಮಯ ಬೇಕಾಗಿಲ್ಲ. ಬೆಂಗಳೂರಿನ ಟ್ರಾಫಿಕ್ (Bangalore Traffic) ನಡುವೆ ಏರ್‌ಪೋರ್ಟ್ ತಲುಪಲು ಏನಿಲ್ಲವೆಂದರೂ ಒಂದೂವರೆಯಿಂದ ಎರಡು ಗಂಟೆ ಬೇಕಾಗುತ್ತಿತ್ತು. ಆದರೆ ಮುಂದಿನ ಜುಲೈ ತಿಂಗಳಿನಿಂದ ಈ ಅವಧಿ ಕಡಿಮೆಯಾಗಲಿದೆ. ಹೇಗೆ ಅಂತೀರಾ? ಇನ್ನುಮುಂದೆ ಬೆಂಗಳೂರಿನ ಏರ್‌ಪೋರ್ಟ್‌ಗೆ ಹೋಗುವವರು ಹೆಲಿಕಾಪ್ಟರ್ ಮೂಲಕ ಹೋಗಬಹುದು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ನಿಂದ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಹಳೆ ಎಚ್‌ಎಎಲ್ ಏರ್‌ಪೋರ್ಟ್‌ಗೆ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಹೆಲಿಪೋರ್ಟ್‌ನ ಸೇವೆ ಒದಗಿಸಲು ಬ್ಲೇಡ್ ಇಂಡಿಯಾ ನಿರ್ಧರಿಸಿದೆ. ಈ ಹೆಲಿಕಾಪ್ಟರ್ ಪ್ರಯಾಣಕ್ಕೆ ಒಂದು ಸೈಡ್ಗೆ 4,000 ರೂ. ದರವನ್ನು ನಿಗದಿ ಮಾಡಲಾಗಿದೆ ಎಂದು ಬ್ಲೇಡ್ ಇಂಡಿಯಾ ಕಂಪನಿಯ ವಾಣಿಜ್ಯ ನಿರ್ದೇಶಕ ಪಾಯಲ್ ಸತೀಶ್ ಹೇಳಿದ್ದಾರೆ.
ಸುಮಾರು ಮೂರೂವರೆ ವರ್ಷಗಳ ಹಿಂದೆ ಥಂಬಿ ಏವಿಯೇಷನ್ ಈ ಸೇವೆಯನ್ನು ನಿಲ್ಲಿಸಿದಾಗ ಬೆಂಗಳೂರು ವಿಮಾನ ನಿಲ್ದಾಣದೊಂದಿಗೆ ಹೆಲಿಕಾಪ್ಟರ್ ಸಂಪರ್ಕವನ್ನು ಕಳೆದುಕೊಂಡಿತ್ತು. ಆ ಹೆಲಿಕಾಪ್ಟರ್ ಸೇವೆ ಒದಗಿಸುವುದಕ್ಕೆ ಹಲವಾರು ರೀತಿಯ ಸಮಸ್ಯೆಗಳು ಎದುರಾಗಿದ್ದವು. ವಿಮಾನಗಳ ಹಾರಾಟದಿಂದಾಗಿ ಹೆಲಿಕಾಪ್ಟರ್ ಸಂಚಾರ ಮತ್ತು ನಿರ್ವಹಣೆಗೆ ಅಗತ್ಯವಾದ ಪ್ರೋತ್ಸಾಹದ ಕೊರತೆ ಉಂಟಾಗಿತ್ತು. ಈ ಚಾಪರ್ ಸಂಚಾರಕ್ಕಾಗಿ ದೀರ್ಘಕಾಲದವರೆಗೂ ಕಾಯಬೇಕಾದ ಪರಿಸ್ಥಿತಿಯಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬ್ಲೇಡ್ ಇಂಡಿಯಾ ಸಂಸ್ಥೆಯು ಪ್ರಸ್ತುತ ನಾಲ್ಕು ಚಾಪರ್‌ಗಳನ್ನು ಬಳಸುತ್ತಿದೆ. ಇದು ಮುಂಬೈ ಮತ್ತು ಪುಣೆ, ಅಂಬಿ ವ್ಯಾಲಿ, ಶಿಲ್ಲಿಮ್ ಮತ್ತು ಶಿರಡಿ ನಡುವೆ ಸಂಚಾರ ಮಾಡಲಿದೆ. ಬ್ಲೇಡ್ ಇಂಡಿಯಾ ಕಂಪನಿಯ ಅಮೆರಿಕಾದ ಪಾಲುದಾರ, ಬ್ಲೇಡ್ ಯುಎಸ್, ಡೌನ್‌ಟೌನ್ ಮ್ಯಾನ್‌ಹ್ಯಾಟನ್ ಮತ್ತು ಜೆಎಫ್ಕೆ ಏರ್‌ಪೋರ್ಟ್ ನಡುವೆ ಬ್ಲೇಡ್ ಇಂಡಿಯಾ ಏರ್‌ಪೋರ್ಟ್ ಹೆಲಿಕಾಪ್ಟರ್ ಸೇವೆಯನ್ನು ಕೆಲವು ವರ್ಷಗಳಿಂದ ನಿರ್ವಹಿಸುತ್ತಿದೆ.
ಇದರ ಜೊತೆಗೆ ವಾರದಲ್ಲಿ 6 ಬಾರಿ ಬೆಂಗಳೂರಿನ ಜಕ್ಕೂರು ಏರೋಡ್ರೋಮ್ನಿಂದ ಕೊಡಗು ಅಥವಾ ಕಬಿನಿಗೆ ಹೆಲಿಕಾಪ್ಟರ್ ಟ್ರಿಪ್ ಆಯೋಜಿಸುತ್ತಿದ್ದೇವೆ. ಬೆಂಗಳೂರಿನಿಂದ ಕೊಡಗಿಗೆ ಹೆಲಿಕಾಪ್ಟರ್ನಲ್ಲಿ ಸಂಚರಿಸಲು ಒಂದು ಸೈಡ್ಗೆ 16,000 ರೂ. ತಗುಲುತ್ತದೆ. ಇದೀಗ ನಾವು ಪ್ರಸ್ತಾಪಿಸಿರುವ ಬ್ಲೇಡ್ ಏರ್‌ಪೋರ್ಟ್ ಶಟಲ್ ವಾರದಲ್ಲಿ 5 ದಿನ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಕಾರ್ಯ ನಿರ್ವಹಿಸಲಿದೆ. ಈ ಟ್ರಿಪ್ ಜೊತೆಗೆ ನಾವು ಮೈಸೂರು ಟ್ರಿಪ್ ಅನ್ನು ಕೂಡ ನಾವು ಸೇರಿಸುತ್ತಿದ್ದೇವೆ. ಇದಕ್ಕೆ 12,000 ರೂ. ತಗುಲುತ್ತದೆ ಎಂದು ಪಾಯಲ್ ಸತೀಶ್ ಹೇಳಿದ್ದಾರೆ.
ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ